ಚಿಕ್ಕಬಳ್ಳಾಪುರ: ಮಾದಕ ವಸ್ತು ಮುಕ್ತ ಚಿಕ್ಕಬಳ್ಳಾಪುರ ನಿರ್ಮಾಣಕ್ಕಾಗಿ ಜಿಲ್ಲಾ ಪೊಲೀಸ್ ಇಲಾಖೆ ನಿರಂತರವಾಗಿ ಶ್ರಮಿಸುತ್ತಿದೆ. ಗಾಂಜಾ ಸೇರಿ ಯಾವುದೇ ಮಾದಕವಸ್ತುಗಳ ಸಾಗಣೆ, ಬಳಕೆ ಕಂಡು ಬಂದಲ್ಲಿ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದರೆ, ಕಾನೂನು ಕ್ರಮಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸಿ ತಿಳಿಸಿದರು.
ನಗರದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಗೆ ಗಾಂಜಾ ಸೇರಿ ಇತರೆ ಮಾದಕ ವಸ್ತುಗಳು ಆಂಧ್ರಪ್ರದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದೆ. ಆಂಧ್ರ ಗಡಿ ಠಾಣೆಗಳಾದ ಬಾಗೇಪಲ್ಲಿ, ಚೇಳೂರು, ಬಟ್ಲಹಳ್ಳಿ, ಕೆಂಚಾರ್ಲಹಳ್ಳಿ ಮತ್ತು ಗೌರಿಬಿದನೂರು ಠಾಣೆಗಳಲ್ಲಿ ಹೆಚ್ಚಿನ ನಿಗಾವಹಿಸಲಾಗಿದೆ ಎಂದರು.
2024ನೇ ಸಾಲಿನಲ್ಲಿ 26 ಮಾದಕವಸ್ತುಗಳ ಸಾಗಣೆ ಪ್ರಕರಣ ದಾಖಲಾಗಿದೆ. ಈ ವರ್ಷ ಜನವರಿ ತಿಂಗಳಿನಲ್ಲಿ 5 ಪ್ರಕರಣ ದಾಖಲಾಗಿದೆ. ಸಾರ್ವಜನಿಕರು ಮತ್ತು ಮಾಧ್ಯಮ ಸಹಕಾರದೊಂದಿಗೆ ಮಾದಕ ವಸ್ತುಗಳ ಮುಕ್ತ ಚಿಕ್ಕಬಳ್ಳಾಪುರ ಮಾಡಲು ಪೊಲೀಸ್ ಇಲಾಖೆ ಶ್ರಮಿಸುತ್ತಿದೆ. ಮಾದಕ ವಸ್ತುಗಳ ಸಾಗಣೆ ಬಗ್ಗೆ ನಿರಂತರವಾಗಿ ಮಾಹಿತಿ ಕಲೆ ಹಾಕಲಾಗುತ್ತಿದೆ. ಆರೋಪಿಗಳು ಹೊಸ ಮಾರ್ಗದಲ್ಲಿ ಗಾಂಜಾ ಸಾಗಿಸುತ್ತಿದ್ದು ಅದನ್ನು ಹಿಡಿಯಲು ಇಲಾಖೆ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.
ಗಾಂಜಾ ಹಿಡಿದಾಗ ಕೇವಲ ಅಲ್ಲಿ ಸಿಕ್ಕ ಆರೋಪಿಗಳನ್ನು ಮಾತ್ರ ವಿಚಾರಣೆ ಮಾಡದೆ, ಅವರ ಸ್ನೇಹಿತರು, ಅವರ ಪರಿಚಿತರ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ. ಇನ್ನು ಶಾಲಾ ಕಾಲೇಜು ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುವ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದರೆ, ಮಾಹಿತಿದಾರರ ಹೆಸರು ಗೋಪ್ಯವಾಗಿಟ್ಟು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿಯೂ ಚೆಕ್‌ಪೋಸ್ಟ್ ಹಾಕಿ ಪರಿಶೀಲಿಸಲಾಗುತ್ತಿದೆ. ಚಿಂತಾಮಣಿ ತಾಲ್ಲೂಕಿನ ರೈತರ ಜಮೀನಿನಲ್ಲಿ ಗಾಂಜಾ ಬೆಳೆಯುತ್ತಿರುವ ಬಗ್ಗೆ ಹೆಚ್ಚು ಪ್ರಕರಣಗಳು ದಾಖಲಾಗಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪ್ರದೇಶದಲ್ಲಿ ಗಾಂಜಾ ಸಾಗಣೆ ಮಾಡುವ ಬಗ್ಗೆ ದೂರುಗಳು ಬಂದಿವೆ. ಈ ಬಗ್ಗೆ ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದರು.
ಇನ್ನು ಮಾದಕ ವಸ್ತುಗಳ ಬಳಕೆ ಮಾಡದಂತೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನೂ ಇಲಾಖೆ ಮಾಡುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ನಡೆಸಲಾಗುತ್ತಿದೆ ಎಂದು ಹೇಳಿದರು.
24758 ಕೆ.ಜಿ ಗಾಂಜಾ ನಾಶ
ಜಿಲ್ಲೆಯಲ್ಲಿ 2024ರಲ್ಲಿ ಗಾಂಜಾ ಸಾಗಣೆ ಸೇರಿ ಇತರೆ ಮಾದಕ ವಸ್ತುಗಳಿಗೆ ಸಂಬಂಧಿಸಿದ ಎನ್‌ಪಿಎಸ್ ಕಾಯ್ದೆಯಡಿ ಒಟ್ಟು 26 ಪ್ರಕರಣಗಳು ದಾಖಲಾಗಿದೆ. 118 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ಎಸ್‌ಪಿ ಕುಶಾಲಾ ಚೌಕ್ಸೆ ತಿಳಿಸಿದರು. ಕಳೆದ ಸಾಲಿನಲ್ಲಿ ವಶಕ್ಕೆ ಪಡೆದಿರುವ ಗಾಂಜಾ ಸೇರಿ ಇತರೆ ಮಾದಕ ವಸ್ತುಗಳಲ್ಲಿ ಒಟ್ಟು 12 ಪ್ರಕರಣಗಳ ₹ 9.5ಲಕ್ಷ ಮೌಲ್ಯದ ಮೌಲ್ಯದ 24 758 ಕೆ.ಜಿ ಗಾಂಜಾ ನಾಶ ಮಾಡಲು ನ್ಯಾಯಾಲಯದ ಅನುಮತಿ ನೀಡಿದೆ. ಹೊಸಕೋಟೆ ಕೈಗಾರಿಕಾ ಪ್ರದೇಶದ ಕಂಪನಿಯೊಂದರಲ್ಲಿ ಈ ಎಲ್ಲ ಮಾದಕ ವಸ್ತುಗಳ ನಾಶ ಮಾಡಲಾಗುತ್ತದೆ. ಉಳಿದ ಪ್ರಕರಣಗಳಲ್ಲಿ ದೊರೆತಿರುವ ಮಾದಕ ವಸ್ತುಗಳನ್ನೂ ಅನುಮತಿ ಸಿಕ್ಕ ನಂತರ ನಾಶ ಪಡಿಸಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.