ADVERTISEMENT

ಬಾಗೇಪಲ್ಲಿ: ಮಹರ್ಷಿ ವಾಲ್ಮೀಕಿ ಭವನ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 6:22 IST
Last Updated 13 ಅಕ್ಟೋಬರ್ 2025, 6:22 IST
ಬಾಗೇಪಲ್ಲಿ ಸರ್ಕಾರಿ ಬಾಲಕಿಯರ ಶಾಲಾವರಣದಲ್ಲಿ ನಡೆದ ವಾಲ್ಮೀಕಿ ಜಯಂತಿ, ವಾಲ್ಮೀಕಿ ಭವನ ಲೋಕಾರ್ಪಣೆ, 18ನೇ ವರ್ಷದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ರವಿ ಡಿ.ಚನ್ನಣ್ಣನವರ್, ಪ್ರಸನ್ನಾನಂದ ಸ್ವಾಮೀಜಿ, ಎಸ್.ಎನ್.ಸುಬ್ಬಾರೆಡ್ಡಿ ಇದ್ದರು
ಬಾಗೇಪಲ್ಲಿ ಸರ್ಕಾರಿ ಬಾಲಕಿಯರ ಶಾಲಾವರಣದಲ್ಲಿ ನಡೆದ ವಾಲ್ಮೀಕಿ ಜಯಂತಿ, ವಾಲ್ಮೀಕಿ ಭವನ ಲೋಕಾರ್ಪಣೆ, 18ನೇ ವರ್ಷದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ರವಿ ಡಿ.ಚನ್ನಣ್ಣನವರ್, ಪ್ರಸನ್ನಾನಂದ ಸ್ವಾಮೀಜಿ, ಎಸ್.ಎನ್.ಸುಬ್ಬಾರೆಡ್ಡಿ ಇದ್ದರು   

ಬಾಗೇಪಲ್ಲಿ: ಪಟ್ಟಣದ ಹೊರವಲಯದ ನ್ಯಾಷನಲ್ ಕಾಲೇಜಿನ ಬಳಿ ₹6 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಮಹರ್ಷಿ ವಾಲ್ಮೀಕಿ ಭವನವನ್ನು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಲೋಕಾರ್ಪಣೆಗೊಳಿಸಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಶಾಲಾವರಣದಲ್ಲಿ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ, ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ತಾಲ್ಲೂಕು ಆಡಳಿತದ ಸಂಯುಕ್ತಾಶ್ರಯದಲ್ಲಿ ಭಾನುವಾರ ವಾಲ್ಮೀಕಿ ಜಯಂತಿ, ವಾಲ್ಮೀಕಿ ಭವನ ಲೋಕಾರ್ಪಣೆ, 18ನೇ ವರ್ಷದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.

ಈ ವೇಳೆ ಮಾತನಾಡಿದ ಅವರು, ಪರಿಶಿಷ್ಟ ಸಮಾಜದಲ್ಲೂ ಬಡತನ ರೇಖೆಗಿಂತ ಕಡಿಮೆ ಇರುವವರು ಇದ್ದಾರೆ. ಹಾಗಾಗಿ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯ ಕಲ್ಪಿಸಲಾಗುತ್ತಿದೆ. ಮತ್ತಷ್ಟು ಯೋಜನೆಗಳನ್ನು ತಲುಪಿಸುತ್ತೇನೆ ಎಂದು ತಿಳಿಸಿದರು.

ADVERTISEMENT

ಸಂವಿಧಾನದ ವ್ಯವಸ್ಥೆಯಲ್ಲಿ ಪರಿಶಿಷ್ಟರಿಗೆ ಮೀಸಲಿಟ್ಟಿರುವ ಹಣವನ್ನು ತಲುಪಿಸಲಾಗುವುದು. ನಿವೇಶನ, ಮನೆ ಹಂಚಿಕೆಯಲ್ಲಿ ಮೀಸಲಾತಿ ನೀಡುತ್ತೇನೆ. ಮಕ್ಕಳ ಶಿಕ್ಷಣಕ್ಕೆ ಶಾಲಾ, ಕಾಲೇಜು, ವಸತಿ ನಿಲಯಗಳನ್ನು ಆರಂಭಿಸಲಾಗಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸಬೇಕು ಎಂದರು.

ಕ್ಷೇತ್ರದ 70 ಕೆರೆಗಳನ್ನು ತುಂಬಿಸಲಾಗಿದೆ. ಘಂಟ್ಲಮಲ್ಲಮ್ಮ ಡ್ಯಾಂ ನಿರ್ಮಾಣಕ್ಕೆ ₹200 ಕೋಟಿ ಹಣ ಮೀಸಲಿಡಲಾಗಿದೆ. ಶಾಶ್ವತ ನೀರಾವರಿ ಕಲ್ಪಿಸಲಾಗುವುದು. ಪಟ್ಟಣದ ಹೊರವಲಯದಲ್ಲಿ ಕೈಗಾರಿಕೆ ಆರಂಭಿಸಲು ರೈತರಿಂದ ಭೂಮಿ ಪಡೆದು, ಸರ್ಕಾರದಿಂದ ರೈತರಿಗೆ ಪರಿಹಾರ ಹಣ ವಿತರಿಸಲಾಗಿದೆ. ಶಾಶ್ವತ ನೀರಾವರಿ, ಕೈಗಾರಿಕೆ ಮಾಡಿಯೇ ತೀರುತ್ತೇನೆ ಎಂದರು.

