ADVERTISEMENT

ಚಿಕ್ಕಬಳ್ಳಾಪುರ: ಸರಳವಾಗಿ ಶ್ರದ್ಧಾಭಕ್ತಿಯಿಂದ ಗಣೇಶನ ಆರಾಧನೆ

ಕೋವಿಡ್‌ ಭೀತಿಯ ಕಾರಣಕ್ಕೆ ಸಾರ್ವಜನಿಕ ಮೂರ್ತಿಗಳ ಪ್ರತಿಷ್ಠಾಪನೆಗೆ ವಿಘ್ನ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2020, 10:19 IST
Last Updated 23 ಆಗಸ್ಟ್ 2020, 10:19 IST
ಚಿಕ್ಕಬಳ್ಳಾಪುರದಲ್ಲಿ ನಾಗರಿಕರು ಗಣೇಶ ಮೂರ್ತಿಗಳನ್ನು ಖರೀದಿಸಿದರು.
ಚಿಕ್ಕಬಳ್ಳಾಪುರದಲ್ಲಿ ನಾಗರಿಕರು ಗಣೇಶ ಮೂರ್ತಿಗಳನ್ನು ಖರೀದಿಸಿದರು.   

ಚಿಕ್ಕಬಳ್ಳಾಪುರ: ಭಾದ್ರಪದ ಮಾಸದ ಚೌತಿಯ ದಿನವಾದ ಶನಿವಾರದಿಂದ ಜಿಲ್ಲೆಯಾದ್ಯಂತ ಗಣಪತಿ ಹಬ್ಬವನ್ನು ಸಂಭ್ರಮ, ಸಡಗರ ಮತ್ತು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಗಲ್ಲಿ ಗಲ್ಲಿಗಳಲ್ಲಿ, ಊರು ಕೇರಿಗಳಲ್ಲಿ, ನಗರ, ಪಟ್ಟಣ ಪ್ರದೇಶ ಹೀಗೆ ಎಲ್ಲೆಂದರಲ್ಲಿ ಗಣೇಶೋತ್ಸವ ಸಮಿತಿಗಳು ಪ್ರತಿಷ್ಠಾಪಿಸುತ್ತಿದ್ದ ವಿಘ್ನವಿನಾಶಕನಿಗೆ ಈ ಬಾರಿ ಕೊರೊನಾ ಸೋಂಕಿನ ಭೀತಿ ವಿಘ್ನ ತಂದಿಟ್ಟಿದೆ. ಆಯ್ದ ದೇವಾಲಯಗಳಲ್ಲಿ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ನಿತ್ಯ ಬಗೆ ಬಗೆಯ ಪೂಜೆಗಳನ್ನು ನೆರವೇರಿಸಲಾಗುತ್ತಿದೆ.

ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗಣಪತಿಯ ಹಬ್ಬಕ್ಕೆ ಮೆರಗು ತುಂಬುತ್ತಿದ್ದ ಸಮಿತಿಗಳು ಈ ಬಾರಿ ಸರಳವಾಗಿ ಹಬ್ಬ ಆಚರಿಸಲು ನಿರ್ಧರಿಸಿವೆ.

ADVERTISEMENT

ನಗರದಲ್ಲಿ ಮನೆ ಮನೆಗಳಲ್ಲಿ ಕೂಡ ಗಜವದನನ ಆರಾಧನೆ ಬಹು ಜೋರಿನಿಂದಲೇ ನಡೆದಿದ್ದು, ಬಗೆ ಬಗೆಯಲ್ಲಿ ಮಂಟಪವನ್ನು ನಿರ್ಮಿಸಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಮೋದಕ, ಕಡುಬು ಮಾಡಿ ನೈವೇದ್ಯ ಅರ್ಪಿಸುವ ಜತೆಗೆ ರಜೆಯ ಮೋಜಿನಲ್ಲಿ ನಾಗರಿಕರು ಹಬ್ಬದೂಟವನ್ನು ಸವಿದರು.

ಪ್ರತಿ ವರ್ಷ ಚತುರ್ಥಿ ಸಮಯದಲ್ಲಿ ರಾತ್ರಿ ವೇಳೆ ಕುಟುಂಬ ಸಮೇತ ನಗರದ ಗಲ್ಲಿ ಗಲ್ಲಿಗಳಲ್ಲಿ ಪ್ರತಿಷ್ಠಾಪಿಸಿರುವ ವೈವಿಧ್ಯಮಯ ಲಂಬೋದರ ಮೂರ್ತಿಗಳ ದರ್ಶನ ಪಡೆಯಲು ಪ್ರದಕ್ಷಿಣೆ ಹಾಕುತ್ತಿದ್ದ ಜನರು ಈ ಬಾರಿ ಕೋವಿಡ್‌ ಕಾರಣಕ್ಕೆ ಮನೆಯಲ್ಲಿಯೇ ಉಳಿದು ಹಬ್ಬದ ಆಚರಿಸಿದರು.

