
ಚಿಂತಾಮಣಿ: ಕೇಂದ್ರ ಸರ್ಕಾರವು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ರದ್ದುಗೊಳಿಸಿ ನೂತನವಾಗಿ ಜಾರಿಗೆ ತಂದಿರುವ ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ವಿಬಿ-ಜಿ ರಾಮ್ ಜಿ) ಯೋಜನೆ ಬಡವರಿಗೆ ಮಾರಕವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.
ತಾಲ್ಲೂಕಿನ ಕೋನಪಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೆಸ್ ಪಕ್ಷವು ವಿಬಿ ಜಿ ರಾಮ್ ಜಿ ಯೋಜನೆಯ ವಿರುದ್ಧ ಹೋರಾಟದ ಅಂಗವಾಗಿ ಜನರಲ್ಲಿ ಅರಿವು ಮೂಡಿಸಲು ಭಾನುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.
ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದ 2005ರಲ್ಲಿ ಮನರೇಗಾ ಪ್ರಾಯೋಗಿಕವಾಗಿ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಜಾರಿಗೊಳಿಸಲಾಗಿತ್ತು. ನಂತರ ಇಡೀ ದೇಶದ ಎಲ್ಲ ಗ್ರಾಮ ಪಂಚಾಯಿತಿಗಳಿಗೂ ವಿಸ್ತರಿಸಲಾಯಿತು. ಜಾಬ್ ಕಾರ್ಡ್ ಮೂಲಕ ಬಡವರಿಗೆ 100 ದಿನಗಳ ಕೆಲಸವೂ ದೊರೆಯಿತು. ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಕೆರೆಗಳ ಹೂಳು ತೆಗೆಯುವುದು, ಜಮೀನುಗಳಿಗೆ ರಸ್ತೆ, ಕಾಲುವೆಗಳ ನಿರ್ಮಾಣ, ಶಾಲೆಗಳ ಕಾಂಪೌಂಡ್, ಅಂಗನವಾಡಿ, ಗ್ರಾಮ ಪಂಚಾಯಿತಿ ಕಟ್ಟಡಗಳ ನಿರ್ಮಾಣ ಮತ್ತಿತರ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೂ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅವಕಾಶವಿತ್ತು. ಮಹಿಳೆಯರೇ ಹೆಚ್ಚಿನ ಫಲಾನುಭವಿಗಳಾಗಿದ್ದರು ಎಂದರು.
ಮನರೇಗಾ ಯೋಜನೆಯಲ್ಲಿ ಕೇಂದ್ರ ಸರ್ಕಾರ ಶೇ 90 ಮತ್ತು ರಾಜ್ಯ ಸರ್ಕಾರ ಶೇ 10ರಷ್ಟು ಅನುದಾನ ನೀಡುತ್ತಿದ್ದವು. ಕೇಂದ್ರ ಸರ್ಕಾರವು ರಾಜ್ಯಗಳ ಜತೆ ಸಮಾಲೋಚನೆ ಮಾಡದೆ, ಸರ್ವಾಧಿಕಾರ ಧೋರಣೆಯಿಂದ ಏಕಾಏಕಿ ಕೇಂದ್ರ ಶೇ 60, ರಾಜ್ಯ ಸರ್ಕಾರ ಶೇ 40ರಷ್ಟು ನೀಡಲು ತಿಳಿಸಿದೆ. ರಾಜ್ಯಗಳು ಮೇಲೆ ಆರ್ಥಿಕ ಹೊರೆ ಬೀಳುತ್ತದೆ. ರಾಜ್ಯಗಳ ಬಳಿ ಹಣ ಇರುವುದಿಲ್ಲ, ರಾಜಕೀಯ ಕಾರಣಗಳಿಂದ ಕೇಂದ್ರ ಸರ್ಕಾರ ನೀಡುವುದಿಲ್ಲ. ಕಾಲಾನುಕ್ರಮ ಯೋಜನೆಯು ಸ್ಥಗಿತಗೊಳ್ಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಗ್ರಾಮ ಸಭೆಗಳಲ್ಲಿ ಆಯ್ಕೆಯಾದ ಕೆಲಸಗಳ ಕ್ರಿಯಾಯೋಜನೆ ತಯಾರಿಸಿ ಕೈಗೆತ್ತಿಕೊಳ್ಳುವ ಸ್ವಾತಂತ್ರ್ಯವಿತ್ತು. ಹೊಸ ಯೋಜನೆಯಲ್ಲಿ ಗ್ರಾಮ ಪಂಚಾಯಿತಿಗಳಿಗೆ ಸ್ವಾತಂತ್ರ್ಯವಿಲ್ಲ. ಕೇಂದ್ರ ಸರ್ಕಾರದ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಅವರು ಅನುಮತಿ ನೀಡಿದ ಕೆಲಗಳನ್ನು ಮಾತ್ರ ಕೈಗೆತ್ತಿಕೊಳ್ಳಬೇಕಾಗುತ್ತದೆ. ₹80-90ರಿಂದ ಆರಂಭವಾದ ಕೂಲಿ ಪ್ರಸ್ತುತ ₹375 ಇತ್ತು. ಕೆಲವು ಸಂದರ್ಭಗಳಲ್ಲಿ ಹೆಚ್ಚಿಸುವ ಅವಕಾಶವೂ ಮನರೇಗಾ ಯೋಜನೆಯಲ್ಲಿತ್ತು ಎಂದರು.
