ADVERTISEMENT

ಶಿಡ್ಲಘಟ್ಟ | ಮರೆಯಾದ ಹಿಟ್ಕೋಲು, ಮೆಟ್ಕೋಲು

ಮನೆಬಳಕೆಯ ವಸ್ತುಗಳಿಗೆ ಆಧುನಿಕತೆಯ ಸ್ವರ್ಶ

ಡಿ.ಜಿ.ಮಲ್ಲಿಕಾರ್ಜುನ
Published 21 ಜೂನ್ 2020, 9:00 IST
Last Updated 21 ಜೂನ್ 2020, 9:00 IST
ಶಿಡ್ಲಘಟ್ಟದಲ್ಲಿ ಹಿಟ್ಕೋಲು, ಮೆಟ್ಕೋಲು ಮಾರುತ್ತಿದ್ದ ಮಹಿಳೆ
ಶಿಡ್ಲಘಟ್ಟದಲ್ಲಿ ಹಿಟ್ಕೋಲು, ಮೆಟ್ಕೋಲು ಮಾರುತ್ತಿದ್ದ ಮಹಿಳೆ   

ಶಿಡ್ಲಘಟ್ಟ: ಮನೆಬಳಕೆಯ ವಸ್ತುಗಳಿಗೆ ಆಧುನಿಕತೆಯ ಸ್ಪರ್ಶ ಬಂದಿರುವುದರಿಂದ ಹಲವು ವಸ್ತುಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿವೆ.ಅಂತಹ ವಸ್ತುಗಳಲ್ಲಿ ಪ್ರಮುಖವಾದದ್ದು ಹಿಟ್ಕೋಲು ಮತ್ತು ಮೆಟ್ಕೋಲು.

ಮೆಟ್ಕೋಲು ಅಥವಾ ಕವೆಗೋಲಿನ ಕವಲನ್ನು ಮುದ್ದೆತೊಳೆಸುವ ಬಾನೆ ಅಥವಾ ಮಡಕೆ ಅಥವಾ ಪಾತ್ರೆ ಕಂಠಕ್ಕೆ ಹಾಕಿ ಗಟ್ಟಿಯಾಗಿ ಅಲುಗಾಡದಂತೆ ಕಾಲಿನಲ್ಲಿ ತುಳಿದುಕೊಳ್ಳುತ್ತಾರೆ. ಹಿಟ್ಕೋಲನ್ನು ಮುದ್ದೆ ತೊಳೆಸಲು ಬಳಸುತ್ತಾರೆ.

ಪಾತಗೌನಿಪಲ್ಲಿಯ ಜಯಮ್ಮ, ಹಿಟ್ಕೋಲು, ಮೆಟ್ಕೋಲು ಮಾರಾಟಕ್ಕೆ ಶಿಡ್ಲಘಟ್ಟಕ್ಕೆ ಬಂದಿದ್ದರು. ಈಗಿನ ದಿನಗಳಲ್ಲಿ ಯಾರು ಇದನ್ನು ಕೊಳ್ಳುತ್ತಾರೆ ಎಂದಾಗ ಆಕೆ, ‘ಅಟ್ಲೈತೆ, ಜನಾಲು ಸಂಗಟಿ ಸೇಸೇದಿ ಇಡಿಸಿಪೆಟ್ಟೇಸಿಂಡಾರಾ?’ (ಹಾಗಾದ್ರೆ, ಜನ ಮುದ್ದೆ ಮಾಡೋದನ್ನು ಬಿಟ್ಟುಬಿಟ್ಟಿದ್ದಾರಾ?) ಎಂದು ಹೇಳಿದರು. ಹಿಟ್ಕೋಲು ₹10, ಮೆಟ್ಕೋಲು ₹20ಕ್ಕೆ ಮಾರುತ್ತಿರುವುದಾಗಿ ಆಕೆ ತಿಳಿಸಿದರು.

ADVERTISEMENT

ಮನೆ ಎಂದ ಮೇಲೆ ಅಡುಗೆ ಮನೆ, ಅಡುಗೆ ಮನೆಗೆ ತಕ್ಕ ಪರಿಕರಗಳು ಇರುತ್ತವೆ. ಎಲ್ಲಾ ಹಳ್ಳಿ ಮನೆಯಲ್ಲೂ ಅಡುಗೆ ಮನೆ ಇರುತ್ತಿರಲಿಲ್ಲ. ಬದಲಿಗೆ ಮೂಲೆಮನೆ ಇರುತ್ತಿತ್ತು. ಗ್ರಾಮೀಣರು ಅಡುಗೆ ಮನೆಗೆ ಕೊಟ್ಟಿರುವ ಪರ್ಯಾಯ ಪದ ಈ ‘ಮೂಲೆ ಮನೆ’ ಎಂಬುದಾಗಿದೆ.

