ADVERTISEMENT

ಮಾದರಿ‌ಯಾದ ವರುಣನ ಹೈನುಗಾರಿಕೆ: ಎಂಜಿನಿಯರಿಂಗ್ ಪದವೀಧರನ ಯಶೋಗಾಥೆ

ಎಂಜಿನಿಯರಿಂಗ್ ಪದವೀಧರನ ಯಶೋಗಾಥೆ: ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಹಾಲು ಉತ್ಪಾದನೆ

ಡಿ.ಎಂ.ಕುರ್ಕೆ ಪ್ರಶಾಂತ
Published 2 ಜನವರಿ 2022, 4:20 IST
Last Updated 2 ಜನವರಿ 2022, 4:20 IST
ಹಸುಗಳಿಗೆ ಆಹಾರವಿಡುತ್ತಿರುವ ವರುಣ್
ಹಸುಗಳಿಗೆ ಆಹಾರವಿಡುತ್ತಿರುವ ವರುಣ್   

ಚಿಕ್ಕಬಳ್ಳಾಪುರ:ನಮ್ಮ ಕುಟುಂಬವನ್ನು ಪೊರೆದಿದ್ದು ಮತ್ತು ನಾವು ಈ ಮಟ್ಟಕ್ಕೆ ಬಂದಿದ್ದೇವೆ ಎಂದರೆ ಅದಕ್ಕೆ ಹೈನುಗಾರಿಕೆಯೇ ಕಾರಣ–ಇದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ಎದುರು ಹೈನುಗಾರಿಕೆಯಲ್ಲಿ ತೊಡಗಿರುವ ವರುಣ್ ಅವರ ನುಡಿ. ಸಮೀಪದ ಪಟ್ರೇನಹಳ್ಳಿ ವರುಣ್ ಅವರ ಸ್ವಗ್ರಾಮ.

ವರುಣ್ ಅವರ ತಂದೆ ರಾಜಗೋಪಾಲ್, ಹೈನುಗಾರಿಕೆಯ ಕಾರಣದಿಂದಲೇ ಚಿರಪರಿಚಿತರು. ಹಮಾಲಿ ವೃತ್ತಿ ಮಾಡುತ್ತಿದ್ದ ಅವರು ಹೈನುಗಾರಿಕೆಯಲ್ಲಿ ತೊಡಗಿದರು. ಒಂದು ಸೀಮೆ ಹಸುವಿನಿಂದ ಆರಂಭವಾದ ಹೈನುಗಾರಿಕೆಯನ್ನು 10ಕ್ಕೆ ಹೆಚ್ಚಿಸಿದರು.

ಈಗ ರಾಜಗೋಪಾಲ್ ಅವರ ಹೈನುಗಾರಿಕೆ ಉದ್ಯಮ ಎನ್ನುವ ಮಟ್ಟಕ್ಕೆ ಬೆಳೆದಿದೆ. ಅದಕ್ಕೆ ಕಾರಣ ಅವರ ಪುತ್ರ ವರುಣ್. ತಮ್ಮ ತಂದೆ ಸಾಕುತ್ತಿದ್ದ ಸೀಮೆಹಸುಗಳ ಜವಾಬ್ದಾರಿಯನ್ನು ತಾವು ವಹಿಸಿಕೊಂಡಿದ್ದಾರೆ. ಆ ನಂತರ ರಾಸುಗಳ ಸಂಖ್ಯೆಯನ್ನು 50ಕ್ಕೆ ಹೆಚ್ಚಿಸಿದ್ದಾರೆ. ವಿಶೇಷ ಎಂದರೆ ವರುಣ್, ಸಿವಿಲ್ ಎಂಜಿನಿಯರಿಂಗ್ ಪ‍ದವೀಧರ.

ADVERTISEMENT

ಸಿವಿಲ್ ಎಂಜಿನಿಯರಿಂಗ್ ಪದವೀಧರರು ಸರ್ಕಾರಿ ಉದ್ಯೋಗ ಇಲ್ಲವೆ ಖಾಸಗಿ ಕಂಪನಿಗಳತ್ತ ಮುಖಮಾಡುದೇ ಹೆಚ್ಚು. ಈ ಕೃಷಿ, ಹೈನುಗಾರಿಕೆಯ ಜಂಜಡವೇ ಬೇಡ ಎನ್ನುವ ಮನಸ್ಥಿತಿ ಬಹಳಷ್ಟು ಮಂದಿಗಿದೆ. ಆದರೆ ವರುಣ್ ಇದಕ್ಕೆ ಅಪವಾದ.ಜಿಲ್ಲೆಯಲ್ಲಿಯೇ ಸರ್ಕಾರಿ ಡೇರಿಗೆ ಅತಿ ಹೆಚ್ಚು ಹಾಲು ಪೂರೈಸುವ ಹೆಗ್ಗಳಿಕೆ ಹೊಂದಿದ್ದಾರೆ.