ಕೇಂದ್ರ ಸರ್ಕಾರವು ಹಲವಾರು ನಿರ್ಬಂಧಗಳನ್ನು ವಿಧಿಸುವ ಮೂಲಕ ಗ್ರಾಮ ಪಂಚಾಯಿತಿಗಳ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿದೆ. ಕೆಲಸದ ದಿನಗಳನ್ನು 125ಕ್ಕೆ ಎರಿಸಿದ್ದೇವೆ ಎನ್ನುತ್ತಾರೆ. ಕೃಷಿ ಸಮಯದಲ್ಲಿ 60 ದಿನ ಕೆಲಸವೇ ನೀಡುವುದಿಲ್ಲ. ಮನರೇಗಾದಲ್ಲಿ ಬರಗಾಲ ಮತ್ತಿತರ ಕೆಲವು ಸಂದರ್ಭಗಳಲ್ಲಿ 150 ದಿನಗಳಿಗೆ ವಿಸ್ತರಿಸುವ ಅವಕಾಸವಿತ್ತು. ನೂತನ ಯೋಜನೆಯಲ್ಲಿ 125 ದಿನಕ್ಕಿಂತ ಹೆಚ್ಚಿನ ದಿನಗಳಾದರೆ ರಾಜ್ಯ ಸರ್ಕಾರಗಳೇ ಭರಿಸಬೇಕು ಎನ್ನುವುದು ಖಂಡನೀಯ ಎಂದು ತಿಳಿಸಿದರು.
ಮನರೇಗಾದಲ್ಲಿ ಒಂದೆರಡು ಕಡೆ ಸಲ್ಪ-ಸ್ವಲ್ಪ ಅಕ್ರಮಗಳು ನಡೆದಿದ್ದರೂ ಶೇ 90ರಷ್ಟು ಒಳ್ಳೆಯ ಕೆಲಸಗಳಾಗಿದ್ದವು. ಅಕ್ರಮವನ್ನು ತಡೆಯಲು ಬಿಗಿ ಕ್ರಮಗಳನ್ನು ಕೈಗೊಳ್ಳಬಹುದಾಗಿತ್ತು. ಬಡ ವರ್ಗದವರಿಗೆ ಮಾರಕವಾಗಿರುವ ಹಾಗೂ ರಾಜ್ಯಗಳಿಗೆ ಆರ್ಥಿಕ ಹೊರೆಯಾಗುವ ಯೋಜನೆಯನ್ನು ಹಿಂಪಡೆದು ಮನರೇಗಾ ಯೋಜನೆಯನ್ನು ಮರುಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಹಿಂದೂ ಧರ್ಮವು ಭೂಮಂಡಲ ಇರುವವರೆಗೂ ಶಾಶ್ವತವಾಗಿರುತ್ತದೆ. ಹಿಂದೆ ಎಷ್ಟೋ ದಾಳಿ ನಡೆದರೂ ಧರ್ಮ ಉಳಿದಿದೆ. ಈ ಧರ್ಮವನ್ನು ಯಾರು ಏನು ಮಾಡಲು ಸಾಧ್ಯವಿಲ್ಲ. ಕೆಲವರು ರಾಜಕೀಯ ಕಾರಣಗಳಿಂದ ಜಾತಿ, ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ವಿಷಬೀಜ ಬಿತ್ತುತ್ತಿದ್ದಾರೆ. ಮುಗ್ದ ಮತ್ತು ಅಮಾಯಕ ಜನರನ್ನು ಜಾತಿಗಳ ಹೆಸರಿನಲ್ಲಿ ಎತ್ತಿಕಟ್ಟುತ್ತಿದ್ದಾರೆ. ಜನರ ಭಾವನೆಗಳನ್ನು ದುರ್ಬಳಕೆ ಮಾಡಿಕೊಳ್ಳಲು ಹೊರಟಿದ್ದಾರೆ ಎಂದು ಟೀಕಿಸಿದರು.
ಎಐಸಿಸಿ ಕಾರ್ಯದರ್ಶಿ ಅಭಿಷೇಕದತ್ತ ಮಾತನಾಡಿದರು. ಕೋನಪಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು, ಅಂಬಾಜಿದುರ್ಗ ಹೋಬಳಿಯ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.