ADVERTISEMENT

ಮುನಿರಾಜು ವಿರುದ್ಧ ಡಾ.ಕೆ.ಸುಧಾಕರ್ ಬೆಂಬಲಿಗರ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2025, 15:19 IST
Last Updated 1 ಫೆಬ್ರುವರಿ 2025, 15:19 IST
ಡಾ.ಕೆ.ಸುಧಾಕರ್
ಡಾ.ಕೆ.ಸುಧಾಕರ್   

ಬಾಗೇಪಲ್ಲಿ: ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಜಾತಿ ಮತ್ತು ಧರ್ಮಗಳ ನಡುವೆ ದಳ್ಳುರಿ ಮೂಡಿಸಿದ್ದಾರೆ. ಕ್ಷೇತ್ರದಲ್ಲಿ ಶಾಂತಿಯುತವಾಗಿ ಇದ್ದ ಕಾರ್ಯಕರ್ತರ ನಡುವೆ ಜಾತಿಯ ಬೀಜ ಬಿತ್ತಿದ್ದಾರೆ ಎಂದು ಜೆಡಿಎಸ್ ಮುಖಂಡ ಹಾಗೂ ಜಿ.ಪಂ ಮಾಜಿ ಸದಸ್ಯ ಹರಿನಾಥ ರೆಡ್ಡಿ ಆರೋಪಿಸಿದರು.

ಪಟ್ಟಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಜಾತಿ ವಿರುದ್ಧ ಹಾಗೂ ರಾಜಕೀಯವಾಗಿ ಮುನಿರಾಜು ನಿಂದಿಸಿದ್ದಾರೆ. ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು.

ಕ್ಷೇತ್ರದಲ್ಲಿ ಸಂಚರಿಸಿ ಮುನಿರಾಜು ಅವರಿಗೆ ಹೆಚ್ಚು ಮತಗಳು ದೊರೆಯಲು ಶ್ರಮಿಸಿದ್ದೇನೆ. ಲೋಕಸಭಾ ಚುನಾವಣೆಯಲ್ಲಿ ಡಾ.ಕೆ.ಸುಧಾಕರ್ ಅವರ ಗೆಲುವಿಗೆ ಶ್ರಮವಹಿಸಿದ್ದೇವೆ. ಆದರೆ ಸಿ.ಮುನಿರಾಜು, ಸಂಸದ ಡಾ.ಕೆ.ಸುಧಾಕರ್ ಹಾಗೂ ನನ್ನ ಮೇಲೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿದ್ದಾರೆ ಎಂದರು.

ADVERTISEMENT

ಕಳೆದ ಲೋಕಸಭಾ ಚುನಾವಣೆಯಲ್ಲಿ ಸಿ.ಮುನಿರಾಜು, ಡಾ.ಕೆ.ಸುಧಾಕರ್ ವಿರುದ್ಧ ಹೇಳಿಕೆಗಳು ನೀಡಿದ್ದರು. ನಂತರ ಸುಧಾಕರ್ ಜೊತೆಗೂಡಿದರು. ಇದೀಗ ಮತ್ತೆ ಸಿ.ಮುನಿರಾಜು, ಸಂಸದರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ನನ್ನ ಬಗ್ಗೆ, ಜಾತಿಗಳ ಬಗ್ಗೆ ಪ್ರಸ್ತಾಪ ಮಾಡಿದ್ದೀರಿ ಎಂದರು.

ರಾಜ್ಯ ಒಕ್ಕಲಿಗರ ಸಂಘದ ರಾಜ್ಯ ಪ್ರಧಾನಕಾರ್ಯದರ್ಶಿ ಕೋನಪ್ಪರೆಡ್ಡಿ ಮಾತನಾಡಿ, ಕ್ಷೇತ್ರದಲ್ಲಿ ಸಿ.ಮುನಿರಾಜು ಅವಕಾಶ ರಾಜಕಾರಣ ಮಾಡುತ್ತಿದ್ದಾರೆ. ಚುನಾವಣೆಗಳು ಬಂದಾಗ ಬಂದು, ನಂತರ ಖಾಲಿ ಮಾಡಿಕೊಂಡು ಬೆಂಗಳೂರಿನ ಸರ್ಜಾಪುರಕ್ಕೆ ಹೋಗುತ್ತೀರಿ. ಚುನಾವಣೆಯಲ್ಲಿ ಸೋಲಿನ ನಂತರ ಕ್ಷೇತ್ರದಲ್ಲಿನ ಕಾರ್ಯಕರ್ತರ ನೋವುಗಳನ್ನು ಆಲಿಸಿಲ್ಲ. ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದಾಗ, ನಾವೆಲ್ಲರೂ ಒಗ್ಗಟ್ಟಾಗಿ ಶ್ರಮಿಸಿ ಹೆಚ್ಚು ಮತಗಳು ಕೊಡಿಸಿದ್ದೇವೆ ಎಂದು ಹೇಳಿದರು.

ಇದೀಗ ತಮ್ಮ ರಾಜಕೀಯ ಲಾಭಕ್ಕೆ ಒಕ್ಕಲಿಗರ, ಬಲಿಜಿಗರ ನಡುವೆ ಹಾಗೂ ಸಂಸದ ಡಾ.ಕೆ.ಸುಧಾಕರ್, ಹರಿನಾಥರೆಡ್ಡಿ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದೀರಿ ಎಂದರು.

ಯುವ ಜನತಾದಳದ ಅಧ್ಯಕ್ಷ ಎಸ್.ಆರ್.ಲಕ್ಷ್ಮೀನಾರಾಯಣ ಮಾತನಾಡಿ,  ದೊಡ್ಡಬಳ್ಳಾಪುರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಬಲಿಜ ಸಮುದಾಯದವರಿಗೆ ಡಾ.ಸಂಸದ ಡಾ.ಕೆ.ಸುಧಾಕರ್ ಮತ ನೀಡಿ ಆಯ್ಕೆ ಮಾಡಿರುವುದು ಸಿ.ಮುನಿರಾಜು ತಿಳಿದುಕೊಳ್ಳಬೇಕು. ಜಾತಿಗಳ, ಧರ್ಮಗಳ ನಡುವೆ ಮಾತನಾಡುವ ಹೇಳಿಕೆಗಳನ್ನು ಬಿಡಬೇಕು ಎಂದರು.

ಡಿಸಿಸಿ ಬ್ಯಾಂಕಿನ ಮಾಜಿ ನಿರ್ದೇಶಕ ವಿ.ವೆಂಕಟಶಿವಾರೆಡ್ಡಿ, ಪುರಸಭೆ ಸದಸ್ಯ ಎ.ನರಸಿಂಹಮೂರ್ತಿ, ಮುಖಂಡರಾದ ಜಯಪ್ರಕಾಶರೆಡ್ಡಿ, ಸುಧಾಕರರೆಡ್ಡಿ, ಪಿ.ಎ.ನಾಗರಾಜರೆಡ್ಡಿ, ಶ್ರೀನಿವಾಸರೆಡ್ಡಿ, ಸಾಯಿನಾಥರೆಡ್ಡಿ, ವಿನೋದಕುಮಾರ್, ಗಂಗಾಧರ, ವೆಂಕಟರೆಡ್ಡಿ, ವೆಂಕಟರಾಮರೆಡ್ಡಿ ಮತ್ತಿತರರು ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.