ಹಳ್ಳಿ ಅಡುಗೆ ಮನೆ ಸಾಮಗ್ರಿಗಳಲ್ಲಿ ಮುದ್ದೆ ತಯಾರಿಕೆಗೆ ರಾಗ್ಕಲ್ಲು(ರಾಗಿ ಬೀಸುವ ಕಲ್ಲು), ಹಿಟ್ಮಡಿಕೆ(ಹಿಟ್ಟು ತೊಳಿಸುವ ಮಡಿಕೆ), ಹಿಟ್ಕೋಲು, ಮೆಟ್ಕೋಲು, ಸೊಟ್ಕೋಲು(ಸಿಪ್‌ಕಟ್ಟೆ), ಹಿಟ್ಕಲ್ಲು(ಮುದ್ದೆ ಮಾಡುವ ಕಲ್ಲು) ಪ್ರಮುಖವಾಗಿದ್ದವು.

ಮುದ್ದೆ ತೊಳೆಸಿದರೇನೆ ಅದು ಮುದ್ದೆ ಅನಿಸುವುದು. ಕಾರಣ ತೊಳಿಸಿದಾಗಲೇ ಹಿಟ್ಟು ಚೆನ್ನಾಗಿ ಎಸರಿನಲ್ಲಿ ಬೆರತು ಬೆಂದು ಮುದ್ದೆಯಾಗುವುದು. ಅದಕ್ಕೆ ಹಿಟ್ಕೋಲು ಇರಲೇ ಬೇಕು. ಕಡಿಮೆ ಜನಕ್ಕೆ ಮುದ್ದೆ ತೊಳಿಸುವಾಗ ಒಂಟಿಯಾಗಿ, ಹೆಚ್ಚು ಮಂದಿಗೆ ತೊಳಿಸಬೇಕಾದಾಗ ಜೋಡಿ ಹಿಟ್ಕೋಲುಗಳನ್ನು ಬಳಸುತ್ತಾರೆ.

ತೊಳೆಸುವುದು ಸರಿಯಾಗಿ ಆಗಬೇಕಾದರೆ ಮೆಟ್ಕೋಲು ಇರಲೇಬೇಕು. ಏಕೆಂದರೆ ತೊಳೆಸುವ ಒತ್ತಡಕ್ಕೆ ಪಾತ್ರೆ ಕದಲಬಾರದು. ಇದು ಮುದ್ದೆ ತೊಳೆಸುವವರಿಗೆ ಸುರಕ್ಷಿತ ಸಾಧನವೂ ಹೌದು. ಏಕೆಂದರೆ ಬಾನೆಯಲ್ಲಿ ಹಿಟ್ಟಿನ ಕುದಿಯಿರುತ್ತದೆ. ಅದು ಮೈಮೇಲೆ ಬೀಳದಂತಿರಲು ಮೆಟ್ಕೋಲು (ಕವೆಗೋಲು) ಆಧಾರವಾಗಿದೆ.

ಸೊಟ್ಕೋಲು ಅಥವಾ ಸಿಪ್‌ಕಟ್ಟೆಯು ತೆಂಗಿನ ಚಿಪ್ಪಿನ ಕಣ್ಣಿಗೆ ಚೂಪಾದ ಕೋಲನ್ನು ಸೇರಿಸಿ ಮಾಡಿದ ಸೌಟು. ಕಡಿಮೆ ಜನಕ್ಕೆ ಮುದ್ದೆ ತಯಾರಿಸಲು ಹಿಟ್ಮಡಿಕೆ ಬಳಕೆಯಾದರೆ, ದೊಡ್ಡ ಕುಟುಂಬಕ್ಕೆ ಹಿಟ್ಬಾನೆ ಬಳಸುವರು.

ಮಾಯವಾದ ಗ್ರಾಮೀಣ ಸೊಗಡು
‘ಆಧುನಿಕತೆಯ ಪ್ರವೇಶದಿಂದ ಈ ಭಾರವಾದ ಕಲ್ಲಿನ ಪರಿಕರಗಳನ್ನು ಬಳಸುವುದು ಕಡಿಮೆಯಾಗುತ್ತಿದೆ. ಹಿಟ್ಕಲ್ಲಿನ ಮೇಲೆ ಮಾಡಿದ ಮುದ್ದೆಯ ಹದ, ರುಚಿ ಬಹಳ ಚೆನ್ನಾಗಿರುತ್ತದೆ. ಆದರೂ ಮನೆಗಳಲ್ಲಿ ಟೈಲ್ಸ್‌, ಮಾರ್ಬಲ್‌ ಮುಂತಾದವುಗಳನ್ನು ಹಾಕಿರುತ್ತಾರೆ. ಈ ಕಲ್ಲು ಬೇಡವಾಗುತ್ತಿದೆ. ಅದರೊಂದಿಗೆ ಹಲವಾರು ಪರಿಕರಗಳು ಮಾಯವಾಗುತ್ತಾ ಮುಂದಿನ ತಲೆಮಾರಿನವರಿಗೆ ಅವನ್ನೆಲ್ಲಾ ಜನಪದ ಸಂಗ್ರಹಾಲಯದಲ್ಲಿ ತೋರಿಸಬೇಕಾಗುತ್ತದೆ. ಆದರೆ ಅದರ ರುಚಿ, ಸ್ವಾದ, ಗಾದೆ ಮಾತುಗಳನ್ನು ಹೇಗೆ ವಿವರಿಸಲು ಸಾಧ್ಯ’ ಎನ್ನುತ್ತಾರೆ ಶಿಕ್ಷಕ ನಾಗಭೂಷಣ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.