ಹಿರಿಯ ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್ ಮಾತನಾಡಿ, ಸಮುದಾಯದಲ್ಲಿ ಬೆರಳೆಣಿಕೆಯಷ್ಟು ಮಂದಿ ಬೆಳೆದರೆ ಸಾಲದು ಎಲ್ಲರೂ ಬೆಳೆಯಬೇಕು. ಜ್ಞಾನದಿಂದ ಮಾತ್ರ ಸಮಾಜ ಬೆಳೆಯಲು ಸಾಧ್ಯ ಎಂದರು.

ವಾಲ್ಮೀಕಿ ಮಹಾಸಂಸ್ಥಾನದ ಪ್ರಸನ್ನಾನಂದ ಪುರಿ ಸ್ವಾಮೀಜಿ ಮಾತನಾಡಿ, ವಾಲ್ಮೀಕಿ ರಚಿಸಿದ ರಾಮಾಯಣದ ಪಾತ್ರಗಳು ಸಂವಿಧಾನದ ಆಶಯಗಳಾಗಿವೆ. ವಾಲ್ಮೀಕಿ ಅವರ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬೂರಗಮಡುಗು ಲಕ್ಷ್ಮಿನರಸಿಂಹಪ್ಪ ಅವರಿಗೆ ನಿಕಟಪೂರ್ವ ಅಧ್ಯಕ್ಷ ಮರಿಯಪ್ಪ ಅವರು ವಾಲ್ಮೀಕಿ ಭಾವಚಿತ್ರದ ಬಾವುಟ ನೀಡಿ ಅಧಿಕಾರ ಹಸ್ತಾಂತರಿಸಿದರು.

ಭೂಮ್ತಾಯಿ ಬಳಗದ ಅರುಣ್ ತಂಡದವರಿಂದ ವಾಲ್ಮೀಕಿ, ಅಂಬೇಡ್ಕರ್‌ ಬಗೆಗಿನ ಕ್ರಾಂತಿಕಾರಿ ಗೀತೆ ಹಾಗೂ ಮಾದಪ್ಪನ ಹಾಡುಗಳನ್ನು ಹಾಡಿ ಜನಮನ ಸೆಳೆದರು.

ಕಾರ್ಯಕ್ರಮಕ್ಕೂ ಮುನ್ನಾ ಪಟ್ಟಣದ ಡಾ.ಎಚ್.ಎನ್.ವೃತ್ತದಿಂದ ಕಲಾತಂಡಗಳೊಂದಿಗೆ, ಮಹಿಳೆಯರ ಪೂರ್ಣಕುಂಭ ಸ್ವಾಗತದೊಂದಿಗೆ ಡಿವಿಜಿ ಮುಖ್ಯರಸ್ತೆಯಲ್ಲಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರವನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲಾಯಿತು. ಬಾಗೇಪಲ್ಲಿ, ಚೇಳೂರು ತಾಲ್ಲೂಕುಗಳಿಂದ ಬಂದಿದ್ದ ಪಲ್ಲಕ್ಕಿಯನ್ನು ಮೆರವಣಿಗೆ ಮಾಡಲಾಯಿತು. ಪಟ್ಟಣದ ಡಿವಿಜಿ ಮುಖ್ಯರಸ್ತೆಯ ಸರ್ಕಾರಿ ಆಸ್ಪತ್ರೆಯ ಮುಂಭಾಗದ ಮಹರ್ಷಿ ವಾಲ್ಮೀಕಿ ಪುತ್ಥಳಿಗೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾಲಾರ್ಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ಎಸ್‍ಎಸ್‍ಎಲ್‍ಸಿ, ಪಿಯು, ಪದವಿಯಲ್ಲಿ ಶೇ 85ರಷ್ಟು ಪಡೆದ ವಾಲ್ಮೀಕಿ ನಾಯಕ ಸಮುದಾಯದ ಪ್ರತಿಭಾನ್ವಿತರಿಗೆ ಗೌರವಿಸಲಾಯಿತು. ಜೊತೆಗೆ ವಿವಿಧ ಕೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಸತ್ಕರಿಸಲಾಯಿತು.

ತಹಶೀಲ್ದಾರ್ ಮನೀಷಾ ಎನ್.ಪತ್ರಿ, ಸಮಾಜ ಕಲ್ಯಾಣಾಧಿಕಾರಿ ಮಂಜುಳ, ಪುರಸಭೆ ಅಧ್ಯಕ್ಷ ಎ.ಶ್ರೀನಿವಾಸ್, ಸುಜಾತಾನಾಯ್ಡು, ಪಿ.ಮಂಜುನಾಥರೆಡ್ಡಿ, ಬಿ.ವಿ.ವೆಂಕಟರವಣ, ಮರಿಯಪ್ಪ, ಗಡ್ಡಂನರಸಪ್ಪ, ಅಶ್ವತ್ಥಪ್ಪ, ಗಡ್ಡಂ ರಮೇಶ್, ಗೂಳೂರು ಬಾಬು, ಬಿ.ವಿ.ಮಂಜುನಾಥ್, ದೇವರೆಡ್ಡಿಪಲ್ಲಿ ಶಿವಪ್ಪ, ಎಂ.ಸಿ.ನಂಜುಂಡಪ್ಪ, ಜಿ.ಎನ್.ಕೃಷ್ಣಮೂರ್ತಿ, ಎನ್.ಶಿವಪ್ಪ, ಚಂದ್ರಶೇಖರರೆಡ್ಡಿ, ಪೈಪಾಳ್ಯ ರವಿ, ಡಿ.ಸಿ.ಶ್ರೀನಿವಾಸ್, ಎಸ್.ಶ್ವೇತ ಶೈಲ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.