ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಹಂತ-1 ರಲ್ಲಿ ಸಕಲೇಶಪುರದ ಹೆಬ್ಬನಹಳ್ಳಿಯಲ್ಲಿರುವ ನೀರು ವಿತರಣಾ ನಾಲ್ಕು ತೊಟ್ಟಿಗಳಲ್ಲಿ ನೀರು ಉಕ್ಕಿದ ಕ್ಷಣ (ಪ್ರಜಾವಾಣಿ ಸಂಗ್ರಹ ಚಿತ್ರ)
ಚಿಕ್ಕಬಳ್ಳಾಪುರ: ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೆಬ್ಬನಹಳ್ಳಿ ಬಳಿ ಸೆ.6ರಂದು ಎತ್ತಿನಹೊಳೆ ನೀರಾವರಿ ಯೋಜನೆಯ ಮೊದಲ ಹಂತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದ್ದಾರೆ.
ಹೀಗೆ ಮೊದಲ ಹಂತದ ಯೋಜನೆಗೆ ಚಾಲನೆ ನೀಡಿದ್ದರೂ ಜಿಲ್ಲೆಗೆ ಎತ್ತಿನಹೊಳೆ ನೀರು ಬರಲು ಇನ್ನೂ ಎರಡು ವರ್ಷ ಬೇಕಿದೆ.
‘ಎತ್ತಿನಹೊಳೆ ನೀರನ್ನು ಚಿಕ್ಕಬಳ್ಳಾಪುರ ಜಿಲ್ಲೆಗೆ ಯಾವಾಗ ಹರಿಸಲಾಗುತ್ತದೆ’ ಎಂದು ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಪ್ರಶ್ನೆ ಕೇಳಿದ್ದಾರೆ.
ಅದಕ್ಕೆ ಡಿ.ಕೆ.ಶಿವಕುಮಾರ್ ‘ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು 2027ರ ಮಾರ್ಚ್ ಅಂತ್ಯಕ್ಕೆ ಅನುದಾನದ ಲಭ್ಯತೆ ಮೇರೆಗೆ ಸಂಪೂರ್ಣಗೊಳಿಸಲು ಯೋಜಿಸಲಾಗಿದೆ. ತದನಂತರ ಚಿಕ್ಕಬಳ್ಳಾಪುರ ಜಿಲ್ಲೆಗೆ ಉದ್ದೇಶಿತ ನೀರನ್ನು ಪೂರೈಸಲಾಗುವುದು’ ಎಂದು ಉತ್ತರಿಸಿದ್ದಾರೆ.
2027ರ ಮಾರ್ಚ್ ಅಂತ್ಯಕ್ಕೆ ಅನುದಾನದ ಲಭ್ಯತೆ ಮೇರೆಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ ಎಂದು ಸಚಿವರೇ ತಿಳಿಸಿದ್ದಾರೆ.
ಮತ್ತೊಂದೆಡೆ ಜಿಲ್ಲೆಯಲ್ಲಿ ಯೋಜನೆಯಡಿ ಪೈಪ್‌ಲೈನ್ ಕಾಮಗಾರಿ ಇಂದಿಗೂ ಆರಂಭವಾಗಿಲ್ಲ. ‘ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾಲುವೆ ಕಾಮಗಾರಿ ಪೈಪ್‌ಲೈನ್ ಪ್ರಾರಂಭಿಸದೇ ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ’ ಎಂದು ಸುಬ್ಬಾರೆಡ್ಡಿ ಪ್ರಶ್ನಿಸಿದ್ದಾರೆ. ಸಚಿವರು ‘ಹೌದು’ ಎಂದು ಉತ್ತರಿಸಿದ್ದಾರೆ.
ಪ್ರಸ್ತುತ ಯಾವ ಹಂತದಲ್ಲಿದೆ ಕಾಮಗಾರಿ: ಎತ್ತಿನಹೊಳೆ ಯೋಜನೆಯನ್ನು ಎರಡು ಹಂತದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಸೆ.6ರಂದು 79.5 ಕ್ಯುಮೆಕ್ಸ್ ನೀರನ್ನು ಎತ್ತಿ ಗುರುತ್ವ ಕಾಲುವೆಯ 32.50 ಕಿ.ಮೀವರೆಗೆ ನೀರನ್ನು ಹರಿಸಿ ಅಲ್ಲಿನ ನಾಲಾ ಎಸ್ಕೇಪ್ ಮೂಲಕ ಸುಮಾರು 132.50 ಕಿ.ಮೀ ದೂರದಲ್ಲಿರುವ ವಾಣಿ ವಿಲಾಸ ಸಾಗರಕ್ಕೆ ವೇದಾ ವ್ಯಾಲಿ ಮೂಲಕ ತಾತ್ಕಾಲಿಕವಾಗಿ ನೀರನ್ನು ಹರಿಸಲಾಗಿದೆ.
