ADVERTISEMENT

ಬಾಯಾರಿದ ಗೌರಿಬಿದನೂರಿಗೆ ಬೇಕಿದೆ ನೀರು

ಕಾಂಗ್ರೆಸ್‌ ಬೆಂಬಲಿಸಿರುವ ಪಕ್ಷೇತರ ಶಾಸಕ ಕೆ.ಎಚ್.‍ಪುಟ್ಟಸ್ವಾಮಿಗೌಡ ಅವರಿಗೆ ಅನುದಾನ ತರುವ ಸವಾಲು

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2024, 5:50 IST
Last Updated 10 ಫೆಬ್ರುವರಿ 2024, 5:50 IST
ಗೌರಿಬಿದನೂರು ತಾಲ್ಲೂಕು ಮರಳೂರು ಕೆರೆಗೆ ಎಚ್‌.ಎನ್.ವ್ಯಾಲಿ ನೀರು ಹರಿಯುತ್ತಿರುವುದು
ಗೌರಿಬಿದನೂರು ತಾಲ್ಲೂಕು ಮರಳೂರು ಕೆರೆಗೆ ಎಚ್‌.ಎನ್.ವ್ಯಾಲಿ ನೀರು ಹರಿಯುತ್ತಿರುವುದು   

ಗೌರಿಬಿದನೂರು: ನೆರೆಯ ಆಂಧ್ರಪ್ರದೇಶದ ಗಡಿಗ್ರಾಮಗಳ ಕೊಳವೆ ಬಾವಿಗಳಲ್ಲಿ ಸಮೃದ್ಧವಾಗಿ ನೀರು ಬರುತ್ತಿದೆ. ಆದರೆ ಗೌರಿಬಿದನೂರು ತಾಲ್ಲೂಕು ಮಾತ್ರ ಶಾಶ್ವತವಾಗಿ ನೀರಿನ ಹಾಹಾಕಾರ ಎದುರಿಸುತ್ತಿದೆ.

ಯಾವುದೇ ಪಕ್ಷದ ರಾಜಕೀಯ ನಾಯಕರು, ರೈತ ಸಂಘದ ಮುಖಂಡರು, ಜನಸಾಮಾನ್ಯರು, ಹೋರಾಟಗಾರರು ಹೀಗೆ ಯಾರನ್ನೇ ಆದರೂ ‘ಈ ಬಾರಿಯ ಬಜೆಟ್‌ನಲ್ಲಿ ನಿಮ್ಮ ತಾಲ್ಲೂಕಿಗೆ ಏನು ಅಗತ್ಯವಿದೆ’ ಎಂದು ಪ್ರಶ್ನಿಸಿದರೆ, ತಟ್ಟನೆ ಹೇಳುವುದು ‘ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಬೇಕು. ನೀರಿನ ಸಮಸ್ಯೆ ಪರಿಹರಿಸಬೇಕು’ ಎಂದು ಉತ್ತರಿಸುತ್ತಾರೆ.

ವೇಗವಾಗಿ ಬೆಳೆಯುತ್ತಿರುವ ಜಿಲ್ಲೆಯ ತಾಲ್ಲೂಕುಗಳಲ್ಲಿ ಗೌರಿಬಿದನೂರು ಪ್ರಮುಖವಾಗಿದೆ. ನೆರೆಯ ತುಮಕೂರು ಜಿಲ್ಲೆಯ ಮಧುಗಿರಿ ಮತ್ತು ಕೊರಟಗೆರೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರಕ್ಕೆ ಹೊಂದಿಕೊಂಡಿರುವ ಗೌರಿಬಿದನೂರಿಗೆ ಸರ್ಕಾರದ ಅನುದಾನಗಳ ಬಲ ದೊರೆತರೆ ಅಭಿವೃದ್ಧಿಯ ವೇಗ ನಾಗಾಲೋಟವಾಗಲಿದೆ.