ಈ ಹೆಗ್ಗಳಿಕೆಯ ಹಿಂದೆ ಅವರ ಪರಿಶ್ರಮ ಅಪಾರವಾಗಿಯೇ ಇದೆ.ಬೆಳಿಗ್ಗೆ ನಾಲ್ಕು ಗಂಟೆಯಿಂದಲೇ ವರುಣ್ ದಿನಚರಿ ಆರಂಭ. ಹಸುಗಳಿಗೆ ಬೆಳಿಗ್ಗೆ ಮತ್ತು ಸಂಜೆ ಬೂಸ, ಇಂಡಿ, ಮೇವು, ಮುಸುರೆ ನೀಡಿ ಹಾಲು ಕರೆದು ಡೇರಿಗೆ ಹಾಕುವರು. ದಿನದ ಬಹುಪಾಲು ಸಮಯ ಕಳೆಯುವುದು ಹೈನುಗಾರಿಯಲ್ಲಿಯೇ.‌

ಪಟ್ರೇನಹಳ್ಳಿ ಡೇರಿಯಿಂದ ಅವರು ತಿಂಗಳಿಗೆ ಎರಡರಿಂದ ಎರಡೂವರೆ ಲಕ್ಷ ಬಿಲ್ ಪಡೆಯುವರು. ‌ವರುಣ್ ಹೇಳುವಂತೆ, ಈ ಹಣದಲ್ಲಿ ಅವರಿಗೆ ದೊರೆಯುವ ನಿವ್ವಳ ಆದಾಯ ಒಂದರಿಂದ ಒಂದೂಕಾಲು ಲಕ್ಷ. ಅಲ್ಲದೆ ವರ್ಷಕ್ಕೆ ಕನಿಷ್ಠ 10ರಿಂದ 15 ಹಸುಗಳನ್ನೂ ಮಾರಾಟ ಮಾಡುತ್ತಾರೆ. ಹಸುಗಳ ಮಾರಾಟದಿಂದಲೇ ಒಳ್ಳೆಯ ಆದಾಯ ಪಡೆಯುತ್ತಿದ್ದಾರೆ.

ವರುಣ್ ಅವರ ಹೈನುಗಾರಿಕೆಗೆ, ಅವರ ತಂದೆ ರಾಜಗೋಪಾಲ್, ತಾಯಿ ರಾಧಮ್ಮ ಸಹ ಕೈಜೋಡಿಸುವರು. ಸಹೋದರ ಕಿರಣ್ ಸಹ ಒಮ್ಮೊಮ್ಮೆ ಕೆಲಸಗಳನ್ನು ಹಂಚಿಕೊಳ್ಳುವರು. ನಿತ್ಯ ರಾಸುಗಳಿಗೆ 500 ಕೆ.ಜಿ ಆಹಾರವನ್ನು ನೀಡುವರು. ಆಂಧ್ರ ಸೇರಿದಂತೆ ವಿವಿಧ ಕಡೆಗಳಿಂದ ಪಶು ಆಹಾರವನ್ನು ತರಿಸುವರು. ಸಣ್ಣ ಶೆಡ್‌ನಲ್ಲಿ ನಡೆಯುತ್ತಿರುವ ಅವರ ಹೈನುಗಾರಿಕೆ ಅವರ ಕುಟುಂಬವನ್ನು ಆರ್ಥಿಕವಾಗಿ ಸದೃಢಗೊಳಿಸಿದೆ.

ಬೆಳಿಗ್ಗೆ ಮತ್ತು ಸಂಜೆಯ ವೇಳೆ ವರುಣ್ ಯಾವುದೇ ಕರೆಗಳನ್ನು ಸ್ವೀಕರಿಸುವುದಿಲ್ಲ. ಅಷ್ಟು ಕೆಲಸದಲ್ಲಿ ಬ್ಯುಸಿ. ಹಾಲು ಕರೆಯಲು ಮಿಷನ್‌ಗಳ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಈಗ 20ಕ್ಕೂ ಹೆಚ್ಚು ಹಸುಗಳು ಹಾಲುಕೊಡುತ್ತಿವೆ.

