ADVERTISEMENT

ಶಿಡ್ಲಘಟ್ಟ: ಕಚ್ಚಾ ರೇಷ್ಮೆ ಮಾರುಕಟ್ಟೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2021, 3:56 IST
Last Updated 6 ಫೆಬ್ರುವರಿ 2021, 3:56 IST
ಶಿಡ್ಲಘಟ್ಟ ತಾಲ್ಲೂಕು ರೇಷ್ಮೆ ನೂಲು ಬಿಚ್ಚಾಣಿಕೆದಾರರ ಸಂಘದ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ರಾಜ್ಯ ರೇಷ್ಮೆ ನೂಲು ಬಿಚ್ಚಾಣಿಕೆದಾರರ ಸಂಘದ ಕಾರ್ಯಾಧ್ಯಕ್ಷ ಮೊಹಮ್ಮದ್ ಅನ್ವರ್ ಮಾತನಾಡಿದರು
ಶಿಡ್ಲಘಟ್ಟ ತಾಲ್ಲೂಕು ರೇಷ್ಮೆ ನೂಲು ಬಿಚ್ಚಾಣಿಕೆದಾರರ ಸಂಘದ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ರಾಜ್ಯ ರೇಷ್ಮೆ ನೂಲು ಬಿಚ್ಚಾಣಿಕೆದಾರರ ಸಂಘದ ಕಾರ್ಯಾಧ್ಯಕ್ಷ ಮೊಹಮ್ಮದ್ ಅನ್ವರ್ ಮಾತನಾಡಿದರು   

ಶಿಡ್ಲಘಟ್ಟ: ‘ರೇಷ್ಮೆ ನೂಲು ಬಿಚ್ಚಾಣಿಕೆದಾರರು ತಯಾರಿಸುವ ರೇಷ್ಮೆಯನ್ನು ಮಾರಲು ಸರ್ಕಾರ ಮಾರುಕಟ್ಟೆಯನ್ನು ಸ್ಥಾಪಿಸಬೇಕು. ಅದರಿಂದ ನಾವುಗಳು ಇ ಬಿಡ್ಡಿಂಗ್ ನಲ್ಲಿ ರೇಷ್ಮೆ ಗೂಡನ್ನು ಖರೀದಿಸಿ, ಇ ಪೇಮೆಂಟ್ ಮಾಡಲು ಅನುಕೂಲವಾಗುತ್ತದೆ’ ಎಂದು ರಾಜ್ಯ ರೇಷ್ಮೆ ನೂಲು ಬಿಚ್ಚಾಣಿಕೆದಾರರ ಸಂಘದ ಕಾರ್ಯಾಧ್ಯಕ್ಷ ಮೊಹಮ್ಮದ್ ಅನ್ವರ್ ಸರ್ಕಾರವನ್ನು ಆಗ್ರಹಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆರೋಗ್ಯವನ್ನು ಪಣಕ್ಕಿಟ್ಟು ರೇಷ್ಮೆ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ರೇಷ್ಮೆ ನೂಲು ಬಿಚ್ಚಾಣಿಕೆದಾರರ ಆರ್ಥಿಕ ಅಭಿವೃದ್ಧಿಗಾಗಿ ಸರ್ಕಾರಗಳು ವ್ಯಾಪಾರ ಮತ್ತು ವಹಿವಾಟಿಗೆ ಅನುಗುಣವಾಗಿ ವಿಶೇಷ ಯೋಜನೆಗಳನ್ನು ರೂಪಿಸಿಲ್ಲ ಎಂದು ದೂರಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಬಜೆಟ್‌ನಲ್ಲಿ ಅನುಮೋದನೆಯಾಗಿದ್ದ ₹166 ಕೋಟಿ ಅನುದಾನವನ್ನು ಜಾರಿಗೊಳಿಸುವಲ್ಲಿ ಇಂದಿನ ಸರ್ಕಾರ ವಿಫಲವಾಗಿದೆ’ ಎಂದು ಆರೋಪಿಸಿದರು.

‘ರಾಜ್ಯದಲ್ಲಿ ರೇಷ್ಮೆ ನೂಲು ಬಿಚ್ಚಾಣಿಕೆದಾರರ ಅಭಿವೃದ್ಧಿಗಾಗಿ ರಚಿಸಿರುವ ಬಸವರಾಜ್ ವರದಿಯ ಶಿಫಾರಸ್ಸುಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಬೇಕು. 6 ಲಕ್ಷ ರೇಷ್ಮೆ ನೂಲು ಬಿಚ್ಚಾಣಿಕೆದಾರರು, ರೇಷ್ಮೆ ಬೆಳೆಗಾರರು, ಹುರಿಕಾರರು ಮತ್ತು ಕೂಲಿ ಕಾರ್ಮಿಕರು ಖಾಸಗಿ ಹಣಕಾಸಿನ ಸಂಸ್ಥೆಗಳ ಮೂಲಕ ಸುಮಾರು ₹15 ಸಾವಿರ ಕೋಟಿ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ರಾಮನಗರದಲ್ಲಿರುವ ವ್ಯವಸ್ಥೆಯನ್ನು ಶಿಡ್ಲಘಟ್ಟ ಮಾರುಕಟ್ಟೆಯಲ್ಲಿ ಸಹ ಜಾರಿಗೊಳಿಸಬೇಕು’ ಒತ್ತಾಯಿಸಿದರು.