ADVERTISEMENT

ಆದರೆ ಎಲ್ಲ ಸರ್ಕಾರಗಳೂ ನೀರಾವರಿ ವಿಚಾರವಾಗಿ ತಾಲ್ಲೂಕನ್ನು ನಿರ್ಲಕ್ಷಿಸಿವೆ. ಜಿಲ್ಲೆಗೆ ಎತ್ತಿನಹೊಳೆ ನೀರು ಪ್ರವೇಶಿಸಲಿರುವ ಹೆಬ್ಬಾಗಿಲೇ ಗೌರಿಬಿದನೂರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2022ರಲ್ಲಿ ಮಂಡಿಸಿದ ಬಜೆಟ್‌ನಲ್ಲಿ ‘ಎತ್ತಿನಹೊಳೆ ಯೋಜನೆಯ ಎರಡನೇ ಹಂತದ 260 ಕಿ.ಮೀ ಉದ್ದದ ಗುರುತ್ವ ಕಾಲುವೆ ಟಿ.ಜಿ. ಹಳ್ಳಿ-ರಾಮನಗರ ಫೀಡರ್, ಮಧುಗಿರಿ ಫೀಡರ್ ಹಾಗೂ ಗೌರಿಬಿದನೂರು ಫೀಡರ್ ಕಾಲುವೆ ಕಾಮಗಾರಿಗಳನ್ನು ಪ್ರಸಕ್ತ ಸಾಲಿನಲ್ಲಿ ಪೂರ್ಣಗೊಳಿಸಿ, ಮುಂದಿನ ವರ್ಷದ ಮುಂಗಾರು ಹಂಗಾಮಿನಲ್ಲಿ ನೀರು ಪೂರೈಕೆಗೆ ಕ್ರಮ ಜರುಗಿಸಲಾಗುವುದು ಎಂದು ಪ್ರಕಟಿಸಿದ್ದರು. ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೆ ₹ 3,000 ಕೋಟಿ ಅನುದಾನ ನೀಡಿದ್ದರು. 

ಈ ಘೋಷಣೆಯಾಗಿ ಎರಡು ವರ್ಷವಾಗಿದೆ. ಹೀಗಿದ್ದರೂ ಎತ್ತಿನಹೊಳೆ ನೀರು ಗೌರಿಬಿದನೂರಿಗೆ ತಲುಪಿಲ್ಲ. ಇನ್ನೂ ಕಾಮಗಾರಿ ನಡೆಯುತ್ತಲೇ ಇದೆ. ಎತ್ತಿನಹೊಳೆಯ ನೀರಿನ ಮೇಲೆ ತಾಲ್ಲೂಕಿನ ಜನರು ಅಪಾರ ನಿರೀಕ್ಷೆಗಳನ್ನು ಹೊಂದಿದ್ದಾರೆ.

ಎಚ್‌.ಎನ್.ವ್ಯಾಲಿ ಯೋಜನೆಯಡಿ ಮರಳೂರು ಕೆರೆಗೆ ನೀರು ಹರಿಸಲಾಗಿದೆ. ಇದನ್ನು ಹೊರತುಪಡಿಸಿ ಯೋಜನೆಯಡಿ ಬೇರೆ ಕೆರೆಗಳಿಗೆ ನೀರು ಹರಿದಿಲ್ಲ. ಕೃಷಿಯೇ ಪ್ರಧಾನವಾಗಿರುವ ತಾಲ್ಲೂಕಿಗೆ ನೀರು ಅತ್ಯಗತ್ಯವಾಗಿದೆ ಎನ್ನುತ್ತಾರೆ ರೈತರು. 

