ಗುಡಿಬಂಡೆ: ತಿರುಮಣಿ ಗ್ರಾಮ ಠಾಣಾ ವ್ಯಾಪ್ತಿಯ ದೊಡ್ಡನಂಚರ್ಲು ಗ್ರಾಮದಲ್ಲಿದ್ದ ಜಾಲಿ ಮರಗಳನ್ನು ಅನಾಮಿಕ ವ್ಯಕ್ತಿಗಳು ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತರದೆ ಕತ್ತರಿಸಿದ್ದಾರೆ ಎಂದು ಗ್ರಾಮಸ್ಥರು ಮಂಗಳವಾರ ದೂರಿದ್ದಾರೆ.
ಸಾರ್ವಜನಿಕರಿಗೆ ಸೇರಿದ ಮರಗಳನ್ನು ಉಳಿಸಲು ತಿರುಮಣಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅನಾಮಿಕ ವ್ಯಕ್ತಿಗಳು ಜಾಲಿ ಮರಗಳನ್ನು ಕತ್ತರಿಸುತ್ತಿರುವುದ್ದನ್ನು ಕಂಡ ದೊಡ್ಡನಂಚರ್ಲು ಗ್ರಾಮಸ್ಥರು, ಮರ ಕಡಿಯುವುದಕ್ಕೆ ಅಡ್ಡಿಪಡಿಸಿದರು. ಜೊತೆಗೆ ಈ ಸಂಬಂಧ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು.
‘ಗ್ರಾಮ ಠಾಣ ಮರಗಳ ಕಟಾವಿಗೆ ಹರಾಜು ಮೂಲಕ ಅವಕಾಶ ಪಡೆದುಕೊಳ್ಳಬೇಕು. ಮರ ಕಟಾವಿಗೆ ಇರುವ ಕಾನೂನು ಮತ್ತು ನಿಯಮಗಳನ್ನು ಗಾಳಿಗೆ ತೂರಿರುವ ಗ್ರಾಮ ಪಂಚಾಯಿತಿಯವರು ಮರಗಳನ್ನು ಅಕ್ರಮವಾಗಿ ಕಡಿಯಲು ಅವಕಾಶ ಕೊಟ್ಟು ಹಣ ಮಾಡಿಕೊಳ್ಳುತ್ತಿದ್ದಾರೆ. ಅನಾಮಿಕ ವ್ಯಕ್ತಿಗಳು ಮರ ಕಟಾವು ಮಾಡುತ್ತಿರುವುದನ್ನು ಗ್ರಾಮಸ್ಥರು ಕಂಡಿಲ್ಲದಿದ್ದರೆ ಎಲ್ಲ ಮರಗಳು ನಿರ್ನಾಮವಾಗುತ್ತಿದ್ದವು. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ದೊಡ್ಡನಂಚರ್ಲು ಗ್ರಾಮದ ನರಸಿಂಹ ಎನ್.ಎನ್ ಒತ್ತಾಯಿಸಿದರು.
ಗ್ರಾಮದಲ್ಲಿನ ಮನೆಗಳ ಮೇಲೆ ವಾಲಿದ ಹುಣಸೆ ಮರಗಳ ತೆರವಿಗೆ ಅನುಕೂಲ ಮಾಡಿಕೊಡುವಂತೆ ಮನವಿ ನೀಡಿದರೆ, ಗ್ರಾಮಠಾಣಾದಲ್ಲಿ ಇರುವ ಜಾಲಿ ಮರಗಳನ್ನು ಕಟಾವು ಮಾಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮವಾಗಬೇಕು ಎಂದು ಗ್ರಾಮದ ಮುಖಂಡರೊಬ್ಬರು ಹೇಳಿದರು.
ಗ್ರಾಮದಲ್ಲಿ ಮರಗಳನ್ನು ಕಟಾವು ಮಾಡಿರುವುದು ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ನನಗೆ ಗ್ರಾಮಸ್ಥರು ಮಾಹಿತಿ ನೀಡಿದ ತಕ್ಷಣವೇ ಮರಗಳ ಕಟಾವನ್ನು ನಿಲ್ಲಿಸಿದ್ದೇನೆ. ಕಡಿದ ಮರಗಳ ತುಂಡುಗಳನ್ನು ಸ್ಥಳದಲ್ಲಿ ಹಾಕಿಸಿದ್ದೇವೆ .ಸೂಕ್ತ ಕ್ರಮಕ್ಕಾಗಿ ಅರಣ್ಯ ಇಲಾಖೆಯವರಿಗೆ ಪತ್ರ ಬರೆದು, ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಗ್ರಾಮ ಪಂಚಾಯಿತಿ ಅಧಿಕಾರಿ ಶ್ರೀನಿವಾಸ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.