ADVERTISEMENT

ಚಿಕ್ಕಬಳ್ಳಾಪುರ: ಜಿಲ್ಲೆಯ ತುಂಬಾ ಗಾಂಧಿ ಪಯಣ

ಶಾಲಾ ಕಾಲೇಜುಗಳಲ್ಲಿ ಶಿವಮೊಗ್ಗ ರಂಗಾಯಣದ ವಿಭಾಗದ ಕಲಾವಿದರಿಂದ ‘ಪಾಪು ಗಾಂಧಿ ಬಾಪು ಗಾಂಧಿ ಆದ ಕಥೆ’ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 13:15 IST
Last Updated 4 ಫೆಬ್ರುವರಿ 2020, 13:15 IST
‘ಪಾಪು ಗಾಂಧಿ ಬಾಪು ಗಾಂಧಿ ಆದ ಕಥೆ’ ನಾಟಕದ ದೃಶ್ಯ
‘ಪಾಪು ಗಾಂಧಿ ಬಾಪು ಗಾಂಧಿ ಆದ ಕಥೆ’ ನಾಟಕದ ದೃಶ್ಯ   

ಚಿಕ್ಕಬಳ್ಳಾಪುರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸಹಯೋಗದ ‘ಪಾಪು ಗಾಂಧಿ ಬಾಪು ಗಾಂಧಿ ಆದ ಕಥೆ’ ಎಂಬ ರಂಗಯಾತ್ರೆಗೆ ಜಿಲ್ಲೆಯಲ್ಲಿ ಚಾಲನೆ ದೊರೆತಿದೆ.

ಬೊಳುವಾರು ಮಹಮ್ಮದ್ ಕುಂಞಿ ಅವರ ಕಾದಂಬರಿ ಆಧಾರಿತ ಈ ನಾಟಕವನ್ನು ಶಿವಮೊಗ್ಗ ರಂಗಾಯಣದ ವಿಭಾಗದ ಕಲಾವಿದರು ಶಾಲಾ, ಕಾಲೇಜುಗಳಲ್ಲಿ ಉಚಿತವಾಗಿ ಪ್ರದರ್ಶಿಸುತ್ತಿದ್ದಾರೆ.

ಮಕ್ಕಳಲ್ಲಿ ಗಾಂಧೀಜಿ ಅವರ ವಿಚಾರಧಾರೆ, ತತ್ವಾದರ್ಶಗಳನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ರೂಪಿಸಿದ ಒಂದು ಗಂಟೆ ಹತ್ತು ನಿಮಿಷದ ನಾಟಕವನ್ನು ರಂಗಯಾತ್ರೆಯ ಪ್ರಧಾನ ಸಂಚಾಲಕ ಶ್ರೀಪಾದಭಟ್ ಅವರು ನಿರ್ದೇಶಿಸಿದ್ದಾರೆ.

ADVERTISEMENT

ತಾಲ್ಲೂಕಿನ ಗುಂತಪ್ಪನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಾಟಕದ ಮೊದಲ ಪ್ರದರ್ಶನ ನಡೆಯಿತು. ಮಂಗಳವಾರ ಎರಡನೇ ಪ್ರದರ್ಶನ ತಾಲ್ಲೂಕಿನ ಗಂಡ್ಲಹಳ್ಳಿ ಶಾಲೆಯಲ್ಲಿ, ಮೂರನೇ ಪ್ರದರ್ಶನ ಚಿಕ್ಕಬಳ್ಳಾಪುರದ ವಾಪಸಂದ್ರದ ಸರ್ಕಾರಿ ಹಿರಿಯ ಮತ್ತು ಪ್ರೌಢಶಾಲೆಯಲ್ಲಿ ನಡೆಯಿತು.