ಎನ್.ಎಚ್.ಶಿವಶಂಕರರೆಡ್ಡಿ ಅವರು ಶಾಸಕರಾಗಿದ್ದ ವೇಳೆ ಕುಡುಮಲಕುಂಟೆ ಕೈಗಾರಿಕಾ ಪ್ರಾಂಗಣ ನಿರ್ಮಾಣವಾಯಿತು. ಎರಡು ಹಂತಗಳಲ್ಲಿ ಇಲ್ಲಿ ಕೈಗಾರಿಕೆಗಳು ಅಭಿವೃದ್ಧಿ ಹೊಂದಿವೆ. ಮತ್ತಷ್ಟು ಅಭಿವೃದ್ಧಿಯ ನಿರೀಕ್ಷೆಯೂ ಇದೆ. ಆದರೆ ಯಥಾ ಪ್ರಕಾರ ಈ ಕೈಗಾರಿಕೆಗಳ ಬರುವಿಕೆ ನೀರಿನೊಂದಿಗೆ ತಳುಕು ಹಾಕಿಕೊಂಡಿದೆ. ಈ ಎಲ್ಲ ಕಾರಣದಿಂದ ಬಾಯಾರಿರುವ ಗೌರಿಬಿದನೂರಿಗೆ ಸರ್ಕಾರ ನೀರು ಕೊಡಬೇಕು ಎನ್ನುವ ಧ್ವನಿ ಇಲ್ಲಿನ ಜನರದ್ದಾಗಿದೆ.

ನಗರದಲ್ಲಿ ಒಳಚರಂಡಿ ವ್ಯವಸ್ಥೆ ಮತ್ತು ಸ್ವಚ್ಛತೆ ಇಲ್ಲ. ವಿದುರಾಶ್ವತ್ಥದಲ್ಲಿನ ಐತಿಹಾಸಿಕ ಪ್ರಸಿದ್ಧ ಅಶ್ವತ್ಥ ನಾರಾಯಣ ದೇವಾಲಯ ಮತ್ತು ಅದರ ಹಿಂಭಾಗದಲ್ಲಿನ ಸ್ವಾತಂತ್ರ ಯೋಧರ ಸ್ಮರಣೆಯ ವೀರಸ್ಥೂಪ ಮತ್ತು ವೀರಸೌಧದ ನಿರ್ವಹಣೆಗೆ ಅನುದಾನದ ಕೊರತೆ ಇದೆ.

ಸಕ್ಕರೆ ಕಾರ್ಖಾನೆ ಮರು ಆರಂಭ: ಎರಡು ದಶಕಗಳ ಹಿಂದೆ ಈ‌ ಭಾಗದ ಜನರ ಬದುಕಿಗೆ ಸಕ್ಕರೆ ಕಾರ್ಖಾನೆ ವರದಾನವಾಗಿತ್ತು. ಅಂತರ್ಜಲ ಮಟ್ಟದ ಕ್ಷೀಣವಾದ ಪರಿಣಾಮ ರೈತರು ಕಬ್ಬು ಬೆಳೆಯುವುದನ್ನು ಕೈಬಿಟ್ಟರು. ಸಕ್ಕರೆ ಕಾರ್ಖಾನೆ ಬಾಗಿಲು ಮುಚ್ಚಿತು. ಸರ್ಕಾರವು ಸಕ್ಕರೆ ಕಾರ್ಖಾನೆಯ ಮರು ಆರಂಭಕ್ಕೆ ಅವಕಾಶ ನೀಡಬೇಕು ಎಂಬ ನಿರೀಕ್ಷೆಯಲ್ಲಿದ್ದಾರೆ ಈ ಭಾಗದ ಪ್ರಗತಿಪರ ರೈತರು.

ಜಿಲ್ಲೆಯ ಪ್ರಮುಖ ನದಿ ಎನಿಸಿರುವ ಉತ್ತರ ಪಿನಾಕಿನಿ ಅಕ್ರಮ ಮರಳು ಮಾಫಿಯಾಗೆ ಬಲಿಯಾಗಿದೆ.  ಅದಕ್ಕೆ ಮರುಜೀವ ನೀಡಿದರೆ ಈ ಭಾಗದ ರೈತರ ಬದುಕು ಹಸನಾಗುತ್ತದೆ.

ಹೀಗೆ ಐದು ಹೋಬಳಿಗಳನ್ನು ಹೊಂದಿರುವ ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಜನರು ಈ ಬಾರಿಯ ಬಜೆಟ್‌ನಲ್ಲಿ ತಮಗೇನು ದೊರೆಯುತ್ತದೆ ಎನ್ನುವ ಕಾತರದಲ್ಲಿ ಇದ್ದಾರೆ.

