ಶಿಡ್ಲಘಟ್ಟ: ನಗರದ ಸಾರ್ವಜನಿಕ ಆಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಸೋಮವಾರ ಭೇಟಿ ನೀಡಿ ಆಸ್ಪತ್ರೆಯ ಒಳ ರೋಗಿಗಳು ಹಾಗೂ ಗರ್ಭಿಣಿ, ಬಾಣಂತಿಯರಿಗೆ ಆಸ್ಪತ್ರೆಯಲ್ಲಿ ಸಿಗುತ್ತಿರುವ ಚಿಕಿತ್ಸಾ ಸೌಲಭ್ಯ, ಮೂಲ ಸೌಕರ್ಯಗಳ ಬಗ್ಗೆ ಚರ್ಚಿಸಿದರು.
ತಾಲ್ಲೂಕಿನ ಕುಂದಲಗುರ್ಕಿ ಗ್ರಾಮದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ್ ರಾಂ ಅವರ ಜಯಂತಿಯಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ನಂತರ ಆಸ್ಪತ್ರೆಗೆ ಭೇಟಿ ನೀಡಿದರು.
ಹಲವು ವರ್ಷಗಳ ಹಿಂದೆ ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿ ಹೆರಿಗೆ ಹಾಗೂ ಹೆರಿಗೆ ಶಸ್ತ್ರ ಚಿಕಿತ್ಸೆ ನಡೆಯುತ್ತಿತ್ತು. ಇದೀಗ ದಿಢೀರ್ ಕುಸಿತಕ್ಕೆ ಕಾರಣ ಏನೆಂದು ಆಸ್ಪತ್ರೆಯ ವೈದ್ಯರನ್ನು ಪ್ರಶ್ನಿಸಿದರು.
ಇಲ್ಲಿ ಹೆರಿಗೆ ಪ್ರಕರಣಗಳನ್ನು ಸರಿಯಾಗಿ ನಿಭಾಯಿಸದೆ ಇರುವುದು, ನಿರ್ಲಕ್ಷಿಸುವುದು ಅಥವಾ ನಿಮ್ಮ ಕಾರ್ಯದ ಮೇಲೆ ಸಾರ್ವಜನಿಕರಿಗೆ ನಂಬಿಕೆ ಇಲ್ಲದಿರುವುದು ಸೇರಿ ಹತ್ತು ಹಲವು ಕಾರಣಗಳಿರುತ್ತವೆ. ಬಡವರೆ ಹೆಚ್ಚಿನ ಸಂಖ್ಯೆಯಲ್ಲಿ ಹೆರಿಗೆಗೆಂದು ಸಾರ್ವಜನಿಕ ಆಸ್ಪತ್ರೆಗೆ ಬರುತ್ತಾರೆ. ಇಷ್ಟು ಕುಸಿತವಾಗಿದೆ ಎಂದರೆ ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ. ಸಮಸ್ಯೆಯ ಮೂಲ ಹುಡುಕಿ ಸರಿಪಡಿಸಬೇಕೆಂದು ಹಾಗೂ ಹೆರಿಗೆ ಪ್ರಕರಣಗಳ ವಿವರ ನೀಡುವಂತೆ ವೈದ್ಯರಿಗೆ ಸೂಚಿಸಿದರು.
ಕೆಲವರು ಆಸ್ಪತ್ರೆಯಲ್ಲಿನ ಅವ್ಯವಸ್ಥೆಗಳ ಬಗ್ಗೆ ಹೇಳಿಕೊಂಡು ಸರಿಪಡಿಸುವಂತೆ ಮನವಿ ಮಾಡಿದರು.
ತಹಶೀಲ್ದಾರ್ ಬಿ.ಎನ್.ಸ್ವಾಮಿ, ತಾ.ಪಂ ಇಒ ಆರ್.ಹೇಮಾವತಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಜಗದೀಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಡಿಪಿಒ ವಿದ್ಯಾ ವಸ್ತ್ರದ್, ಕುಂದಲಗುರ್ಕಿ ಮುನಿಂದ್ರ, ಎನ್.ಎ.ವೆಂಕಟೇಶ್, ಮಳ್ಳೂರು ಅಶೋಕ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.