ADVERTISEMENT

ಶಾಂತಿ, ಸಾಮರಸ್ಯ ಕಾಪಾಡುವಲ್ಲಿ ಪೊಲೀಸರ ಶ್ರಮ ಅಪಾರ: ಬೈರಪ್ಪ ಶಿವಲಿಂಗ ನಾಯಿಕ

ಪೊಲೀಸ್ ಹುತಾತ್ಮರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2021, 3:24 IST
Last Updated 22 ಅಕ್ಟೋಬರ್ 2021, 3:24 IST
ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಶಿವಶಂಕರ್, ಎಸ್‌ಪಿ ಜಿ.ಕೆ. ಮಿಥುನ್ ಕುಮಾರ್, ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಬೈರಪ್ಪ ಶಿವಲಿಂಗ ನಾಯಿಕ, ಜಿಲ್ಲಾಧಿಕಾರಿ ಆರ್. ಲತಾ, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್. ಅಮರೇಶ್ ಪಾಲ್ಗೊಂಡಿದ್ದರು
ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಶಿವಶಂಕರ್, ಎಸ್‌ಪಿ ಜಿ.ಕೆ. ಮಿಥುನ್ ಕುಮಾರ್, ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಬೈರಪ್ಪ ಶಿವಲಿಂಗ ನಾಯಿಕ, ಜಿಲ್ಲಾಧಿಕಾರಿ ಆರ್. ಲತಾ, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್. ಅಮರೇಶ್ ಪಾಲ್ಗೊಂಡಿದ್ದರು   

ಚಿಕ್ಕಬಳ್ಳಾಪುರ: ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯ ನೆಲೆಗೊಳ್ಳುವ ವಿಚಾರದಲ್ಲಿ ಪೊಲೀಸರ ಶ್ರಮ ಅಪಾರವಾದುದು ಎಂದು ಜಿಲ್ಲಾ ಸೆಷನ್ಸ್ ನ್ಯಾಯಾಧೀಶ‌ ಬೈರಪ್ಪ ಶಿವಲಿಂಗ ನಾಯಿಕ ನುಡಿದರು.

ಜಿಲ್ಲಾ ಪೊಲೀಸ್ ಕಚೇರಿಯ ಕವಾಯತು ಮೈದಾನದಲ್ಲಿ ಗುರುವಾರ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಸಮಾಜದಲ್ಲಿ ಅಪರಾಧ ಚಟುವಟಿಕೆಗಳ ನಿಯಂತ್ರಣ, ಸಾಮರಸ್ಯ ಹಾಗೂ ಶಾಂತಿ ಕಾಪಾಡಲು ಪೊಲೀಸರು ಶ್ರಮಿಸುತ್ತಿದ್ದಾರೆ. ತನ್ನ ಪ್ರಾಣವನ್ನು ಲೆಕ್ಕಿಸದೆ ಕರ್ತವ್ಯದಲ್ಲಿ ತೊಡಗುತ್ತಿದ್ದಾರೆ. ಪೊಲೀಸರ ನಡೆದ ಸಮಾಜಕ್ಕೆ ಮಾದರಿ ಮತ್ತು ಆದರ್ಶಯುತವಾದುದು ಎಂದು ಹೇಳಿದರು.

ADVERTISEMENT

ಹುತಾತ್ಮ ಪೊಲೀಸರ ಕೆಲಸ ಕಾರ್ಯಗಳನ್ನು ಸ್ಮರಿಸುವುದು ಉತ್ತಮವಾದುದು. ಗಡಿ ಭಾಗದಲ್ಲಿ ಸೇನೆಯಿಂದ ದೇಶದ ರಕ್ಷಣೆ ಆಗುತ್ತಿದೆ. ಪೊಲೀಸರು ತಮ್ಮ ಜೀವವನ್ನೇ ಪಣಕ್ಕಿಟ್ಟು ಕಾನೂನು ಸುವ್ಯವಸ್ಥೆ ನಿಭಾಯಿಸುವಲ್ಲಿ ತೊಡಗಿದ್ದಾರೆ. ದೇಶದ ಆಂತರಿಕ ಭದ್ರತೆ ಹಾಗೂ ಶಾಂತಿಪಾಲನೆಗೆ ತಮ್ಮ ಪ್ರಾಣ ತ್ಯಾಗ ಮಾಡಿದ ಪೊಲೀಸರನ್ನು ಸ್ಮರಿಸುವ ದಿನ ಇದು ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಮಾತನಾಡಿ, ಕಳೆದ ಒಂದು ವರ್ಷದ ಅವಧಿಯಲ್ಲಿ ದೇಶದಲ್ಲಿ 377 ಹಾಗೂ ಕರ್ನಾಟಕದಲ್ಲಿ 16 ಪೊಲೀಸರು ಕರ್ತವ್ಯ ಸಮಯದಲ್ಲಿ ಹುತಾತ್ಮರಾಗಿದ್ದಾರೆ ಎಂದು ತಿಳಿಸಿದರು.

ಕಾನೂನು ಪಾಲನೆ, ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಇಲಾಖೆ ಮಹತ್ವದ ಪಾತ್ರ ವಹಿಸುತ್ತದೆ. ಇಲಾಖೆ ಅಧಿಕಾರಿಗಳು ಜನರಿಗೆ ಸ್ಪಂದಿಸುವುದು ಬಹಳ ಮುಖ್ಯ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸುವುದು ಬಹಳ ಮುಖ್ಯ ಎಂದರು.

ಗಣ್ಯರು ಹಾಗೂ ಅಧಿಕಾರಿಗಳು ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಛ ಸಮರ್ಪಿಸಿ ದೇಶದಾದ್ಯಂತ ಹುತಾತ್ಮರದ ಪೊಲೀಸರ ಹೆಸರುಗಳನ್ನು ಓದಿದರು.

ಜಿಲ್ಲಾಧಿಕಾರಿ ಆರ್. ಲತಾ, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್‌. ಅಮರೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ. ಶಿವಶಂಕರ್, ಡಿವೈಎಸ್‌ಪಿ ವಾಸುದೇವ್, ಕುಶಾಲ್ ಚೌಕ್ಸಿ, ನಗರಸಭೆ ಅಧ್ಯಕ್ಷ ಡಿ.ಎಸ್. ಆನಂದರೆಡ್ಡಿ ಬಾಬು, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಎಂ. ಮುನೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.