ನಗರದ ವಿದ್ಯಾ ಗಣಪತಿ ಕನ್ನಡಾಂಬೆ ಗೆಳೆಯರ ಸಂಘ, ಮುನ್ಸಿಪಲ್‌ ಬಡಾವಣೆಯ ಸಿದ್ಧಿ ವಿನಾಯಕ ಗೆಳೆಯರ ಸಂಘ, ಓಂಕಾರ ಗಣಪತಿ ಯುವಕರ ಸಂಘ ಸೇರಿದಂತೆ ವಿವಿಧ ಗಣೇಶೋತ್ಸವ ಸಮಿತಿಗಳು ಈ ಬಾರಿ ಅದ್ದೂರಿತನ ಕೈಬಿಟ್ಟು ಸರಳ ಆಚರಣೆ ಒತ್ತು ನೀಡಿವೆ.

ಕೊರೊನಾ ಸೋಂಕಿನ ತೀವ್ರತೆ ಹೆಚ್ಚಾಗುತ್ತಿರುವ ಕಾರಣ ಈ ಬಾರಿ ಜಿಲ್ಲಾಡಳಿತ ‘ಪರಿಸರ ಸ್ನೇಹಿ ಜತೆಗೆ ಆರೋಗ್ಯ ಸ್ನೇಹಿ' ಗಣೇಶೋತ್ಸವಕ್ಕೆ ಕರೆ ನೀಡಿತ್ತು. ರೋಗ ನಿರೋಧಕ ಶಕ್ತಿ ಉಳ್ಳ ಅರಿಶಿಣದಿಂದ ಮನೆಯಲ್ಲಿಯೇ ಗಣೇಶನ ಮೂರ್ತಿ ತಯಾರಿಸಿ ಪೂಜಿಸಿ, ಮನೆಯಲ್ಲಿಯೇ ವಿಸರ್ಜಿಸುವಂತೆ ಮನವಿ ಮಾಡಿತ್ತು.

ಪರಿಸರದ ಮೇಲೆ ಭಾರಿ ಪರಿಣಾಮ ಬೀರುವಂತಹ ಪಿಓಪಿ ಗಣೇಶ ಹಾಗೂ ರಾಸಾಯನಿಕ ಬಣ್ಣಗಳನ್ನೊಳಗೊಂಡ ಮೂರ್ತಿಗಳನ್ನು ಜಿಲ್ಲಾಡಳಿತ ಸಂಪೂರ್ಣವಾಗಿ ನಿಷೇಧಿಸಿದ್ದು, ಸೋಂಕಿನ ಕಾರಣಕ್ಕೆ ಈ ಬಾರಿ ಮೆರವಣಿಗೆಯನ್ನು ಮತ್ತು ಕೆರೆ ಕುಂಟೆಗಳಲ್ಲಿ ಮೂರ್ತಿ ವಿಸರ್ಜನೆ ನಿಷೇಧಿಸಿದೆ.

ಚಿಕ್ಕಬಳ್ಳಾಪುರ ನಗರಸಭೆ ವತಿಯಿಂದ ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ನಗರ ಹೊರವಲಯದ ತಿಪ್ಪೇನಹಳ್ಳಿ ಪಂಪ್‌ಹೌಸ್ ಬಳಿ ಗಣೇಶ ವಿಗ್ರಹಗಳ ವಿಸರ್ಜನೆ ಮಾಡಲು ಪ್ರತ್ಯೇಕವಾದ ವಿಸರ್ಜನಾ ಗುಂಡಿಗಳು ಮತ್ತು ನಗರಸಭಾ ವ್ಯಾಪ್ತಿಯಲ್ಲಿ ಒಂಬತ್ತು ದೇವಾಲಯಗಳಲ್ಲಿ ಗಣೇಶ ಮೂರ್ತಿಗಳ ವಿರ್ಜನೆಗೆ ಪ್ರತ್ಯೇಕವಾದ ಡ್ರಮ್‌ಗಳನ್ನು ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.