ADVERTISEMENT

ಚಿಕ್ಕಬಳ್ಳಾಪುರ: ವೃತ್ತಿ ಬದುಕಿನಲ್ಲಿಯೇ ಇದೊಂದು ವಿಶಿಷ್ಟ ಅನುಭವ

ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಯಲ್ಲಿ ಮಹತ್ವದ ಪಾತ್ರವಹಿಸಿದ ಡಾ.ವಿಶ್ವನಾಥರೆಡ್ಡಿ

ಈರಪ್ಪ ಹಳಕಟ್ಟಿ
Published 23 ಜೂನ್ 2020, 19:30 IST
Last Updated 23 ಜೂನ್ 2020, 19:30 IST
ಡಾ.ವಿಶ್ವನಾಥರೆಡ್ಡಿ
ಡಾ.ವಿಶ್ವನಾಥರೆಡ್ಡಿ   

ಚಿಕ್ಕಬಳ್ಳಾಪುರ: ‘ನನ್ನ ಮೂರು ದಶಕಗಳ ವೈದ್ಯಕೀಯ ಕ್ಷೇತ್ರದ ವೃತ್ತಿ ಬದುಕಿನಲ್ಲಿ ಕೊರೊನಾ ಕಾಲದ ಸೇವೆ ಅತಿ ವಿಶಿಷ್ಟವಾದದ್ದು. ಈ ಹಿಂದೆ ನಾವು ಯಾವತ್ತೂ ಇಂತಹ ಭಯಾನಕ ಸಂದರ್ಭ ಎದುರುಗೊಂಡಿರಲಿಲ್ಲ. ಇದೊಂದು ಹೊಸ ರೀತಿಯ ಅನುಭವ’

ಕಳೆದ ಮೂರು ತಿಂಗಳಿಂದ ಕೋವಿಡ್‌-19 ಸೋಂಕಿತರ ಚಿಕಿತ್ಸೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಜಿಲ್ಲಾ ಆಸ್ಪತ್ರೆಯ ವೈದ್ಯ ಡಾ. ವಿಶ್ವನಾಥರೆಡ್ಡಿ ಅವರ ಮನದಾಳದ ಮಾತಿದು. ‘ಪ್ರಜಾವಾಣಿ’ಯೊಂದಿಗೆ ತಮ್ಮ ಅನುಭವ ಹಂಚಿಕೊಂಡ ಅವರು ಹೇಳಿದಿಷ್ಟು..

ನನ್ನ ಇಷ್ಟು ವರ್ಷದ ವೃತ್ತಿ ಪಯಣದಲ್ಲಿ ಇಂತಹ ಪರಿಸ್ಥಿತಿ ನೋಡಿರಲಿಲ್ಲ. ವೈದ್ಯಕೀಯ ಶಿಕ್ಷಣ ಪದವಿ ಪಡೆಯುವ ಸಂದರ್ಭದಲ್ಲಿ ಎಚ್‌1ಎನ್‌1 ಕಾಣಿಸಿಕೊಂಡಿತ್ತು. ಆಗಲೂ ನಾವು ಓಡಿ ಹೋಗದೆ ಕೆಲಸ ಮಾಡಿದ್ದೆವು. ಆದರೆ ಆಗಿನ ಪರಿಸ್ಥಿತಿ ಇಷ್ಟೊಂದು ಭಯಾನಕವಾಗಿರಲಿಲ್ಲ. ಲಸಿಕೆ ಬೇಗ ಲಭ್ಯವಾದ ಕಾರಣಕ್ಕೆ ಕೊರೊನಾದಷ್ಟು ಭೀತಿ ಹುಟ್ಟಿಸಲಿಲ್ಲ.