ಮಹಾತ್ಮಾ ಗಾಂಧೀಜಿ ಅವರು ಬಾಲಕನಾಗಿದ್ದಾಗ ಎದುರಾದ ಸವಾಲುಗಳು, ಬ್ಯಾರಿಸ್ಟರ್‌ ಪದವಿ ಪಡೆಯಲು ಲಂಡನ್‌ಗೆ ಹೋದ ಸಂದರ್ಭ ಅಲ್ಲಿನ ಸಂಸ್ಕೃತಿಗೆ ಹೊಂದಿಕೊಳ್ಳಲು ಪ್ರಯತ್ನಿಸಿದ ಸಂದರ್ಭಗಳು ಪ್ರೇಕ್ಷಕರಿಗೆ ಮನರಂಜನೆ ನೀಡಿದವು.

ಗಾಂಧೀಜಿಯವರಿಗೆ ಗೋಡ್ಸೆ ಒಂದು ಬಾರಿ ಗುಂಡಿಟ್ಟು ಸಾಯಿಸಿದ. ಆದರೆ, ಈಗ ಪ್ರತಿ ನಿತ್ಯ ಆ ಮಹಾ ಚೇತನಕ್ಕೆ ಸುಳ್ಳು ಅಂಶಗಳ ಮೂಲಕ ಮಸಿ ಬಳಿಯುವ, ಗೆರೆ ಎಳೆಯುವ ಕಾರ್ಯಗಳು ನಡೆಯುತ್ತಿವೆ. ಅವು ನಿಲ್ಲಬೇಕು ಎಂಬ ಆಶಯದೊಂದಿಗೆ ನಾಟಕ ಸಮಾಪ್ತಿಯಾಗುತ್ತದೆ.

ಗಾಂಧಿ ಪಯಣ ರಂಗಯಾತ್ರೆಯಲ್ಲಿ ತೊಡಗಿಸಿಕೊಂಡಿರುವ ರಂಗಭೂಮಿ ಕಲಾವಿದರಾದ ಎಸ್‌.ಎಂ.ಮಹದೇವಸ್ವಾಮಿ (ನಂಜನಗೂಡು), ಪೂರ್ಣಿಮ ಗಬ್ಬೂರು (ಬೆಳಗಾವಿ), ಅಶ್ವಿನಿ ಪ್ರಸಾದ್ (ತುಮಕೂರು), ವಿದ್ಯಾರಾಣಿ (ಕೋಲಾರ ), ಸ್ವರೂಪ್( ಮೈಸೂರು), ನಂದೀಶ್ (ಚಾಮರಾಜನಗರ ), ಜಗದೀಶ್ ಕಟ್ಟಿಮನಿ (ಹಾವೇರಿ ), ರಂಜೀತ್ ಕುಮಾರ್ ( ಚಿಕ್ಕಮಗಳೂರು), ಎಂ.ವೆಂಕಟೇಶ್ (ಮೈಸೂರು ), ಲಕ್ಷ್ಮಣ್ ರೊಟ್ಟಿ (ಹಾವೇರಿ ), ಸುಮನ್ ಹಿಮ್ಮಡಿ (ಬೆಳಗಾವಿ ), ಮಂಜುನಾಥ ಕಠಾರಿ (ಬೆಳಗಾವಿ ), ಬಿ.ಕೆ.ಮಹಾಬಲೇಶ್ವರ್ (ಶಿವಮೊಗ್ಗ ), ಎಂ.ಗಣೇಶ್ (ಹೆಗ್ಗೋಡು ಸಾಗರ ), ಆರ್.ದಿಲೀಪ್ ಕುಮಾರ್ (ಚಿಕ್ಕಬಳ್ಳಾಪುರ) ಅವರು ತಮ್ಮ ಮನೋಜ್ಞ ಅಭಿನಯದ ಮೂಲಕ ವಿದ್ಯಾರ್ಥಿಗಳಿಗೆ ಗಾಂಧೀಜಿ ಅವರ ಬದುಕಿನ ದರ್ಶನ ಮಾಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.