ADVERTISEMENT

ಶಿಡ್ಲಘಟ್ಟ: ಸಿರಿಧಾನ್ಯ ಮಹತ್ವ ಸಾರುತ್ತಿರುವ ಕೃಷಿಕ ಮಹಿಳೆ

ಡಿ.ಜಿ.ಮಲ್ಲಿಕಾರ್ಜುನ
Published 16 ಡಿಸೆಂಬರ್ 2024, 6:53 IST
Last Updated 16 ಡಿಸೆಂಬರ್ 2024, 6:53 IST
ಶಿಡ್ಲಘಟ್ಟ ತಾಲ್ಲೂಕಿನ ಜೆ.ವೆಂಕಟಾಪುರದ ಕೃಷಿಕ ಮಹಿಳೆ ನಿರ್ಮಲ ಸಿರಿಧಾನ್ಯ ಉತ್ಪನ್ನಗಳೊಂದಿಗೆ
ಶಿಡ್ಲಘಟ್ಟ ತಾಲ್ಲೂಕಿನ ಜೆ.ವೆಂಕಟಾಪುರದ ಕೃಷಿಕ ಮಹಿಳೆ ನಿರ್ಮಲ ಸಿರಿಧಾನ್ಯ ಉತ್ಪನ್ನಗಳೊಂದಿಗೆ   

ಶಿಡ್ಲಘಟ್ಟ: ಪಾರಂಪರಿಕ ಆಹಾರ ಪದ್ಧತಿ ಹಾಗೂ ಸಿರಿಧಾನ್ಯಗಳ ಮಹತ್ವ ಸಾರುತ್ತಾ, ಆರೋಗ್ಯ ರಕ್ಷಣೆಯ ಕುರಿತು ಕೃಷಿಕ ಮಹಿಳೆ ನಿರ್ಮಲ ಅರಿವು ಮೂಡಿಸುತ್ತಿದ್ದಾರೆ.

ಸಿರಿಧಾನ್ಯ ಕೃಷಿ, ಸಂಸ್ಕರಣೆ ಮತ್ತು ಮೌಲ್ಯವರ್ಧನೆಯಲ್ಲಿ ತೊಡಗಿರುವ ಅವರು ಶಿಡ್ಲಘಟ್ಟ ತಾಲ್ಲೂಕಿನ ಜೆ.ವೆಂಕಟಾಪುರದವರು. ಸಾಮೆ ಮತ್ತು ನವಣೆ ಬೆಳೆಯುತ್ತಿದ್ದು, ಇತರೆ ರೈತರಿಗೂ ಸಿರಿಧಾನ್ಯಗಳನ್ನು ಬೆಳೆಯಲು ಪ್ರೇರಣೆ ನೀಡುತ್ತಿದ್ದಾರೆ. ನಾಲ್ಕು ವರ್ಷಗಳಿಂದ ಅವರು ಬೇರೆ ರೈತರು ಬೆಳೆಯುವ ಸಿರಿಧಾನ್ಯಗಳನ್ನು ಕೊಂಡು ಅವುಗಳನ್ನು ಮೌಲ್ಯವರ್ಧನೆ ಮಾಡಿ ಮಾಲ್ಟ್ ರೂಪದಲ್ಲಿ ಮಾರಾಟ ಮಾಡುತ್ತಿದ್ದಾರೆ.

ವಿವಿಧ ರೈತ ಮಹಿಳೆಯರ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುವ ಅವರು, ಸಿರಿಧಾನ್ಯಗಳ ಮಹತ್ವ ಸಾರುತ್ತಾ, ಅವುಗಳಿಂದ ಉಪ್ಪಿಟ್ಟು, ಚಕ್ಕುಲಿ, ಕರ್ಜಿಕಾಯಿ, ಇಡ್ಲಿ, ದೋಸೆ, ಶಾವಿಗೆ ಮೊದಲಾದ ವೈವಿಧ್ಯಮಯ ಆಹಾರ ಪದಾರ್ಥಗಳನ್ನು ಪ್ರಾತ್ಯಕ್ಷಿಕೆಯಾಗಿ ತಯಾರಿಸಿ ತೋರಿಸುತ್ತಾರೆ.