ADVERTISEMENT

ಜಿಲ್ಲೆಯಲ್ಲಿ ಮೊದಲು ವರದಿಯಾದ ಕೋವಿಡ್‌ ಪ್ರಕರಣದ ಸೋಂಕಿತೆಯನ್ನು ನಾನೇ ತಪಾಸಣೆ ನಡೆಸಿದ್ದೆ. ಹೀಗಾಗಿ, 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿದ್ದೆ. ಬಳಿಕ ಮಾರ್ಗಸೂಚಿ ಬದಲಾಯಿತು. ಈಗ ಪ್ರತಿಯೊಬ್ಬರನ್ನು ನಾವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡೆ ಪರೀಕ್ಷಿಸುವ ಕೆಲಸ ಮಾಡುತ್ತಿದ್ದೇವೆ.

ಕೋವಿಡ್‌ ಸೋಂಕಿತರ ಚಿಕಿತ್ಸೆಗೆ ಹೋಗಲು ನಾನು ನಿರ್ಧರಿಸಿದಾಗ ಕುಟುಂಬದವರು ಭಯಪಟ್ಟರು. ಹೀಗಾಗಿ, ಅವರನ್ನು ಒಪ್ಪಿಸುವುದೇ ಸವಾಲಾಗಿತ್ತು. ಪತ್ನಿ ಕೂಡ ವೈದ್ಯೆಯಾದ ಕಾರಣಕ್ಕೆ ಮನೆಯವರನ್ನು ಒಪ್ಪಿಸುವುದು ಕಷ್ಟವಾಗಲಿಲ್ಲ.

ನಮ್ಮ ಕೋವಿಡ್‌ ವಾರ್ಡ್‌ನಲ್ಲಿ ನಾನು ಸೇರಿದಂತೆ ಐದು ವೈದ್ಯರು ತಂಡವಾಗಿ ಕೆಲಸ ಮಾಡುತ್ತಿದ್ದೇವೆ. ನಮ್ಮಲ್ಲಿ ದಾಖಲಾಗುವ ಪ್ರತಿ ಸೋಂಕಿತರಲ್ಲಿ ಕಾಣಿಸಿಕೊಳ್ಳಬಹುದಾದ ಸಮಸ್ಯೆಗಳನ್ನು ಮುಂಚಿತವಾಗಿಯೇ ಪತ್ತೆ ಮಾಡುವಂತಹ ಅಗತ್ಯ ಪರೀಕ್ಷೆಗಳನ್ನು ನಾವು ಮೂರು ದಿನಗಳ ಒಳಗೆ ‌ನಡೆಸುತ್ತ ಬಂದಿದ್ದೇವೆ. ಪರಿಣಾಮವಾಗಿ ಉತ್ತಮ ಫಲಿತಾಂಶ ದೊರೆತಿದೆ.

ಪರೀಕ್ಷೆಯ ವರದಿ ಆಧರಿಸಿ ನಾವು ಸೋಂಕಿತರನ್ನು ನ್ಯೂಮೊನಿಯಾ, ಉಸಿರಾಟದ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆ ಇರುವವರು, ಮಧುಮೇಹ, ರಕ್ತದೊತ್ತಡ ಸಮಸ್ಯೆ ಇರುವವರು, ರಕ್ತ ಪರೀಕ್ಷೆಯಲ್ಲಿ ಅಸಹಜತೆ ಕಾಣಿಸಿಕೊಂಡವರು ಹೀಗೆ ಗುಂಪುಗಳನ್ನಾಗಿ ವರ್ಗೀಕರಿಸಿ, ಅವರನ್ನು ಪ್ರತ್ಯೇಕವಾಗಿರಿಸಿ ನಿಗಾ ವಹಿಸುತ್ತಿದ್ದೆವು. ಹೀಗಾಗಿ, ನಮ್ಮಲ್ಲಿ ರೋಗಿಗಳು ಗಂಭೀರ ಸ್ಥಿತಿಗೆ ತಲುವ ಸ್ಥಿತಿ ಬರಲಿಲ್ಲ.

