ADVERTISEMENT

ಆರ್ಥಿಕ ಸದೃಢತೆಗೆ ತೊಗರಿ ಸಹಕಾರಿ

​ಪ್ರಜಾವಾಣಿ ವಾರ್ತೆ
Published 1 ಜನವರಿ 2021, 2:17 IST
Last Updated 1 ಜನವರಿ 2021, 2:17 IST
ಚಿಂತಾಮಣಿ ತಾಲ್ಲೂಕಿನ ಹನುಮಂತರಾಯನಹಳ್ಳಿಯ ರೈತರ ಜಮೀನಿನಲ್ಲಿ ಕೃಷಿ ಇಲಾಖೆಯಿಂದ ಹಮ್ಮಿಕೊಂಡಿದ್ದ ತೊಗರಿ ಬೆಳೆ ಕ್ಷೇತ್ರೋತ್ಸವ
ಚಿಂತಾಮಣಿ ತಾಲ್ಲೂಕಿನ ಹನುಮಂತರಾಯನಹಳ್ಳಿಯ ರೈತರ ಜಮೀನಿನಲ್ಲಿ ಕೃಷಿ ಇಲಾಖೆಯಿಂದ ಹಮ್ಮಿಕೊಂಡಿದ್ದ ತೊಗರಿ ಬೆಳೆ ಕ್ಷೇತ್ರೋತ್ಸವ   

ಚಿಂತಾಮಣಿ: ರೈತರು ವಾಣಿಜ್ಯ ಬೆಳೆ ತೊಗರಿಯನ್ನು ಬೆಳೆಯುವುದರಿಂದ ಆರ್ಥಿಕ ಲಾಭವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಕೃಷಿ ಇಲಾಖೆಯ ಉಪ ನಿರ್ದೇಶಕಿ ಅನುರೂಪ ಸಲಹೆ ನೀಡಿದರು.

ತಾಲ್ಲೂಕಿನ ಮುಂಗಾನ ಹಳ್ಳಿ ಹೋಬಳಿಯ ಹನುಮಂತರಾಯನಹಳ್ಳಿಯ ರೈತರ ಜಮೀನಿನಲ್ಲಿ ಹಮ್ಮಿ ಕೊಂಡಿದ್ದ ತೊಗರಿ ಬೆಳೆ ಕ್ಷೇತ್ರೋತ್ಸವ ಉದ್ಘಾಟಿಸಿ ಮಾತನಾಡಿದರು.

ರೈತರು ರಾಗಿ, ಮುಸುಕಿನಜೋಳ, ನೆಲಗಡಲೆಯ ಜತೆಗೆ ತೊಗರಿ ಬೆಳೆಯಬಹುದು. ತೊಗರಿ ಉತ್ತಮ ಪೌಷ್ಟಿಕಾಂಶವುಳ್ಳ ದ್ವಿದಳಧಾನ್ಯ. ಪ್ರತಿಯೊಂದು ಕುಟುಂಬವೂ ತೊಗರಿಯನ್ನು ಉಪಯೋಗಿಸುವುದರಿಂದ ಉತ್ತಮ ಬೆಲೆ ದೊರೆಯುತ್ತದೆ. ತೊಗರಿ ಬೆಳೆಯುವುದರಿಂದ ಆರ್ಥಿಕವಾಗಿ ಸದೃಢರಾಗಬಹುದು ಎಂದು ಅಭಿಪ್ರಾಯಪಟ್ಟರು.

ADVERTISEMENT

ತೊಗರಿಯನ್ನು ಕಡಿಮೆ ವೆಚ್ಚದಲ್ಲಿ ಬೆಳೆಯಬಹುದು. ಬಿತ್ತನೆಯಾದ 45 ದಿನಗಳ ನಂತರ ತೊಗರಿ ಗಿಡಗಳ ಕುಡಿಯನ್ನು ಚಿವುಟಬೇಕು. ಹೀಗೆ ಮಾಡುವುದರಿಂದ ಹೆಚ್ಚಿನ ಕವಲುಗಳು ಒಡೆದು ಹೆಚ್ಚಿನ ಇಳುವರಿ ಪಡೆಯಬಹುದು ಎಂದರು.

ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ತನ್ವೀರ್ ಅಹ್ಮದ್ ಮಾತನಾಡಿ, ರೈತರು ಆಧುನಿಕ ಮತ್ತು ವೈಜ್ಞಾನಿಕ ರೀತಿಯಲ್ಲಿ ಬೆಳೆಗಳನ್ನು ಬೆಳೆದರೆ ಉತ್ತಮ ಇಳುವರಿ ಪಡೆಯಬಹುದು. ರೈತರು ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಬೇಕು. ಮಣ್ಣಿನ ಗುಣಕ್ಕೆ ಅನುಗುಣವಾಗಿ ಬೆಳೆಯ ಬಿತ್ತನೆ ಮತ್ತು ಗೊಬ್ಬರ ನೀಡಬೇಕಾಗುತ್ತದೆ ಎಂದು ತಿಳಿಸಿದರು.

ರೈತರು ಕೃಷಿ ವಿಜ್ಞಾನಿಗಳು ಮತ್ತು ಕೃಷಿ ಅಧಿಕಾರಿಗಳ ಸಂಪರ್ಕದಲ್ಲಿ ಇರಬೇಕು. ಯಾವ ಬೆಳೆ ಇಡಬೇಕು, ಋತುಮಾನ, ಕಾಲಾವಧಿ, ಉಪಯೋಗಿಸಬೇಕಾದ ತಳಿಗಳು, ಗೊಬ್ಬರ, ಕ್ರಿಮಿನಾಶಕಗಳ ಬಳಕೆ ಮತ್ತಿತರ ವಿವರ ಪಡೆದುಕೊಂಡು ಬೆಳೆಯ ಬಿತ್ತನೆ/ನಾಟಿ ಮಾಡಬೇಕು. ರಸಗೊಬ್ಬರ ಕಡಿಮೆ ಮಾಡಿ ಸಾವಯವ ಗೊಬ್ಬರ ಉಪಯೋಗಿಸಿದರೆ ಉತ್ಪಾದನಾ ವೆಚ್ಚ ಕಡಿಮೆಯಾಗುತ್ತದೆ. ಕ್ರಿಮಿನಾಶಕಗಳ ಬಳಕೆಯು ಕಡಿಮೆಯಾಗಿ ಉತ್ಪನ್ನಗಳು ಉತ್ತಮ ಪೌಷ್ಟಿಕಾಂಶಗಳನ್ನು ಹೊಂದಿರುತ್ತವೆ ಎಂದರು.

ರೈತರು ಯಾವುದೇ ಒಂದು ಬೆಳೆಗೆ ಜೋತುಬೀಳದೆ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು ಎಂದು ಸಲಹೆ ನೀಡಿದರು.

ಗೃಹ ವಿಜ್ಞಾನಿ ಎ. ಭಾವನಾ ಮಾತನಾಡಿ, ರಾಗಿಯಲ್ಲಿ ಮೌಲ್ಯವರ್ಧನೆ ಮ್ತು ಕೈತೋಟ ನಿರ್ವಹಣೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು.

ಕೃಷಿ ಅಧಿಕಾರಿ ಶ್ವೇತಾ ಮಾತನಾಡಿದರು. ಸಹಾಯಕ ಕೃಷಿ ನಿರ್ದೇಶಕ ಶ್ರೀನಿವಾಸ್ ಹಾಗೂ ರೈತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.