ಕೃಷಿ, ಹೈನುಗಾರಿಕೆಯನ್ನು ಮನಸ್ಸಿಟ್ಟು ಮಾಡಿದರೆ ಲಾಭ ಎನ್ನುವ ಅನುಭವದ ಮಾತು ಅವರದ್ದು. ಹೈನುಗಾರಿಕೆ ಪ್ರಧಾನವಾಗಿದ್ದರೂ ಕೊಟ್ಟಿಗೆಯಲ್ಲಿಯೇ 20ಕ್ಕೂ ಹೆಚ್ಚು ಮೇಕೆಗಳು, 50ಕ್ಕೂ ಹೆಚ್ಚು ನಾಟಿ ಕೋಳಿಗಳನ್ನು ಸಾಕಿದ್ದಾರೆ. ಇವೆಲ್ಲವೂ ಅವರಿಗೆ ಆರ್ಥಿಕ ಬಲವನ್ನು ಹೆಚ್ಚಿಸಿದೆ.

ಇಷ್ಟೆಲ್ಲಾ ಚಟುವಟಿಕೆಗೆ ಅವರು ಅವಲಂಬಿಸಿರುವುದು ಕೇವಲ 17 ಗುಂಟೆ ಜಾಗ. ಇಲ್ಲಿಯೇ ಅವರ ಶೆಡ್, ಮನೆ, ಹಸುಗಳ ಸಾಕಾಣಿಕೆ ನಡೆಯುತ್ತದೆ. ಚಿಕ್ಕಜಾಗವನ್ನು ಚೊಕ್ಕದಾಗಿ ಬಳಸಿಕೊಂಡು ಮತ್ತು ಶ್ರದ್ಧೆಯಿಂದ ಹೈನುಗಾರಿಕೆ ಮಾಡಿ ಒಳ್ಳೆಯ ಲಾಭವನ್ನು ಹೇಗೆ ಪಡೆಯಬೇಕು ಎನ್ನುವುದಕ್ಕೆ ಮಾದರಿಯಾಗಿದ್ದಾರೆ ವರುಣ್.

ತಂದೆಯೇ ಆದರ್ಶ

ನನಗೆ ನಮ್ಮ ತಂದೆಯೇ ಆದರ್ಶ. ಅವರು ಜೀವನದಲ್ಲಿ ಬಹಳ ಕಷ್ಟಪಟ್ಟರು. ಅದನ್ನು ಕಣ್ಣಾರೆ ಕಂಡಿದ್ದೇನೆ. ಎಂಜಿನಿಯರಿಂಗ್ ಪದವಿ ನಂತರ ಬೇರೆ ಕಡೆ ಕೆಲಸ ಹುಡುಕುವುದಕ್ಕಿಂತ ನಮ್ಮ ತಂದೆಯವರು ಮಾಡುತ್ತಿದ್ದ ಹೈನುಗಾರಿಕೆಯನ್ನೇ ದೊಡ್ಡ ಮಟ್ಟದಲ್ಲಿ ಬೆಳೆಸಬೇಕು ಎನಿಸಿತು. ಇಲ್ಲಿಯೂ ಮನಸ್ಸಿಟ್ಟು ದುಡಿದರೆ ಒಳ್ಳೆಯ ಸಂಪಾದನೆ ಇದೆ ಎಂದು ವರುಣ್ ‘ಪ್ರಜಾವಾಣಿ’ಗೆ ತಿಳಿಸುವರು.

ರಾಸುಗಳ ಮಾರಾಟ ಮತ್ತು ಹಾಲಿನ ಮಾರಾಟದಿಂದ ಒಳ್ಳೆಯ ಆದಾಯ ದೊರೆಯುತ್ತದೆ. ಸಗಣಿ ಸಹ ಮಾರಾಟ ಮಾಡುತ್ತೇವೆ. ಅದು ಮೇವು ಖರೀದಿಗೆ ಮಾಡಿದ ವೆಚ್ಚಕ್ಕೆ ಸಮ ಆಗುತ್ತದೆ. ನಮ್ಮ ಮನೆಯಲ್ಲಿ ಜನಿಸುವ ಹೆಣ್ಣು ಕರುಗಳನ್ನು ಚೆನ್ನಾಗಿ ಬೆಳೆಸುತ್ತೇವೆ. ಕೆಲವನ್ನು ನಾವು ಇಟ್ಟುಕೊಳ್ಳುತ್ತೇವೆ. ಮತ್ತೆ ಕೆಲವು ಉತ್ತಮ ತಳಿಯ ರಾಸುಗಳನ್ನು ಮಾರಾಟ ಮಾಡುತ್ತೇವೆ. ಇತ್ತೀಚೆಗೆ ಒಂದು ಹಸುವನ್ನು ಬೆಂಗಳೂರಿಗೆ ₹ 2 ಲಕ್ಷಕ್ಕೆ ಮಾರಾಟ ಮಾಡಿದ್ದೇವೆ ಎಂದು ಹೇಳಿದರು.

