ಚಿಕ್ಕಬಳ್ಳಾಪುರ: ಶ್ರಾವಣ ಮಾಸದ ಪ್ರಮುಖ ಹಬ್ಬವಾದ ವರಮಹಾಲಕ್ಷ್ಮಿ ಹಬ್ಬ ಶುಕ್ರವಾರ ಜಿಲ್ಲೆಯಲ್ಲಿ ಸಂಭ್ರಮದ ಸಡಗರದಿಂದ ನಡೆಯಲಿದೆ. ಹಬ್ಬದ ಪ್ರಯುಕ್ತ ಗುರುವಾರ ನಗರದ ಮಾರುಕಟ್ಟೆಗಳಲ್ಲಿ ಜನರು ಕಿಕ್ಕಿರಿದು ಸೇರಿದ್ದರು.
ಬಜಾರ್ ರಸ್ತೆಯು ಪೂರ್ಣವಾಗಿ ಜನಜಂಗುಳಿಯಿಂದ ತುಂಬಿತ್ತು. ರಸ್ತೆಯಲ್ಲಿನ ಬಟ್ಟೆ, ದಿನಸಿ, ಗ್ರಂಥಿಗೆ ಅಂಗಡಿಗಳಲ್ಲಿ ಜನರಿದ್ದರು. ಇದಕ್ಕಿಂತ ಹೆಚ್ಚು ಜನರು ಫುಟ್‌ಪಾತ್‌ನಲ್ಲಿದ್ದ ಹೂ, ಹಣ್ಣಿನ ಅಂಗಡಿಗಳಲ್ಲಿ ಕಂಡು ಬಂದರು. ಗಂಗಮ್ಮನಗುಡಿ ರಸ್ತೆಯಲ್ಲಿರುವ ಚಿನ್ನಬೆಳ್ಳಿ ಅಂಗಡಿಗಳಲ್ಲಿ ದೇವಿ ಮೂರ್ತಿಗಳು, ಮುಖಪದ್ಮಗಳ ಖರೀದಿ ಸಹ ಹೆಚ್ಚಿತ್ತು.
ಬಜಾರ್ ರಸ್ತೆ, ಬಿಬಿ ರಸ್ತೆಯಲ್ಲಿ, ಎಂ.ಜಿ ರಸ್ತೆಯಲ್ಲಿ ಬಾಳೆ ದಿಂಡು, ಹೂವು, ನಾನಾ ಹಣ್ಣುಗಳ ವ್ಯಾಪಾರಿಗಳು ಅಂಗಡಿಗಳನ್ನು ಸರಕುಗಳನ್ನು ಹೆಚ್ಚಿನದಾಗಿಯೇ ಹರಡಿದ್ದರು. ರಸ್ತೆಯಲ್ಲಿ ಜನರ ಓಡಾಟ ತೀವ್ರವಾಗಿತ್ತು. ಎಂ.ಜಿ ರಸ್ತೆಯಲ್ಲಿ ನಾನಾ ಬಗೆಯ ಹೂಗಳು ಗಮನ ಸೆಳೆಯುತ್ತಿದ್ದವು. ಮಧ್ಯಾಹ್ನದಿಂದ ಸಂಜೆಯವರೆಗೆ ದೊಡ್ಡ ಸಂಖ್ಯೆಯಲ್ಲಿ ಇಲ್ಲಿ ಜನರು ಹೂ, ಹಣ್ಣು ಸೇರಿದಂತೆ ಹಬ್ಬಕ್ಕೆ ಅಗತ್ಯ ಸಾಮಗ್ರಿಗಳನ್ನು ಖರೀದಿಸಿದರು.
ಮಹಿಳೆಯರು ಭರಾಟೆಯಿಂದ ಖರೀದಿ ನಡೆಸಿದರು. ಮಾರುಕಟ್ಟೆಯಲ್ಲಿ ಅಲ್ಲಲ್ಲಿ ವಿವಿಧ ವರ್ಣಗಳ ಮೊಗದ ಲಕ್ಷ್ಮಿ ಮೂರ್ತಿಗಳ ಖರೀದಿಗೆ ಮಹಿಳೆಯರು ಹೆಚ್ಚು ಸೇರಿದ್ದರು. ವರಮಹಾಲಕ್ಷ್ಮಿ ಹಬ್ಬ ಆಚರಣೆಯಲ್ಲಿ ಮುಖ್ಯವಾಗಿ ಲಕ್ಷ್ಮಿ ಕಳಸ, ಮುಖವಾಡ, ಕಮಾನುಗಳು, ಅಲಂಕಾರಿಕ ವಸ್ತುಗಳು, ಬಳೆಗಳು, ಕೃತಕ ಆಭರಣಗಳ ಮಾರಾಟ ಜೋರಾಗಿತ್ತು. ನಗರದ ಫ್ಯಾನ್ಸಿ ಸ್ಟೋರ್‌ಗಳು, ಗ್ರಂಥಿಗೆ ಅಂಗಡಿಗಳಲ್ಲಿ ಹಣದ ಅಧಿದೇವತೆಯದ್ದೇ ಮಾತು.
ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಸಹಜವಾಗಿ ಹೂ ಮತ್ತು ಹಣ್ಣಿನ ಬೆಲೆಗಳು ಹೆಚ್ಚುತ್ತವೆ. ಈ ಬಾರಿಯೂ ಹೂ ಮತ್ತು ಹಣ್ಣಿನ ಬೆಲೆ ಹೆಚ್ಚಿದೆ.
ಮಾರುಕಟ್ಟೆಯಲ್ಲಿ ಕನಿಷ್ಠ ಎಂಟು ಇಂಚಿನಿಂದ ಹಿಡಿದು ಗರಿಷ್ಠ ಐದು ಅಡಿ ಎತ್ತರದ ವರೆಗೆ ಪೂಜೆಗೆ ಅಗತ್ಯವಾದ ‘ರೆಡಿಮೇಡ್’ ಲಕ್ಷ್ಮಿಯರ ಮಾರಾಟ ಬಿರುಸಿನಿಂದ ನಡೆಯಿತು. ₹1,000 ದಿಂದ ಹಿಡಿದು ₹40 ಸಾವಿರದ ವರೆಗೆ ವಿವಿಧ ಗಾತ್ರಗಳಲ್ಲಿ ಅಲಂಕೃತ ಲಕ್ಷ್ಮಿಯ ಕಳಸ ಮಾರಾಟವಾದವು. ಹೀಗೆ ಹಬ್ಬದ ಹಿಂದಿನ ದಿನ ಅಂಗಡಿಗಳಲ್ಲಿ ಭರ್ಜರಿ ವಹಿವಾಟು ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.