ADVERTISEMENT

ಚಿಕ್ಕಬಳ್ಳಾಪುರ | ಪ್ರಧಾನಿಯೊಂದಿಗೆ ವಾಟದಹೊಸಹಳ್ಳಿ ಪಂಚಾಯಿತಿ ಅಧ್ಯಕ್ಷ ಸಂವಾದ

ಪಂಚಾಯತ್ ರಾಜ್ ದಿವಸ ಅಂಗವಾಗಿ ಆಯ್ದ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರೊಂದಿಗೆ ನರೇಂದ್ರ ಮೋದಿ ಅವರ ವಿಡಿಯೊ ಕಾನ್ಫರೆನ್ಸ್‌

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2020, 10:55 IST
Last Updated 24 ಏಪ್ರಿಲ್ 2020, 10:55 IST
ಚಿಕ್ಕಬಳ್ಳಾಪುರದ ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ನಡೆದ ವಿಡಿಯೊ ಕಾನ್ಫರೆನ್ಸ್‌ನಲ್ಲಿ ವಾಟದಹೊಸಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್‌.ಎಂ.ನವೀನ್‌ ಕುಮಾರ್‌ (ಎಡದಿಂದ ಎರಡನೆಯವರು) ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದರು.
ಚಿಕ್ಕಬಳ್ಳಾಪುರದ ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ನಡೆದ ವಿಡಿಯೊ ಕಾನ್ಫರೆನ್ಸ್‌ನಲ್ಲಿ ವಾಟದಹೊಸಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್‌.ಎಂ.ನವೀನ್‌ ಕುಮಾರ್‌ (ಎಡದಿಂದ ಎರಡನೆಯವರು) ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದರು.   

ಚಿಕ್ಕಬಳ್ಳಾಪುರ: ಪಂಚಾಯತ್ ರಾಜ್ ದಿವಸ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ವಿವಿಧ ರಾಜ್ಯಗಳ ಆಯ್ದ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರೊಂದಿಗೆ ವಿಡಿಯೊ ಕಾನ್ಫರೆನ್ಸ್‌ ಸಂವಾದ ನಡೆಸಿದರು. ಇದೇ ವೇಳೆ ಮೋದಿ ಅವರು ಗೌರಿಬಿದನೂರು ತಾಲ್ಲೂಕಿನ ವಾಟದಹೊಸಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್‌.ಎಂ.ನವೀನ್‌ ಕುಮಾರ್‌ ಅವರೊಂದಿಗೆ ಮಾತನಾಡಿದರು.

ಜಿಲ್ಲಾ ಪಂಚಾಯಿತಿಯ ಮಿನಿ ಸಭಾಂಗಣದಲ್ಲಿ ವಿಡಿಯೊ ಸಂವಾದಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆ 11 ರಿಂದ ಸುಮಾರು 30 ನಿಮಿಷ ನಡೆದ ಪ್ರಧಾನಿಮೋದಿ ಅವರು ವಿಡಿಯೊ ಕಾನ್ಫರೆನ್ಸ್‌ನಲ್ಲಿ ನವೀನ್‌ ಕುಮಾರ್‌ ಅವರೊಂದಿಗೆ ಸುಮಾರು ಆರು ನಿಮಿಷಗಳು ಸಂವಾದ ನಡೆಸಿದರು.

ಆರಂಭದಲ್ಲಿ ಮೋದಿ ಅವರು, ‘ಜಗತ್ತಿಗೆ ಇಂತಹದೊಂದು ಜೈವಿಕ ವಿಪತ್ತು ಬರುತ್ತದೆ ಎಂದು ನಾವು ನಿರೀಕ್ಷಿಸಿರಲಿಲ್ಲ. ಸದ್ಯ ದೇಶದಾದ್ಯಂತ ಕೋವಿಡ್‌ ನಿಯಂತ್ರಣ ಕಾರ್ಯ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಪ್ರಸ್ತುತ ನಾವು ಸ್ಥಳೀಯ ಪಂಚಾಯತ್‌ ವ್ಯವಸ್ಥೆ ಮೂಲಕ ಈ ಮಹಾಮಾರಿಯನ್ನು ತೊಲಗಿಸಲು ಶ್ರಮಿಸಬೇಕಾಗಿದೆ’ ಎಂದರು.

ADVERTISEMENT

‘ಕೊರೊನಾ ನಮಗೆ ಸಂಕಷ್ಟದ ಸಮಯದಲ್ಲಿ ಮತ್ತೊಬ್ಬರ ಮೇಲೆ ಅವಲಂಬನೆಯಾಗದೇ ಸ್ವಶಕ್ತಿಯ ಮೇಲೆ ನಂಬಿಕೆ ಇಟ್ಟು ಹೋರಾಡಬೇಕು ಎಂಬ ಸ್ವಾವಲಂಬನೆಯ ಪಾಠ ಕಲಿಸಿದೆ’ ಎಂದ ಅವರು ‘ನಿಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೊನಾ ನಿಯಂತ್ರಣಕ್ಕೆ ಏನೆಲ್ಲ ಕ್ರಮಗಳನ್ನು ತೆಗೆದುಕೊಂಡಿದ್ದೀರಿ’ ಎಂದು ಅಧ್ಯಕ್ಷರಿಂದ ಮಾಹಿತಿ ಪಡೆದರು.