ಮನೆಯ ಎಲ್ಲರೂ ಈ ಕ್ಷೇತ್ರದಲ್ಲಿ ದುಡಿಯುತ್ತೇವೆ. ಎಲ್ಲ ಕೆಲಸಗಳನ್ನು ನಾವೇ ಮಾಡುವುದರಿಂದ ಹೊರಗಿನವರ ಅವಲಂಬನೆ ಇಲ್ಲ ಎಂದರು.

ಪರಿಶ್ರಮ ಬಹಳಷ್ಟಿದೆ: ದೊಡ್ಡ ಪ್ರಮಾಣದಲ್ಲಿ ಗುಣಮಟ್ಟದ ಹಾಲು ಉತ್ಪಾದಿಸುವರು. ಈ ಉತ್ಪಾದನೆಯ ಹಿಂದೆ ಬಹಳಷ್ಟು ಶ್ರಮವಿದೆ. ಅವರ ಇಡೀ ಕುಟುಂಬವೇ ಹೈನುಗಾರಿಕೆಯಲ್ಲಿ ದುಡಿಯುತ್ತಿದೆ. ಒಳ್ಳೆಯ ಆದಾಯ ಪಡೆಯುತ್ತಾರೆ ಎಂದರೆ ಅದರ ಹಿಂದೆ ಹೆಚ್ಚಿನ ಶ್ರಮ ಇದ್ದೇ ಇರುತ್ತದೆ ಎಂದು ಪಟ್ರೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಹಾಲು ಮಾಪಕ ಚಿಕ್ಕಯಲ್ಲಪ್ಪ ತಿಳಿಸಿದರು.

ನನ್ನ ಮಗ ಮಾದರಿ: ನನ್ನ ಮಗ ಇತರರಿಗೆ ಮಾದರಿ ಆಗುವ ರೀತಿಯಲ್ಲಿ ಹೈನುಗಾರಿಕೆಯಲ್ಲಿ ತೊಡಗಿದ್ದಾನೆ. ಎಂಜಿನಿಯರಿಂಗ್ ಓದಿಸಿದೆ. ನಾನು ಐದು ಹಸು ಸಾಕಿದ್ದೆ. ನಾನೂ ಇದೇ ಕೆಲಸ ಮಾಡುತ್ತೇನೆ ಎಂದು ಹೇಳಿದ. ಈಗ 50 ಹಸುಗಳಿಗೆ ಹೆಚ್ಚಿಸಿದ್ದಾನೆ. ನಾವು ಅವನಿಗೆ ಬೆಂಬಲವಾಗಿದ್ದೇವೆ. ನಾನು ಮಾಡುತ್ತಿದ್ದ ಕೆಲಸದ ಜವಾಬ್ದಾರಿಯನ್ನು ಪೂರ್ಣವಾಗಿ ಅವನು ತೆಗೆದುಕೊಂಡಿದ್ದಾನೆ ಎಂದು ವರುಣ್ ತಂದೆ ರಾಜಗೋಪಾಲ್ ತಿಳಿಸುವರು.

ಪುತ್ರನಿಗೆ ಬೆಂಬಲ: ನೀವು ಕಷ್ಟಪಡುತ್ತಿದ್ದೀರಿ ನಾನೂ ನಿಮ್ಮ ಜತೆ ಕೆಲಸ ಮಾಡುವೆ ಎಂದು ವರುಣ್ ನಮ್ಮ ಜತೆಯಾದ. ಆ ನಂತರ ಮತ್ತಷ್ಟು ಬೆಳೆಸಿದ. ನಾವು ಮಗನಿಗೆ ಬೆಂಬಲ ಕೊಡುತ್ತೇವೆ. ಮತ್ತೊಬ್ಬ ಮಗ ಕಿರಣ್ ಪಶು ಆಹಾರದ ವ್ಯಾಪಾರ ಮಾಡುತ್ತಾನೆ. ಹೈನುಗಾರಿಕೆಯೇ ನಮ್ಮ ಕುಟುಂಬವನ್ನು ಆರ್ಥಿಕವಾಗಿ ಬೆಳೆಸಿದೆ ಎಂದು ವರುಣ್ ತಾಯಿ ರಾಧಮ್ಮ ನುಡಿಯುವರು.

ವಿಡಿಯೊ ನೋಡಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.