ADVERTISEMENT

ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್‌ ಇಲ್ಲ

ಚಿಕ್ಕಬಳ್ಳಾಪುರದಲ್ಲಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2020, 15:00 IST
Last Updated 3 ಜುಲೈ 2020, 15:00 IST
ಡಾ.ಸಿ.ಎನ್.ಅಶ್ವತ್ಥನಾರಾಯಣ್
ಡಾ.ಸಿ.ಎನ್.ಅಶ್ವತ್ಥನಾರಾಯಣ್   

ಚಿಕ್ಕಬಳ್ಳಾಪುರ: ‘ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್‌ ಜಾರಿಗೊಳಿಸುವುದಿಲ್ಲ. ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಶುಚಿತ್ವ ಮತ್ತು ಅಂತರ ಕಾಪಾಡಿಕೊಳ್ಳುವುದರಿಂದ ಪರಿಣಾಮಕಾರಿಯಾಗಿ ಕೋವಿಡ್‌ ನಿಯಂತ್ರಿಸಬಹುದಾಗಿದೆ’ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಹೇಳಿದರು.

ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮಕ್ಕೆ ಶುಕ್ರವಾರ ಸಂಜೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಲಾಕ್‌ಡೌನ್‌ನಿಂದ ನಾವು ಕೊರೊನಾ ಸೋಂಕು ಹರಡುವುದನ್ನು ಮುಂದೂಡಬಹುದೇ ವಿನಾ ನಿಯಂತ್ರಿಸಲು ಆಗದು. ಈ ಹಿಂದೆ ಅಗತ್ಯವಿದ್ದಾಗ ಮಾಡಿದ್ದೇವೆ. ಹೀಗಾಗಿ, ಈಗ ಲಾಕ್‌ಡೌನ್‌ ಅಗತ್ಯವಿಲ್ಲ. ಒಂದೊಮ್ಮೆ ಮಾಡಿದರೆ ಆರ್ಥಿಕ ಮುಗ್ಗಟ್ಟು ಎದುರಾಗುತ್ತದೆ’ ಎಂದು ತಿಳಿಸಿದರು.

ADVERTISEMENT

‘ರಾಜ್ಯ ಸರ್ಕಾರ ಕೋವಿಡ್‌ ನಿಯಂತ್ರಣಕ್ಕೆ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ. ಇತ್ತೀಚೆಗೆ ಏಕಾಏಕಿ ಪ್ರಕರಣಗಳ ಸಂಖ್ಯೆ ಹೆಚ್ಚಿದ ಕಾರಣಕ್ಕೆ ಕೆಲವೆಡೆ ಸಮಸ್ಯೆಗಳು ಉಂಟಾಗಿರಬಹುದು. ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ನಡೆಯುತ್ತಿದೆ’ ಎಂದರು.

‘ಕೋವಿಡ್ ಸೋಂಕಿತರಿಗೆ ಇನ್ನು ಮುಂದೆ ಮನೆಯಲ್ಲಿ ಚಿಕಿತ್ಸೆ ನೀಡುವ ಕೆಲಸ ಮಾಡಲಾಗುತ್ತದೆ. ಅದಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಾರ್ಗಸೂಚಿ ಹೊರಡಿಸಲಾಗಿದೆ. ಆರೋಗ್ಯ ಹದಗೆಟ್ಟವರಿಗೆ ಮಾತ್ರ ಕೋವಿಡ್‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ’ ಎಂದು ಹೇಳಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್‌ 19 ಜತೆಗೆ ಚೀನಾ, ಪಾಕಿಸ್ತಾನದಂತಹ ದೇಶದ್ರೋಹಿ ರಾಷ್ಟ್ರಗಳನ್ನು ಎದುರಿಸುತ್ತಿದ್ದಾರೆ. ದೇಶ ಈವರೆಗೆ ಅಂತಹ ದಿಟ್ಟ ನಾಯಕನನ್ನು ನೋಡಿರಲಿಲ್ಲ. ಹೀಗಾಗಿ, ಸಿದ್ದರಾಮಯ್ಯ ಅವರು ಮೋದಿ ಅವರ ಬಗ್ಗೆ ಟೀಕೆ ಮಾಡುವ ಬದಲು ಅಭಿಮಾನ ಪಡಲಿ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.