
ಚಿಕ್ಕಬಳ್ಳಾಪುರ: ಮತದಾರರ ಪಟ್ಟಿಯನ್ನು ಕಾಲಕಾಲಕ್ಕೆ ಪರಿಷ್ಕರಣೆ ಮಾಡಿದರೆ ಯಾರದು ಯಾವುದೇ ತಕರಾರು ಇಲ್ಲ. ಆದರೆ ಈಗ ಮತಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಮತವನ್ನೇ ಕಿತ್ತುಕೊಳ್ಳುವ ಹುನ್ನಾರ ನಡೆಯುತ್ತಿದೆ ಎಂದು ಚಿಂತಕ ಶಿವಸುಂದರ್ ಆತಂಕ ವ್ಯಕ್ತಪಡಿಸಿದರು.
ನಗರದಲ್ಲಿ ದಲಿತ ಸಂಘರ್ಷ ಸಮಿತಿಯು ಶುಕ್ರವಾರ ಹಮ್ಮಿಕೊಂಡಿದ್ದ ‘ಮತಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಪ್ರಭುತ್ವದ ಹುನ್ನಾರಗಳು ಹಾಗೂ ಸಂವಿಧಾನದ ಜಾಗೃತಿ ಅಭಿಯಾನ’ದ ಸಂವಾದ, ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಎಸ್‌ಐಆರ್‌ನಲ್ಲಿ ಸರ್ಕಾರ ಕೇಳಿದ ದಾಖಲೆಗಳು ಕೊಡಲಿಲ್ಲ ಎಂದರೆ ಸಾವಿರಾರು ವರ್ಷದಿಂದ ಇಲ್ಲಿ ಬದುಕಿದ್ದರೂ ಅವರು ಭಾರತೀಯರಲ್ಲ. ಇಲ್ಲಿಯೇ ಹುಟ್ಟಿದ್ದೇವೆ, ನಾವು ಭಾರತೀಯರು ಎಂದರೂ ಸರ್ಕಾರ ಕೇಳಿದ 11 ದಾಖಲೆಗಳ ಮೂಲಕ ಇದನ್ನು ಸಾಬೀತು ಮಾಡಬೇಕು. ಇಲ್ಲದಿದ್ದರೆ ಬಿಎಲ್‌ಒ, ‘ನೀವು ಭಾರತೀಯರಲ್ಲ, ಅನುಮಾನಾಸ್ಪದ’ ಬರೆಯುವರು ಎಂದರು.
ಈ ದೇಶದಲ್ಲಿ ಹುಟ್ಟಿದ ಎಲ್ಲರೂ ಭಾರತೀಯರೇ. ಭಾರತೀಯರು ಎಂದಾದ ಮೇಲೆ ಸಂವಿಧಾನ ನಮಗೆ ಸುಮಾರು ಹಕ್ಕುಗಳನ್ನು ಕೊಟ್ಟಿದೆ ಎಂದರು.
ಬಾಂಗ್ಲಾದೇಶ, ಪಾಕಿಸ್ತಾನದಿಂದ ಕೋಟ್ಯಂತರ ಮುಸ್ಲಿಮರು ದೇಶಕ್ಕೆ ಬಂದಿದ್ದಾರೆ. ಆದ ಕಾರಣ ವಿಶೇಷ ಪರಿಷ್ಕರಣೆ ಮಾಡಲಾಗುತ್ತಿದೆ ಎಂದು ಸುಪ್ರೀಂಕೋರ್ಟ್‌ಗೆ ಚುನಾವಣಾ ಆಯೋಗ ಹೇಳಿದೆ. ವಿದೇಶಿ ನಾಗರಿಕರನ್ನು ಪತ್ತೆ ಹಚ್ಚಲು ಎಸ್‌ಐಆರ್ ನಡೆಸುತ್ತಿದ್ದೇವೆ ಎಂದಿದೆ. ಬಿಹಾರ, ಪಶ್ಚಿಮ ಬಂಗಾಳದಿಂದ ಇಲ್ಲಿಗೆ ಕೆಲಸ ಮಾಡಲು ಬಂದವರು ಇದ್ದಾರೆ. ಇವರೆಲ್ಲರೂ ಭಾರತೀಯರೇ ಆಗಿದ್ದಾರೆ. ಆದರೆ ಹಿಂದೂ, ಮುಸ್ಲಿಮ ಎಂದು ಎಸ್‌ಐಆರ್ ಮೂಲಕ ಮತದ ಹಕ್ಕನ್ನು ಕಿತ್ತುಕೊಳ್ಳಲು ಸರ್ಕಾರ ಮುಂದಾಗಿದೆ ಎಂದು ದೂರಿದರು.
ಬ್ರಿಟಿಷರ ಆಡಳಿತದಲ್ಲಿ ಆದಾಯ ತೆರಿಗೆ ಪಾವತಿಸುವವರಿಗೆ ಮಾತ್ರ ಮತದ ಹಕ್ಕು ಎನ್ನುವಂತೆ ಇತ್ತು. ಬಡವರು, ಮಹಿಳೆಯರಿಗೆ ಹಕ್ಕು ನಿರಾಕರಿಸಲಾಗಿತ್ತು. ಬಿ.ಆರ್.ಅಂಬೇಡ್ಕರ್ ಅವರು ಸ್ವತಂತ್ರ ಭಾರತದಲ್ಲಿ ಎಲ್ಲರಿಗೂ ಮತದ ಹಕ್ಕು ಸಿಗಬೇಕು ಎಂದು ಹೋರಾಟ ನಡೆಸಿದರು ಎಂದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎನ್.ವೆಂಕಟೇಶ್, ದಸಂಸ ಮುಖಂಡರಾದ ಕೆ.ಸಿ.ರಾಜಾಕಾಂತ್, ಗಂಗಪ್ಪ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.