ADVERTISEMENT

ಗೌರಿಬಿದನೂರು: ಎತ್ತಿನಹೊಳೆ, ಗರಿಗೆದರಿದ ನಿರೀಕ್ಷೆ

ಗೌರಿಬಿದನೂರು ತಾಲ್ಲೂಕಿನ ಮೂರು ಕಡೆಗಳಲ್ಲಿ ಪೈಪ್‌ ಸಂಗ್ರಹ

ಎ.ಎಸ್.ಜಗನ್ನಾಥ್
Published 27 ಫೆಬ್ರುವರಿ 2020, 20:00 IST
Last Updated 27 ಫೆಬ್ರುವರಿ 2020, 20:00 IST
ಗೌರಿಬಿದನೂರು ತಾಲ್ಲೂಕಿನ ಕದಿರದೇವರಹಳ್ಳಿ ಬಳಿ ಸಂಗ್ರಹಿಸಿರುವ ಬೃಹತ್ ಲೋಹದ ಪೈಪುಗಳು
ಗೌರಿಬಿದನೂರು ತಾಲ್ಲೂಕಿನ ಕದಿರದೇವರಹಳ್ಳಿ ಬಳಿ ಸಂಗ್ರಹಿಸಿರುವ ಬೃಹತ್ ಲೋಹದ ಪೈಪುಗಳು   

ಗೌರಿಬಿದನೂರು: ಎತ್ತಿನಹೊಳೆ ಯೋಜನೆಯ ಕಾಮಗಾರಿ ತಾಲ್ಲೂಕಿನಲ್ಲಿ ಈಗ ಆರಂಭವಾಗುವ ಲಕ್ಷಣಗಳು ಕಾಣುತ್ತಿವೆ. ಎತ್ತಿನಹೊಳೆ ಯೋಜನೆಯ ಫಲವಾಗಿ ತಾಲ್ಲೂಕಿನ ಕೆರೆಗಳಿಗೆ ನೀರು‌ ಹರಿಯುತ್ತದೆ ಎಂದು ಕಾಯುತ್ತಿರುವ ಜನರಲ್ಲಿ ಆಸೆ ಗರಿಗೆದರಿದೆ.

ತಾಲ್ಲೂಕಿನಲ್ಲಿ ಸುಮಾರು 48 ಕಿ.ಮೀ ಉದ್ದ ಪೈಪ್ ಲೈನ್‌ ಅಳವಡಿಕೆ ಕಾಮಗಾರಿಗೆ ಚಾಲನೆ ದೊರೆತದೆ. ತಾಲ್ಲೂಕಿನ ‌ವಿವಿಧ ಕೆರೆಗಳಿಗೆ ನೀರು ತುಂಬಿಸುವ ಕ್ರಿಯಾ ಯೋಜನೆ ರೂಪುಗೊಂಡಿದೆ. ತೊಂಡೇಬಾವಿ ಹೋಬಳಿಯ ಕದಿರದೇವರಹಳ್ಳಿಯ ಹೊರವಲಯದಲ್ಲಿ ಈಗಾಗಲೇ 500 ಕ್ಕೂ ಬೃಹತ್ ಲೋಹದ ಪೈಪುಗಳನ್ನು ಸರಬರಾಜು‌ ಮಾಡಲಾಗಿದೆ.

ಕೊರಟಗೆರೆ ಮೂಲಕ ಗೌರಿಬಿದನೂರು ತಾಲ್ಲೂಕಿಗೆ ನೀರು ಬರಲಿದೆ. ಇದಕ್ಕಾಗಿ ನೀರು ಸರಬರಾಜು ಮಾಡುವ ಪೈಪುಗಳು‌ ಸಿದ್ಧವಾಗಿವೆ, ಆದರೆ ಭೂಸ್ವಾಧೀನ ಪ್ರಕ್ರಿಯೆ ಇನ್ನೂ‌ ಆರಂಭವಾಗಿಲ್ಲ.

ADVERTISEMENT

ಪ್ರತಿ ಪೈಪಿನ ಮೇಲೆ ಲೋಹದ ಶುದ್ಧತೆ, ತಯಾರಾದ ದಿನಾಂಕ ಮತ್ತು‌ ಕಂಪನಿ ಹಾಗೂ ಇನ್ನಿತರ ಮಾಹಿತಿ ಒಳಗೊಂಡಿದೆ. ಇದಕ್ಕೆ ಒಳ ಮತ್ತು ಹೊರ ಪದರಗಳಲ್ಲಿ ಸತುವಿನ ಸಲ್ಪೇಟ್ ರಾಸಾಯನಿಕ ವಸ್ತುವನ್ನು ಲೇಪಿಸಲಾಗಿದೆ.

‘ಕಾಮಗಾರಿಯು ಹಂತ ಹಂತವಾಗಿ ನಡೆಯುತ್ತಿದೆ. ತಾಲ್ಲೂಕಿನಲ್ಲಿ ಶೀಘ್ರದಲ್ಲೇ ‌ಪೈಪ್ ಲೈನ್‌ ಕಾಮಗಾರಿ‌ ಆರಂಭವಾಗಲಿದೆ. ಬೇಡಿಯಷ್ಟು ಪೈಪ್‌ಗಳನ್ನು ತಾಲ್ಲೂಕಿನ ವಿವಿಧ ಹೋಬಳಿಗಳ 3 ಕಡೆಗಳಲ್ಲಿ ಸಂಗ್ರಹಿಸಲಾಗಿದೆ. ಭೂಸ್ವಾಧೀನ ಪ್ರಕ್ರಿಯೆ ಆರಂಭವಾದ ನಂತರ‌ ಪೈಪ್ ಲೈನ್ ‌ಅಳವಡಿಕಾ ಕಾರ್ಯಕ್ಕೆ ಚಾಲನೆ ನೀಡಲಾಗುವುದು’ ಎಂದು‌ ಎಂಜಿನಿಯರ್ ಪ್ರಸನ್ನ ಕುಮಾರ್ ತಿಳಿಸಿದರು.

ಶೀಘ್ರದಲ್ಲೇ ‌ಎಚ್.ಎನ್ ವ್ಯಾಲಿ‌ ನೀರು
ಎತ್ತಿನಹೊಳೆ ನೀರು ತಾಲ್ಲೂಕಿನ ‌ಕೆರೆಗಳಿಗೆ ಹರಿಯುವುದು ವಿಳಂಬವಾಗಬಹುದು, ಆದರೆ ಈಗಾಗಲೇ ಜಿಲ್ಲೆಗೆ ಬಂದಿರುವ ಎಚ್.ಎನ್ ವ್ಯಾಲಿ ನೀರು ಮುಂದಿನ 2-3 ತಿಂಗಳಲ್ಲಿ ಈ‌ ಭಾಗದ ಕೆರೆಗಳಿಗೆ ಹರಿಯುವುದು ಖಚಿತ. ಇದರಿಂದ ಅಂತರ್ಜಲದ ಮಟ್ಟ ವೃದ್ಧಿಯಾಗಿ ರೈತರ ಬದುಕು‌ ಸಮೃದ್ಧಗೊಳ್ಳುತ್ತದೆ ಎಂದು ಶಾಸಕ ಎನ್.ಎಚ್‌.ಶಿವಶಂಕರರೆಡ್ಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.