ನಂಜುಂಡಪ್ಪ
ಳೀಯರಿಗೆ ಉದ್ಯೋಗ ದೊರೆಯಬೇಕು ಈಗಾಗಲೇ ಕುಡುಮಲಕುಂಟೆ ಕೈಗಾರಿಕಾ ಪ್ರದೇಶ ನಿರ್ಮಾಣವಾಗಿದೆ. ಇಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗದ ಅವಕಾಶಗಳು ದೊರೆಯಬೇಕು. ಎಚ್‌.ಎನ್.ವ್ಯಾಲಿ ನೀರು ಹರಿಯುತ್ತಿದೆ. ಆದರೆ ಈ ನೀರನ್ನು ಮತ್ತಷ್ಟು ಕೆರೆಗಳಿಗೆ ಹರಿಸಬೇಕು. ಎತ್ತಿನಹೊಳೆ ನೀರು ಆದಷ್ಟು ಬೇಗ ತಾಲ್ಲೂಕಿಗೆ ಬರಬೇಕಿದೆ.
ಟಿ.ನಂಜುಂಡಪ್ಪ ಕಸಾಪ ತಾಲ್ಲೂಕು ಅಧ್ಯಕ್ಷ
ಶೋಭಾ
ನೀರಿಗೆ ವಿಶೇಷ ಅನುದಾನ ನೀಡಿ ತಾಲ್ಲೂಕಿಗೆ ಶಾಶ್ವತವಾಗಿ ನೀರಿನ ಮೂಲಗಳು ಇಲ್ಲ. ಕೃಷಿಗೆ ತೊಂದರೆ ಆಗಿದೆ. ಆದ ಕಾರಣ ಗೌರಿಬಿದನೂರಿಗೆ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಲು ಸರ್ಕಾರ ವಿಶೇಷ ಅನುದಾನ ನೀಡಬೇಕು. ಮಳೆ ಬಂದರೆ ಮಾತ್ರ ನೀರು. ಇಲ್ಲದಿದ್ದರೆ ಬೇಸಿಗೆಯಲ್ಲಿ ನೀರಿಗೆ ಸಮಸ್ಯೆ ಎದುರಾಗುತ್ತದೆ. ಕೈಗಾರಿಕೆಗಳು ಬರಬೇಕು ಎಂದರೂ ನೀರು ಅಗತ್ಯ. 
-ಜಿ.ಎಸ್. ಶೋಭಾ ದಿಶಾ ಸಮಿತಿ ಸದಸ್ಯೆ.
ಲೋಕೇಶ್ ಗೌಡ
ಎ‍ಪಿಎಂಸಿ ಪುನಚ್ಚೇತನಕ್ಕೆ ಕ್ರಮವಹಿಸಬೇಕು ಮೂರು ತಿಂಗಳಿನಿಂದ ಮರಳೂರು ಕೆರೆಗೆ ಎಚ್‌.ಎನ್.ವ್ಯಾಲಿ ನೀರು ಬರುತ್ತಿದೆ. ಆದರೂ ಕೆರೆಯ ಅರ್ಧಭಾಗ ತುಂಬಿಲ್ಲ. ಮತ್ತಷ್ಟು ಕೆರೆಗಳಿಗೆ ನೀರನ್ನು ಹರಿಸಬೇಕು. ಗೌರಿಬಿದನೂರು ಎಪಿಎಂಸಿಯಲ್ಲಿ ತರಕಾರಿ ವಹಿವಾಟು ನಡೆಯುತ್ತಿದೆ. ಆದ್ದರಿಂದ ಎಪಿಎಂಸಿ ಅಭಿವೃದ್ಧಿಗೆ ಸರ್ಕಾರ ನೆರವು ನೀಡಬೇಕು. ಮೆಕ್ಕೆಜೋಳ ಪ್ರಮುಖ ಬೆಳೆ. ರೈತ ಉತ್ಪಾದಕರ ಸಂಸ್ಥೆ (ಎಫ್‌ಪಿಒ)ಗಳನ್ನು ಮತ್ತಷ್ಟು ಬಲವರ್ಧನೆಗೊಳಿಸಬೇಕು
-ಲೋಕೇಶ್ ಗೌಡ ತಾಲ್ಲೂಕು ರೈತ ಸಂಘದ ಅಧ್ಯಕ್ಷ