ಈ ವೇಳೆ ನವೀನ್‌ ಕುಮಾರ್ ಅವರು, ‘ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 14 ಜನರಿಗೆ ಕ್ವಾರಂಟೈನ್‌ ಮಾಡಲಾಗಿದೆ. ಅವರಿಗೆ ಹಾಲು, ತರಕಾರಿ, ವೈದ್ಯಕೀಯ ಸೌಲಭ್ಯ ನೀಡಿ ಮನೆಯಿಂದ ಹೊರ ಬರದಂತೆ ನಿಗಾ ವಹಿಸಲಾಗಿದೆ’ ಎಂದು ಹೇಳಿದರು.

‘ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂದಿ, ಸ್ವಯಂ ಸೇವಕರ ಕಾರ್ಯಪಡೆ ಸಹಕಾರದೊಂದಿಗೆ ಕೊರೊನಾ ನಿಯಂತ್ರಣಕ್ಕೆ ಸಹಕಾರ ಪಡೆಯಲಾಗುತ್ತಿದೆ. ವಾರದಲ್ಲಿ ಎರಡು ದಿನ ಕೊರೊನಾ ನಿಯಂತ್ರಣದ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ’ ಎಂದು ತಿಳಿಸಿದರು.

‘ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಲ್ಲಿ ಅಡಿ 2,301, ಪ್ರಧಾನ ಮಂತ್ರಿ ಕಿಸಾನ್‌ ಸನ್ಮಾನ್ ಯೋಜನೆ ಅಡಿ 1,280, ಉಜ್ವಲ್ ಯೋಜನೆ ಅಡಿಯಲ್ಲಿ 739, ವಿವಿಧ ಪಿಂಚಣಿ ಯೋಜನೆಗಳ ಅಡಿ 506 ಫಲಾನುಭವಿಗಳು ಸೇರಿದಂತೆ ಒಟ್ಟು 5,026 ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ’ ಎಂದರು.

‘ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮ ಪಡೆಯ ಮೂಲಕ ಚೆಕ್‌ ಪೋಸ್ಟ್‌ ನಿರ್ಮಿಸಿ ಜನರ ಓಡಾಟ ತಡೆಯುವ ಜತೆಗೆ ವೈಯಕ್ತಿಕ ಮತ್ತು ಸಮುದಾಯ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಮಹಾರಾಷ್ಟ್ರದ 170 ನಿರಾಶ್ರಿತ ಕಾರ್ಮಿಕರಿಗೆ ಊಟ, ವಸತಿ ವ್ಯವಸ್ಥೆ, ವೈದ್ಯಕೀಯ ಸೌಲಭ್ಯ ಕಲ್ಪಿಸಲಾಗುತ್ತಿದೆ’ ಎಂದು ಹೇಳಿದರು.

‘ರೈತರು ಬೆಳೆದ ತರಕಾರಿ, ಹಣ್ಣುಗಳನ್ನು ರೈತರೇ ನೇರವಾಗಿ ಮಾರಾಟ ಮಾಡಲು ಅನುಕೂಲವಾಗುವಂತೆ ಮುಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ರೋಗಿಗಳಿಗೆ ಅಗತ್ಯವಿರುವ ಔಷಧಿಗಳನ್ನು ಬೆಂಗಳೂರಿನಿಂದ ತಂದು ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ’ ಎಂದರು.

‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಲ್ಲಿ ಸ್ಥಳೀಯ ಜನರಿಗೆ ವೈಯಕ್ತಿಕ ಮತ್ತು ಜಲ ಸಂರಕ್ಷಣಾ ಕಾಮಗಾರಿಗಳ ಮೂಲಕ ಉದ್ಯೋಗ ನೀಡಲಾಗುತ್ತಿದೆ’ ಎಂದು ನವೀನ್‌ ಕುಮಾರ್ ಅವರು ಮೋದಿ ಅವರಿಗೆ ತಿಳಿಸಿದರು.

ಆರಂಭದಲ್ಲಿ ಹಿಂದಿಯಲ್ಲಿ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ ನವೀನ್‌ ಕುಮಾರ್‌ ಅವರು ಬಳಿಕ ಕನ್ನಡದಲ್ಲಿ ಮಾತನಾಡಿದರು. ಅವರು ಹೇಳಿದ್ದನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಹಿಂದಿಗೆ ಭಾಷಾಂತರಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ಕೆಲ ಜಿಲ್ಲಾ ಪಂಚಾಯಿತಿ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.