ಎರಡನೇ ಹಂತದಲ್ಲಿ ಸರಪಳಿ 261.69 ಕಿ.ಮೀವರೆಗಿನ 252.61 ಕಿ.ಮ ಉದ್ದದ (ಮೇಲ್ಗಾಲುವೆ ಒಳಗೊಂಡಂತೆ) ಗುರುತ್ವ ಕಾಲುವೆ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಈ ಪೈಕಿ 174.78 ಕಿ.ಮೀ ವರೆಗಿನ ಕಾಲುವೆ ನಿರ್ಮಾಣ ಕಾಮಗಾರಿಗಳು ಪೂರ್ಣಗೊಂಡಿವೆ. 25.69 ಕಿ.ಮೀವರೆಗಿನ ಕಾಲುವೆ ನಿರ್ಮಾಣ ಕಾಮಗಾರಿಗಳು ಪೂರ್ಣಗೊಂಡಿದ್ದು 25.14 ಕಿ.ಮೀ ಉದ್ದದ ಗುರುತ್ವ ಕಾಲುವೆ ನಿರ್ಮಾಣ ಕಾಮಗಾರಿಯನ್ನು ಅರಣ್ಯ ತಿರುವಳಿ ರಾಷ್ಟ್ರೀಯ ಹೆದ್ದಾರಿ ಅನುಮತಿ, ರೈಲ್ವೆ ಇಲಾಖೆಯ ಅನುಮತಿ ಹಾಗೂ ಭೂಸ್ವಾಧೀನ ಪ್ರಕ್ರಿಯೆಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿ ಇವೆ.
ಸಮತೋಲನಾ ಜಲಾಶಯಕ್ಕಿಂತ ಮೊದಲು ಕವಲೊಡೆಯುವ ಮಧುಗಿರಿ ಫೀಡರ್, ಟಿ.ಜಿಹಳ್ಳಿ ರಾಮನಗರ ಫೀಡರ್ ಹಾಗೂ ಗೌರಿಬಿದನೂರು ಫೀಡರ್ ಕಾಲುವೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಒಟ್ಟು 256.81 ಕಿ.ಮೀ ಪೈಕಿ 231.73 ಕಿ.ಮೀ ಉದ್ದದ ಪೈಪ್‌ಲೈನ್ ಕಾಮಗಾರಿಯು ಪೂರ್ಣಗೊಂಡಿದೆ. ಉಳಿಕೆ ಕಾಮಗಾರಿಗಳು ವಿವಿಧ ಹಂತದಲ್ಲಿ ಪ್ರಗತಯಲ್ಲಿ ಇವೆ ಎಂದು ಸಚಿವರು ಉತ್ತರದಲ್ಲಿ ತಿಳಿಸಿದ್ದಾರೆ.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಜನರಿಗೆ ಶುದ್ಧ ಕುಡಿಯುವ ನೀರು ನೀಡುವ ಮತ್ತು ಅಂತರ್ಜಲ ಮಟ್ಟ ಹೆಚ್ಚಿಸುವ ಉದ್ದೇಶದಿಂದಲೇ ಈ ಯೋಜನೆಗೆ ಚಾಲನೆ ನೀಡಲಾಗಿತ್ತು. ಜಿಲ್ಲೆಯಲ್ಲಿ ಕಾಮಗಾರಿಗೆ ಭೂಸ್ವಾಧೀನವು ಇನ್ನೂ ವೇಗ ಪಡೆದಿಲ್ಲ. ಈ ಕಾರಣದಿಂದ ಚಿಕ್ಕಬಳ್ಳಾಪುರ ಜಿಲ್ಲೆಗೆ ನೀರು ಯಾವಾಗ ಹರಿಯುತ್ತದೆ ಎನ್ನುವ ಕುತೂಹಲ ನಾಗರಿಕರಲ್ಲಿ ಇದೆ. ಭೂಸ್ವಾಧೀನ ಪ್ರಕ್ರಿಯೆಗಳು ಜಿಲ್ಲೆಯಲ್ಲಿ ತೆವಳುತ್ತಲೇ ಸಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.