ಕೋವಿಡ್‌ ವಿಚಾರವಾಗಿ ವಿಶ್ವದಲ್ಲೆಡೆ ಇತ್ತೀಚಿನ ಕೆಲ ತಿಂಗಳುಗಳಲ್ಲಿ ನಡೆಯುತ್ತಿರುವ ವೈದ್ಯಕೀಯ ಚಿಕಿತ್ಸೆಗಳು, ಸಂಶೋಧನೆಗಳು ಮತ್ತು ಅವುಗಳಿಂದ ಕಂಡುಕೊಂಡಿರುವ ಫಲಿತಾಂಶಗಳ ಮಾಹಿತಿಯನ್ನು ನಾವು ನಿತ್ಯವೂ ಪರಿಶೀಲಿಸುತ್ತಿದ್ದೇವೆ.

ಜತೆಗೆ, ಕೊಲಂಬಿಯಾ ಏಷ್ಯಾ ಆಸ್ಪತ್ರೆ ಪರಿಣಿತ ವೈದ್ಯರ ತಂಡ ನೀಡುವ ಸಲಹೆಗಳು, ಮಾರ್ಗಸೂಚಿಗಳನ್ನು ಪಾಲಿಸುತ್ತಿದ್ದೇವೆ. ನಮಗೆ ಸವಾಲು ಎನಿಸಿದ ಸೋಂಕಿತರ ಸ್ಥಿತಿಗತಿಯ ಬಗ್ಗೆ ಆ ಪರಿಣಿತ ವೈದ್ಯರ ಗಮನಕ್ಕೆ ತಂದು ಮಾರ್ಗದರ್ಶನ ಪಡೆಯುತ್ತಿದ್ದೆವು. ಗಂಭೀರ ಸ್ವರೂಪದ ಸೋಂಕಿತರನ್ನು ಪ್ರತ್ಯೇಕವಾಗಿಟ್ಟು ಕಾಳಜಿ ವಹಿಸಿದ ಪರಿಣಾಮ ನಮ್ಮ ಕೋವಿಡ್‌ ವಾರ್ಡ್‌ನಲ್ಲಿ ಒಂದೇ ಒಂದು ಸಾವು ಉಂಟಾಗಲಿಲ್ಲ.

ಲಾಕ್‌ಡೌನ್‌ ತೆರವುಗೊಳಿಸಿದ ತಕ್ಷಣ ಕೊರೊನಾ ವೈರಸ್‌ ಸೋಂಕು ಹೋಗಿದೆ ಎಂದರ್ಥವಲ್ಲ. ದೇಶದಲ್ಲಿ ಇವತ್ತು ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ನೋಡಿಯಾದರೂ ಜನರು ಎಚ್ಚೆತ್ತುಕೊಂಡು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು.

ದುರಂತವೆಂದರೆ, ನಾವು ಎಷ್ಟೇ ಹೇಳಿ, ಪ್ರಚಾರ ಮಾಡಿ, ಫಲಕಗಳನ್ನು ಅಳವಡಿಸಿ ಅರಿವು ಮೂಡಿಸಿದರೂ ಜನರು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂಬ ಬೇಸರವಾಗುತ್ತಿದೆ. ಅಮೆರಿಕ, ಇಟಲಿಯಂತಹ ಮುಂದುವರಿದ ದೇಶಗಳೇ ಪ್ರಕರಣಗಳು ಉಲ್ಬಣಿಸಿದಾಗ ವೈದ್ಯಕೀಯ ವ್ಯವಸ್ಥೆ ಮಾಡಲಾಗದೆ ಕೈಚೆಲ್ಲಿವೆ. ಹೀಗಾಗಿ, ದೊಡ್ಡ ಜನಸಂಖ್ಯೆ ಉಳ್ಳ ನಮ್ಮ ದೇಶದಲ್ಲಿ ಜನರು ಪ್ರಜ್ಞಾವಂತರಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.