ಸಿದ್ದರಾಮಯ್ಯ ಘೋಷಿಸಿದ್ದ ಯೋಜನೆಯೇ ಕಾರ್ಯಗತವಿಲ್ಲ

2017ರ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ್ದ ಬಜೆಟ್‌ನಲ್ಲಿ ಗೌರಿಬಿದನೂರಿನಲ್ಲಿ ₹ 2 ಕೋಟಿ ವೆಚ್ಚದಲ್ಲಿ ವಿದ್ಯುತ್ ಮಗ್ಗ ಸಂಕೀರ್ಣ ಸ್ಥಾಪಿಸಲಾಗುವುದು ಎಂದು ಪ್ರಕಟಿಸಿದ್ದರು. ಆದರೆ ಅದು ಇಂದಿಗೂ ಕಾರ್ಯಗತವೇ ಆಗಿಲ್ಲ. 2021ರಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಡಿಸಿದ ಬಜೆಟ್‌ನಲ್ಲಿ ಹೊಸೂರು ಬಳಿ ಎಚ್.ನರಸಿಂಹಯ್ಯ ಅವರ ಗೌರವಾರ್ಥ 200 ಎಕರೆಯಲ್ಲಿ ಅಂತರರಾಷ್ಟ್ರೀಯ ವಿಜ್ಞಾನ ಕೇಂದ್ರ ನಿರ್ಮಿಸುವುದಾಗಿ ಘೋಷಿಸಿದ್ದರು. ಇದಕ್ಕೆ ₹ 10 ಕೋಟಿ ಅನುದಾನ ಸಹ ಮೀಸಲಿಟ್ಟಿದ್ದರು. ಈ ವಿಜ್ಞಾನ ಕೇಂದ್ರದ ಅಭಿವೃದ್ಧಿಗೆ ಕೆಲವು ತಿಂಗಳ ಹಿಂದೆ ಭೂಮಿ ಪೂಜೆ ಸಹ ನಡೆದಿದೆ. ಜಮೀನು ಹದ್ದುಬಸ್ತುಗೊಳಿಸುವ ಪ್ರಕ್ರಿಯೆಗಳು ನಡೆದಿವೆ.

ಪುಟ್ಟಸ್ವಾಮಿಗೌಡ
ಗೌಡರಿಗೆ ದೊರೆಯುವುದೇ ಅನುದಾನದ
ಕೆ.ಎಚ್.ಪುಟ್ಟಸ್ವಾಮಿ ಗೌಡ ಅವರು ಪಕ್ಷೇತರರಾಗಿ ಗೆಲ್ಲುವ ಮೂಲಕ ಮೊದಲ ಬಾರಿಗೆ ಶಾಸಕರಾಗಿದ್ದಾರೆ. ಕಾಂಗ್ರೆಸ್‌ಗೆ ಬೆಂಬಲ ಸಹ ಸೂಚಿಸಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಆಪ್ತರೂ ಹೌದು. ಕ್ಷೇತ್ರದ ಜನರು ಗೌಡರ ಮೇಲೆ ಅಪಾರವಾದ ನಿರೀಕ್ಷೆಗಳನ್ನು ಹೊಂದಿದ್ದಾರೆ. ಬಜೆಟ್‌ನಲ್ಲಿ ಗೌರಿಬಿದನೂರಿನ ಯೋಜನೆಗಳಿಗೆ ಅನುದಾನ ದೊರೆತರೆ ಅದರ ಕ್ರೆಡಿಟ್‌ ಸಹ ಪುಟ್ಟಸ್ವಾಮಿಗೌಡ ಅವರದ್ದಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.