ADVERTISEMENT

103 ಜನರ ಮೇಲೆ ನಿಗಾ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2020, 10:04 IST
Last Updated 24 ಮಾರ್ಚ್ 2020, 10:04 IST

ಚಿಕ್ಕಬಳ್ಳಾಪುರ:ಜಿಲ್ಲೆಗೆ ಭಾನುವಾರ ಬ್ಯಾಂಕಾಕ್, ಇಟಲಿ, ಸೌದಿ ಸೇರಿದಂತೆ ವಿವಿಧ ದೇಶಗಳಿಂದ 17 ಜನರು ಬಂದಿದ್ದಾರೆ. ಅವರನ್ನು ಸೇರಿದಂತೆ ಫೆಬ್ರುವರಿಯಿಂದ ಭಾನುವಾರದ ವರೆಗೆ ಜಿಲ್ಲೆಗೆ ಜಿಲ್ಲೆಗೆ ವಿದೇಶಗಳಿಂದ 163 ಜನರು ಬಂದಂತಾಗಿದೆ.

ಆರೋಗ್ಯ ಇಲಾಖೆ ಅಧಿಕಾರಿಗಳು ಹೊರಗಡೆಯಿಂದ ಬಂದ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ಮಾಡಿ, ಪ್ರತ್ಯೇಕ ವಾಸಕ್ಕೆ ಕ್ರಮಕೈಗೊಳ್ಳುತ್ತಿದ್ದು, ಪ್ರಸ್ತುತ 103 ಜನರನ್ನು ಅವರ ಮನೆಗಳಲ್ಲಿಯೇ ಪ್ರತ್ಯೇಕ ನಿರ್ಬಂಧಕ್ಕೆ ಒಳಪಡಿಸಲಾಗಿದೆ.

ಈಗಾಗಲೇ 38 ಜನರು 14 ದಿನಗಳು ಮತ್ತು 15 ಜನರು 28 ದಿನಗಳ ಪ್ರತ್ಯೇಕ ವಾಸ ಪೂರ್ಣಗೊಳಿಸಿದ್ದಾರೆ. ಏಳು ಜನರು ವಿದೇಶಗಳಿಗೆ ಹಿಂದಿರುಗಿದ್ದಾರೆ. ಶಂಕಿತರ ಸಂಪರ್ಕಕ್ಕೆ ಬಂದ ಶಂಕೆಯ ಮೇಲೆ 28 ಜನರನ್ನು ಗೃಹ ನಿರ್ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಬಿ.ಎಂ.ಯೋಗೇಶ್‌ ಗೌಡ ತಿಳಿಸಿದರು.

ADVERTISEMENT

8 ಕಡೆಗಳಲ್ಲಿ ಚೆಕ್‌ಪೋಸ್ಟ್‌ ಸ್ಥಾಪನೆ

ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕು ಹರಡುವುದು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಭಾನುವಾರ ಹೊರರಾಜ್ಯದ ಪ್ರವಾಸಿಗರ ಪರೀಕ್ಷೆಗಾಗಿ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಎಂಟು ಚೆಕ್‌ಪೋಸ್ಟ್‌ಗಳನ್ನು ತೆರೆದಿದೆ.

ಗೌರಿಬಿದನೂರು ತಾಲ್ಲೂಕಿನಲ್ಲಿ ಮಧುಗಿರಿ–ಗೌರಿಬಿದನೂರು ರಸ್ತೆ, ಕೊರಟಗೆರೆ –ಗೌರಿಬಿದನೂರು ರಸ್ತೆ, ಹಿಂದೂಪುರ–ಗೌರಿಬಿದನೂರು ರಸ್ತೆ, ಬಾಗೇಪಲ್ಲಿ, ಚಿಂತಾಮಣಿ ತಾಲ್ಲೂಕಿನ ಕಂಬಾಲಹಳ್ಳಿ, ಚಿಕಲನೆರ್ಪು, ಕೊಡದವಾಡಿ, ಶಿಡ್ಲಘಟ್ಟ ತಾಲ್ಲೂಕಿನ ಎಚ್.ಕ್ರಾಸ್‌ ನಲ್ಲಿ ಚೆಕ್‌ಪೋಸ್ಟ್‌ ತೆರೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.