ADVERTISEMENT

ರಸ್ತೆಗಳಿಗೆ ಮಹಾಪುರುಷರ ಹೆಸರಿಡಲು ಆಗ್ರಹ

ನಗರಸಭೆ ಆಯುಕ್ತರಿಗೆ ಸಮಾನ ಮನಸ್ಕರ ವೇದಿಕೆಯ ವತಿಯಿಂದ ಮನವಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2019, 12:59 IST
Last Updated 14 ಸೆಪ್ಟೆಂಬರ್ 2019, 12:59 IST
ಸಮಾನ ಮನಸ್ಕರ ವೇದಿಕೆ ಸದಸ್ಯರು ನಗರಸಭೆ ಆಯುಕ್ತ ಉಮಾಕಾಂತ್ ಅವರಿಗೆ ಮನವಿ ಸಲ್ಲಿಸಿದರು.
ಸಮಾನ ಮನಸ್ಕರ ವೇದಿಕೆ ಸದಸ್ಯರು ನಗರಸಭೆ ಆಯುಕ್ತ ಉಮಾಕಾಂತ್ ಅವರಿಗೆ ಮನವಿ ಸಲ್ಲಿಸಿದರು.   

ಚಿಕ್ಕಬಳ್ಳಾಪುರ: ನಗರದ ಪ್ರಮುಖ ರಸ್ತೆಗಳಿಗೆ ಕನ್ನಡ ಸಾಹಿತಿಗಳ ಮತ್ತು ಐತಿಹಾಸಿಕ ಪುರುಷರ ಹೆಸರುಗಳನ್ನು ನಾಮಕರಣ ಮಾಡುವಂತೆ ಸಮಾನ ಮನಸ್ಕರ ವೇದಿಕೆಯ ವತಿಯಿಂದ ನಗರಸಭೆ ಆಯುಕ್ತ ಉಮಾಕಾಂತ್ ಅವರಿಗೆ ಮನವಿ ಸಲ್ಲಿಸಲಾಯಿತು.


ಈ ವೇಳೆ ಮಾತನಾಡಿದ ಸಾಹಿತಿ ಗೋಪಾಲಗೌಡ ಕಲ್ವಮಂಜಲಿ, ‘ಭಾರತ ಸ್ವಾತಂತ್ರ್ಯ ಗಳಿಸಿದ ಆರಂಭದ ವರ್ಷಗಳಿಂದಲೂ ಈವರೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಸಾಕಷ್ಟು ಮಹನೀಯರು ನಾಡು, ನುಡಿಗೆ ಸೇವೆ ಸಲ್ಲಿಸಿದ್ದಾರೆ. ನಾವು ಅವರನ್ನು ನಿತ್ಯ ಜೀವನದಲ್ಲಿ ಸ್ಮರಿಸಿಕೊಳ್ಳುವುದು ಪುಣ್ಯಕಾರ್ಯ. ಹಾಗಾಗಿ ಇವರ ಹೆಸರುಗಳನ್ನು ನಗರದ ಪ್ರಮುಖ ಬೀದಿಗಳಿಗೆ ನಾಮಕರಣ ಮಾಡುವ ಸ್ತುತ್ಯಕಾರ್ಯ ಜರೂರಾಗಿ ಆಗಬೇಕಾಗಿದೆ’ ಎಂದು ಹೇಳಿದರು.


‘ಪತ್ರಿಕಾ ರಂಗದ ಭೀಷ್ಮ ತಿ.ತಾ.ಶರ್ಮಾ ಅವರ ಪತ್ನಿ ತಿರುಮಲೆ ರಾಜಮ್ಮ, ನಾಟ್ಯರಾಣಿ ಶಾಂತಲಾ ಖ್ಯಾತಿಯ ಸಿ.ಕೆ.ನಾಗರಾಜರಾವ್, ಶಾಸನ ತಜ್ಞ ಬಾ.ರಾ.ಗೋಪಾಲ್, ಕನ್ನಡ ಪರಿಚಾರಕ ಚಿ.ಶ್ರೀನಿವಾಸರಾಜು, ಕಾದಂಬರಿ ಮತ್ತು ನಾಟಕಕತೃ ರಘುಸುತ, ಖ್ಯಾತ ಕನ್ನಡ ವಿದ್ವಾಂಸರಾದ ಪ್ರಧಾನಗುರುದತ್ತ, ಗಮಕಿಗಳಾದ ಬ.ನ.ಗುಂಡೂರಾವ್ ಅವರಂತಹ ಮಹನೀಯರ ಹೆಸರುಗಳನ್ನು ರಸ್ತೆಗಳಿಗೆ ನಾಮಕರಣ ಮಾಡಬೇಕು’ ಎಂದು ಆಗ್ರಹಿಸಿದರು.

ADVERTISEMENT


ರಾಜ್ಯ ಅಥ್ಲೆಟಿಕ್ ಅಸೋಷಿಯೆಷನ್‌ನ ಜಿಲ್ಲಾ ಘಟಕದ ಕಾರ್ಯದರ್ಶಿ ಮಂಚನಬಲೆ ಶ್ರೀನಿವಾಸ್‌ ಮಾತನಾಡಿ, ‘ಕಳೆದ ಮೂರು ವರ್ಷಗಳಲ್ಲಿ ಈ ದಿಸೆಯಲ್ಲಿ ಪ್ರಯತ್ನ ನಡೆಸಿದರೂ ಕೂಡ ನಗರದಲ್ಲಿ ಮಹನೀಯರ ಹೆಸರುಗಳನ್ನು ಇಡುವ ಪ್ರಯತ್ನ ಕಾರ್ಯರೂಪಕ್ಕೆ ಬಂದಿಲ್ಲ. ಈಗಲಾದರೂ ಈ ಬಗ್ಗೆ ನಗರಸಭೆ ಗಂಭೀರವಾಗಿ ಪರಿಗಣಿಸಿ, ನಗರದ ಬೀದಿಗಳಿಗೆ ಮಹನೀಯರು ಹೆಸರುಗಳನ್ನಿಟ್ಟು ಪ್ರತಿದಿನ ಅವರನ್ನು ನೆನೆಸಿಕೊಳ್ಳುವ ಪುಣ್ಯದ ಕೆಲಸ ಮಾಡಬೇಕಿದೆ’ ಎಂದರು.
ಮುಖಂಡರಾದ ಗಂಗಾಧರಪ್ಪ, ಗೋಪಾಲ್, ಹನುಮಂತರಾಜು ಬಿ.ಪಾಳ್ಯ, ಮಹಾಕಾಳಿ ಬಾಬು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.