ಚಿಕ್ಕಬಳ್ಳಾಪುರ: ಕನ್ನಡವು ತಮಿಳಿನಿಂದ ಹುಟ್ಟಿತು ಎನ್ನುವ ತಮಿಳು ನಟ ಕಮಲ್ ಹಾಸನ್ ವಿರುದ್ಧ ನಗರದ ಶಿಡ್ಲಘಟ್ಟ ವೃತ್ತದಲ್ಲಿ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಭಾನುವಾರ ಪ್ರತಿಭಟನೆ ನಡೆಯಿತು.
ಕಮಲ್ ಹಾಸನ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದ ವಿವಿಧ ಕನ್ನಡ ಸಂಘಟನೆಗಳ ಕಾರ್ಯಕರ್ತರು ನಟನ ಭಾವಚಿತ್ರಕ್ಕೆ ಬೆಂಕಿ ಹಚ್ಚಿದರು.
ವಾಟಾಳ್ ನಾಗರಾಜ್ ಮಾತನಾಡಿ, ‘ಕಮಲ್ ಹಾಸನ್ ದುರಹಂಕಾರಿ ತಮಿಳು ನಟ. ತಮಿಳುನಾಡಿನಲ್ಲಿ ಅವರ ಪ್ರಭಾವ ಕುಸಿದಿದೆ. ಮತ್ತೆ ಪ್ರಭಾವಕ್ಕಾಗಿ ಈ ರೀತಿಯ ಕನ್ನಡ ವಿರೋಧಿ ಹೇಳಿಕೆ ನೀಡಿದ್ದಾನೆ’ ಎಂದರು.
ಇದನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯ ಸರ್ಕಾರ ಕಮಲ್ ಹಾಸನ್ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು. ಕಮಲ್ ಹಾಸನ್ ಕ್ಷಮಾಪಣೆ ಕೇಳಲೇಬೇಕು. ತಮಿಳು ದೆವ್ವ, ಪಿಶಾಚಿಗಳು ಮಾತನಾಡುವ ಭಾಷೆ. ಜನ ಸಾಮಾನ್ಯರು ಮಾತನಾಡುವ ಭಾಷೆ ಕನ್ನಡ ಎಂದರು.
ಕರ್ನಾಟಕದಲ್ಲಿ ಕಮಲ್ ಹಾಸನ್ ಸಿನಿಮಾ ಯಾವುದೇ ಕಾರಣಕ್ಕೂ ಬಿಡುಗಡೆ ಆಗಬಾರದು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಬೇಕು. ಎಲ್ಲ ಕನ್ನಡದ ನಟರು, ನಿರ್ಮಾಪಕರು, ನಿರ್ದೇಶಕರು ಕಮಲ್ ಹಾಸನ್ ವಿರುದ್ಧ ಒಕ್ಕೊರಲಿನಿಂದ ಕ್ರಮಕ್ಕೆ ಆಗ್ರಹಿಸಬೇಕು ಎಂದರು.
ರಾಜ್ಯದ ಯಾವುದೇ ಮೂಲೆಯಲ್ಲಿ ಕಮಲ್ ಹಾಸನ್ ಚಿತ್ರ ಬಿಡುಗಡೆ ಆದರೆ ರಣರಂಗ ಆಗುತ್ತದೆ. ಇದು ಚಿತ್ರಮಂದಿರಗಳ ಮಾಲೀಕರಿಗೆ ನೀಡುತ್ತಿರುವ ಎಚ್ಚರಿಕೆ ಎಂದರು.
ಎಲ್ಲ ಪಕ್ಷದವರು ಒಂದಾಗಿ ಕನ್ನಡದ ಬಗ್ಗೆ ಚರ್ಚೆ ಮಾಡಬೇಕು. ಕನ್ನಡ ತಮಿಳಿನಿಂದ ಬಂದಿಲ್ಲ. ಸ್ವತಂತ್ರ ಭಾಷೆ ಎನ್ನುವುದನ್ನು ನೇರವಾಗಿ ಹೇಳಬೇಕು. ಮುಂದಿನ ದಿನಗಳಲ್ಲಿ ಎಲ್ಲರೂ ಒಗ್ಗಟ್ಟಾಗಿ ಸಭೆ ನಡೆಸಿ ಕರ್ನಾಟಕ ಬಂದ್‌ಗೂ ಕರೆ ಕೊಡಬೇಕಾಗುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.