ADVERTISEMENT

‘ಮಾರುಕಟ್ಟೆಯಲ್ಲಿ ಇ-ಬಿಡ್ ವ್ಯವಸ್ಥೆಯಲ್ಲಿರುವ ಲೋಪದೋಷಗಳನ್ನು ಸರಿಪಡಿಸದೆ, ರೇಷ್ಮೆ ನೂಲು ಬಿಚ್ಚಾಣಿಕೆದಾರರು ಮತ್ತು ರೇಷ್ಮೆ ಬೆಳೆಗಾರರೊಂದಿಗೆ ಪೂರ್ವ ಸಿದ್ದತೆ ಸಭೆ ನಡೆಸದೇ, ಏಕಾಏಕಿಯಾಗಿ ಇ-ಪೇಮೆಂಟ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಪರೋಕ್ಷವಾಗಿ ರೇಷ್ಮೆ ಉದ್ದಿಮೆಯನ್ನು ಭವಿಷ್ಯದಲ್ಲಿ ಸರ್ವನಾಶ ಮಾಡಲು ಷಡ್ಯಂತ್ರ ನಡೆಸಿದ್ದಾರೆ. ಇ-ಹರಾಜು ಮತ್ತು ಇ-ಪೇಮೆಂಟ್ ವ್ಯವಸ್ಥೆಯಿಂದ ಮಾರುಕಟ್ಟೆಯಲ್ಲಿ ಗೂಡು ಬಾರದೆ ಎಲ್ಲರೂ ಸಂಕಷ್ಟದಲ್ಲಿ ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದರು.

‘ಇ-ಪೇಮೆಂಟ್ ವ್ಯವಸ್ಥೆಯಲ್ಲಿ ಇರುವ ಲೋಪದೋಷಗಳನ್ನು ಸರಿಪಡಿಸಬೇಕು. ಮಾರುಕಟ್ಟೆಯಲ್ಲಿ ರೇಷ್ಮೆ ನೂಲು ಬಿಚ್ಚಾಣಿಕೆದಾರರು ರೇಷ್ಮೆ ಬೆಳೆಗಾರರು ಮತ್ತು ಅಧಿಕಾರಿಗಳು ಹೊರತುಪಡಿಸಿ ಬೇರೆಯವರ ಪ್ರವೇಶವನ್ನು ನಿರ್ಬಂಧಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದರು.

ಫೆಡರೇಷನ್‌ನ ಮಾಜಿ ಉಪಾಧ್ಯಕ್ಷ ಜಿ.ರೆಹಮಾನ್, ರೇಷ್ಮೆ ನೂಲು ಬಿಚ್ಚಾಣಿಕೆದಾರರ ಸಂಘದ ಹಿರಿಯ ಮುಖಂಡ ಮೇಲೂರು ಅಜೀಜ್, ರಾಜ್ಯ ರೀಲರುಗಳ ಸಂಘದ ಉಪಾಧ್ಯಕ್ಷ ರಾಮಕೃಷ್ಣ, ತಾಲ್ಲೂಕು ರೇಷ್ಮೆ ನೂಲು ಬಿಚ್ಚಾಣಿಕೆದಾರರ ಸಂಘದ ಅಧ್ಯಕ್ಷ ಅನ್ಸರ್‌ಖಾನ್, ಉಪಾಧ್ಯಕ್ಷ ಆನಂದ್, ಖಜಾಂಚಿ ಕೆವಿ ಮಂಜುನಾಥ್, ಸಿಎಂ ಬಾಬು, ಸನಾವುಲ್ಲಾ, ಮುಸ್ತಕೀಂ, ಮುನಿಕೃಷ್ಣ, ಬಾಷಾ, ವಿಜಯಪುರ ತಾಲ್ಲೂಕು ರೀಲರುಗಳ ಸಂಘದ ಅಧ್ಯಕ್ಷ ಸಾದಿಕ್‌ಪಾಷ, ಸಿಲ್ಕ್ ಸೊಸೈಟಿಯ ಅಧ್ಯಕ್ಷ ಆರ್ ಕಲೀಂ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.