ADVERTISEMENT

ಆಲಂಬಗಿರಿ: ಸಂಭ್ರಮದ ವಿಜಯದಶಮಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 6:03 IST
Last Updated 4 ಅಕ್ಟೋಬರ್ 2025, 6:03 IST
ಚಿಂತಾಮಣಿ ತಾಲ್ಲೂಕಿನ ಆಲಂಬಗಿರಿಯಲ್ಲಿ ಗುರುವಾರ ವಿಜಯದಶಮಿ ಪ್ರಯುಕ್ತ ಸಂಕೀರ್ತನಾ ಮೆರವಣಿಗೆ
ಚಿಂತಾಮಣಿ ತಾಲ್ಲೂಕಿನ ಆಲಂಬಗಿರಿಯಲ್ಲಿ ಗುರುವಾರ ವಿಜಯದಶಮಿ ಪ್ರಯುಕ್ತ ಸಂಕೀರ್ತನಾ ಮೆರವಣಿಗೆ   

ಚಿಂತಾಮಣಿ: ತಾಲ್ಲೂಕಿನ ಆಲಂಬಗಿರಿ ಕ್ಷೇತ್ರದ ಕಲ್ಕಿ ಲಕ್ಷಿ ವೆಂಕಟರಮಣ ದೇವಾಲಯದಲ್ಲಿ ನವರಾತ್ರಿ ವಿಜಯದಶಮಿಯನ್ನು ಗುರುವಾರ ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ನವರಾತ್ರಿಯ ಕೊನೆಯ ದಿನವಾದ ಗುರುವಾರ ಬೆಳಗ್ಗೆಯಿಂದಲೇ ವಿವಿಧ ಕಡೆಗಳಿಂದ ಬಂದಿದ್ದ ಭಕ್ತರು ದೇವಾಲಯದಲ್ಲಿ ಸರತಿ ಸಾಲಿನಲ್ಲಿ ನಿಂತು ಹಣ್ಣು ಕಾಯಿ ನೀಡಿ ಪೂಜೆ ಸಲ್ಲಿಸಿದರು. ಶಮೀವೃಕ್ಷದ ಪೂಜೆ ಏರ್ಪಡಿಸಲಾಗಿತ್ತು. ದೇವಾಲಯದಿಂದ ಸುಮಾರು 1 ಕಿ.ಮೀ ದೂರದಲ್ಲಿರುವ ಶಮೀವೃಕ್ಷ ಮಂಟಪದ ಹತ್ತಿರ ಬಿಲ್ಲುಬಾಣದ ಪೂಜೆ ನೆರವೇರಿಸಲಾಯಿತು.

ವಿಶೇಷ ಮಂಟಪದಲ್ಲಿ ಅಲಂಕರಿಸಲಾಗಿದ್ದ ಲಕ್ಷ್ಮಿ ವೆಂಕಟರಮಣ ಉತ್ಸವ ಮೂರ್ತಿಯನ್ನು ದೇವಾಲಯದಿಂದ ಮಂಗಳವಾದ್ಯದೊಂದಿಗೆ ಮೆರವಣಿಗೆಯಲ್ಲಿ ಶಮೀವೃಕ್ಷದ ಮಂಟಪದವರೆಗೆ ಕರೆತರಲಾಯಿತು. ಸಂಕೀರ್ತನಾ ಪಾದಯಾತ್ರೆಯಲ್ಲಿ ದೇವರ ಉತ್ಸವದೊಂದಿಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಕ್ಷೇತ್ರದ ಧರ್ಮಾಧಿಕಾರಿ ಎಂ.ಆರ್.ಜಯರಾಂ ಸಹ ಸಂಕೀರ್ತನೆಯೊಂದಿಗೆ ನಡೆದುಬಂದರು.

ADVERTISEMENT

ಶಮೀ ಮಂಟಪದ ಬಳಿ ವಿಶೇಷ ಪೂಜಾ ವ್ಯವಸ್ಥೆ ಮಾಡಲಾಗಿತ್ತು. ಶಮೀವೃಕ್ಷಕ್ಕೆ ವಿವಿಧ ಹೂವುಗಳಿಂದ ಅಲಂಕರಿಸಿ, ಬಿಲ್ಲುಬಾಣಗಳನ್ನು ಇಟ್ಟು ಪೂಜೆ ಸಲ್ಲಿಸಲಾಯಿತು. ಶಾಸ್ತ್ರೋಕ್ತವಾಗಿ ಅರ್ಚಕವೃಂದ ವೇದಘೋಷ ಮಾಡಿದರು. ಎಂ.ಆರ್.ಜಯರಾಂ ದಂಪತಿ ಪೂಜೆ ಸಲ್ಲಿಸಿದರು.

ಗ್ರಾಮದ ರಥಬೀದಿಯಲ್ಲಿ ಸ್ವಾಮಿಯ ಉತ್ಸವ ನಡೆಯಿತು. ಗ್ರಾಮಸ್ಥರು ಮನೆ ಮನೆಗೂ ಪೂಜೆಗೆ ನೀಡಿದರು. ಉತ್ಸವ ಮೂರ್ತಿಗಳನ್ನು ದೇವಾಲಯಕ್ಕೆ ಕರೆತಂದು ಅಷ್ಟಾವಧಾನ ಸೇವೆ ನೆರೆವೇರಿಸಲಾಯಿತು. ನಂತರ ಸಾಮೂಹಿಕವಾಗಿ ಸಂಕೀರ್ತನೆ ಸಮರ್ಪಿಸಿ, ಮಹಾಮಂಗಳಾರತಿ ಮಾಡಲಾಯಿತು.

ನವರಾತ್ರಿಯ 9 ದಿನಗಳಲ್ಲಿ ಆಲಂಬಗಿರಿಯ ದೇವಾಲಯದಲ್ಲಿ ವಿಶೇಷ ಪೂಜಾ ವ್ಯವಸ್ಥೆ, ಭಜನೆ, ಸಂಕೀರ್ತನೆ ಏರ್ಪಡಿಸಲಾಗಿತ್ತು. ದೇವಾಲಯದ ಭಜನಾ ಮಂಟಪದಲ್ಲಿ ಭಕ್ತರು ಪ್ರತಿದಿನವೂ ಭಜನೆ ಮಾಡುತ್ತಿದ್ದರು.

ಯೋಗಿನಾರೇಯಣ ಸಂಕೀರ್ತನಾ ಯೋಜನೆ ಸಂಚಾಲಕ ಬಾಲಕೃಷ್ಣ ಭಾಗವತರ್, ಟ್ರಸ್ಟ್ ನಿರ್ದೇಶಕ ಆರ್.ಪಿ.ಎಂ.ಸತ್ಯನಾರಾಯಣ್, ಉಪನ್ಯಾಸಕ ಯರಮರೆಡ್ಡಿಹಳ್ಳಿ ವೆಂಕಟರವಣಪ್ಪ, ಆಡಳಿತಾಧಿಕಾರಿ ಕೆ.ಲಕ್ಷ್ಮಿನಾರಾಯಣ, ಹಿರಿಯ ಪ್ರವಚನಕಾರ ತಳಗವಾರ ಆನಂದ್, ಗ್ರಾಮಸ್ಥರು ಹಾಗೂ ಭಕ್ತರು ಭಾಗವಹಿಸಿದ್ದರು.

ವಿಜಯದಶಮಿಯಂದು ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.