ADVERTISEMENT

‘ಹಳೆ ಪದ್ಧತಿಗಳನ್ನು ಮರೆತಿರುವ ಕಾರಣ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ನವಣೆ, ಸಾಮೆಯಂತಹ ಸಿರಿಧಾನ್ಯಗಳನ್ನು ತಿಂದು ಉತ್ತಮ ಆರೋಗ್ಯ ಹೊಂದುವಂತೆ ಅರಿವು ಮೂಡಿಸುತ್ತಿರುವೆ’ ಎನ್ನುತ್ತಾರೆ ನಿರ್ಮಲ.

‘ಈಗೀಗ ಜನರಲ್ಲಿ ಸಿರಿಧಾನ್ಯಗಳ ಮಹತ್ವದ ಬಗ್ಗೆ ತಿಳಿವಳಿಕೆ ಹೆಚ್ಚುತ್ತಿದೆ. ಹಾಗಾಗಿ ತಿಂಗಳಿಗೆ 30 ರಿಂದ 40 ಕೆ.ಜಿ ಯಷ್ಟು ಸಿರಿಧಾನ್ಯಗಳ ಮಾಲ್ಟ್ ಮಾರಾಟ ಮಾಡುತ್ತಿರುವೆ. ಜಿಕೆವಿಕೆ ಕೃಷಿ ಮೇಳ, ಜಿಲ್ಲಾ ಕೇಂದ್ರ ಹಾಗೂ ಸ್ಥಳೀಯವಾಗಿ ನಡೆಯುವ ಕೃಷಿ ಸಂಬಂಧಿತ ಮೇಳ ಅಥವಾ ಕಾರ್ಯಾಗಾರಗಳಲ್ಲಿ ಸಿರಿಧಾನ್ಯಗಳ ಬಹೂಪಯೋಗ ವಿವರಿಸುತ್ತಾ ಮಾಲ್ಟ್ ಮಾರಾಟ ಮಾಡಿದ್ದೇನೆ’ ಎನ್ನುತ್ತಾ ಸ್ಥಳೀಯವಾಗಿ ಕಂಡುಕೊಂಡ ಮಾರುಕಟ್ಟೆಯ ಹಾದಿಯನ್ನು ವಿವರಿಸಿದರು.

ಸಿರಿಧಾನ್ಯಗಳ ಜೊತೆಗೆ, ಅವರು ಈಗ ಗುಲಾಬಿ ಮತ್ತು ಸೇವಂತಿಗೆ ಹೂಗಳ ಕೃಷಿ ಮಾಡುತ್ತಿದ್ದಾರೆ. ಕೃಷಿ ಜೊತೆಗೆ ಕುರಿ, ಕೋಳಿ, ಹಸುಗಳ ಸಾಕಾಣಿಕೆ ಮಾಡುತ್ತಿದ್ದು, ಸುಸ್ಥಿರ ಬೆಳವಣಿಗೆಗೆ ಮಾದರಿಯಾಗಿದ್ದಾರೆ. ಕುಟುಂಬದ ನೆರವಿನೊಂದಿಗೆ ಕೃಷಿ ಬದುಕಿನಲ್ಲಿ ಯಶಸ್ಸನ್ನು ಕಾಣುತ್ತಾ ಇತರರಿಗೂ ಮಾರ್ಗದರ್ಶಿಯಾಗಿದ್ದಾರೆ.

ನಿರ್ಮಲ ಅವರ ಕೃಷಿಕ ಹಾದಿಯ ಸಾಧನೆಯನ್ನು ಗುರುತಿಸಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ, ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ 2023 ಹಾಗೂ ರೈತ ದಿನಾಚರಣೆ ಅಂಗವಾಗಿ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಿದೆ.

ಶಿಡ್ಲಘಟ್ಟ ತಾಲ್ಲೂಕಿನ ಜೆ.ವೆಂಕಟಾಪುರದ ಕೃಷಿ ಮಹಿಳೆ ನಿರ್ಮಲ ತಮ್ಮ ಸಿರಿಧಾನ್ಯಗಳ ಉತ್ಪನ್ನಗಳೊಂದಿಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.