ADVERTISEMENT

ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿ: ಶಾಸಕ

ಕಾಂಗ್ರೆಸ್ ಮುಖಂಡರ ವರ್ಗಾವಣೆ ದಂಧೆ: ಆರೋಪ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2018, 10:03 IST
Last Updated 24 ಮಾರ್ಚ್ 2018, 10:03 IST

ಕೊಪ್ಪ: ‘ಶೃಂಗೇರಿ ಕ್ಷೇತ್ರದ ಪ್ರಭಾವಿ ಕಾಂಗ್ರೆಸ್ ಮುಖಂಡರೊಬ್ಬರು ವರ್ಗಾವಣೆ ದಂಧೆಯಲ್ಲಿ ತೊಡಗಿದ್ದು, ರಾಜ್ಯ ಸರ್ಕಾರದ ಮೂಲಕ ಭ್ರಷ್ಟ ಅಧಿಕಾರಿ
ಗಳನ್ನು ನೇಮಿಸುತ್ತಿರುವ ಕಾರಣ ಸಾಗುವಳಿ ಚೀಟಿ ವಿತರಣೆ ಸೇರಿದಂತೆ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ’ ಎಂದು ಶಾಸಕ ಡಿ.ಎನ್. ಜೀವರಾಜ್ ದೂರಿದರು.

ತಾಲ್ಲೂಕಿನ ಬಸರಿಕಟ್ಟೆಯ ಸೋಮೇಶ್ವರಕಾನ್‍ನಲ್ಲಿ ಸೋಮವಾರ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಕ್ರಿಕೆಟ್, ವಾಲಿಬಾಲ್ ಪಂದ್ಯಾವಳಿ ನಡೆಸುವುದೇ ಅಭಿವೃದ್ಧಿ ಎಂದು ಕೊಂಡಿರುವ ಕಾಂಗ್ರೆಸ್ ಮುಖಂಡರಿಗೆ ಜನತೆ ಸರಿಯಾದ ಪಾಠ ಕಲಿಸುತ್ತಾರೆ. ನನ್ನ ಅವಧಿಯಲ್ಲಿ 700 ಕಿ.ಮೀ.ನಷ್ಟು ಮುಖ್ಯ ರಸ್ತೆಗಳನ್ನು ಅಭಿವೃದ್ಧಿ ಪಡಿಸಿದ್ದೇನೆ. ಇದಕ್ಕೆ ಕೇಂದ್ರ ಸರ್ಕಾರ ₹84 ಕೋಟಿಗೂ ಹೆಚ್ಚು ಅನುದಾನ ನೀಡಿದೆ. ರಾಜ್ಯ ಸರ್ಕಾರ ಪ್ರತಿ ಕಿ.ಮೀ.ಗೆ ಕೇವಲ ₹850ರಂತೆ ನೀಡಿರುವ ಅನುದಾನದಲ್ಲಿ ಜನರಿಗೆ ಚಾಕಲೇಟ್ ಹಂಚಲೂ ಸಾಧ್ಯವಿಲ್ಲ’ ಎಂದರು.

ADVERTISEMENT

‘ನಾನು ಸರ್ಕಾರಗಳಿಗೆ ಒತ್ತಡ ತಂದು ಕೆಲಸ ಮಾಡಿಸಿದರೆ ಕಾಂಗ್ರೆಸ್ ಮುಖಂಡರು ಬ್ಯಾನರ್ ಹಾಕಿ ಬಿಟ್ಟಿ ಪ್ರಚಾರ ಪಡೆಯುತ್ತಿದ್ದಾರೆ. ಅವರಿಗೆ ತಾಕತ್ತಿದ್ದರೆ ಬಹಿರಂಗ ಚರ್ಚೆಗೆ ಬರಲಿ. ಕ್ಷೇತ್ರದ ಅಭಿವೃದ್ಧಿಗೆ ಕಾಂಗ್ರೆಸ್‍ನ ಕೊಡುಗೆ ಏನೆಂದು ಜನರಿಗೆ ತಿಳಿಸಲಿ’ ಎಂದು ಸವಾಲೆಸೆದರು.

‘ಅಹಿಂದ ಸರ್ಕಾರ ಎಂದು ಬೀಗುವ ಸಿದ್ಧರಾಮಯ್ಯನವರ ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಏನೂ ಕೊಡುಗೆ ನೀಡಿಲ್ಲ. 60 ವರ್ಷ ಕಾಂಗ್ರೆಸ್ ಆಡಳಿತದಲ್ಲಿ ಕ್ಷೇತ್ರದ ದಲಿತ ಕಾಲನಿಗಳಿಗೆ 1 ಅಡಿ ಕಾಂಕ್ರಿಟ್ ರಸ್ತೆಯನ್ನೂ ಮಾಡಿರಲಿಲ್ಲ. ನಾನು ಶಾಸಕನಾದ ಮೇಲೆ ನೂರಾರು ಕಾಂಕ್ರಿಟ್ ರಸ್ತೆಗಳನ್ನು ಮಾಡಿಸಿದ್ದೇನೆ. ಕೃಷಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಮೂಲಕ ದಲಿತರಿಗೆ ನೀಡಬೇಕಾಗಿದ್ದ ಅನುದಾನದಲ್ಲಿ ನಯಾ ಪೈಸೆಯನ್ನು ರಾಜ್ಯ ಸರ್ಕಾರ ನೀಡಿಲ್ಲ’ ಎಂದರು.

‘ಭಾಗ್ಯಲಕ್ಷ್ಮಿ ಯೋಜನೆಗೆ ಪೋಷಕರ ವಿವಾಹ ನೋಂದಣಿ ಕಡ್ಡಾಯಗೊಳಿಸಿದ್ದು, ಗರ್ಭಿಣಿ, ಬಾಣಂತಿಯರಿಗೆ ಅಂಗನವಾಡಿಗೆ ಬಂದರೆ ಮಾತ್ರ ಊಟ ನೀಡುವ ಅನಾಗರಿಕಕ ಯೋಜನೆ ತಂದಿರುವುದೇ ಈ ಸರ್ಕಾರದ ಸಾಧನೆಯಾಗಿದೆ’ ಎಂದು ಟೀಕಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ಎನ್. ರಾಮಸ್ವಾಮಿ ಮಾತನಾಡಿ, ‘ಭ್ರಷ್ಠಾಚಾರಕ್ಕೆ ಹೆಸರಾಗಿರುವ ಕಾಂಗ್ರೆಸ್ ನಿರಂತರವಾಗಿ ದೇಶವನ್ನು ಲೂಟಿ ಹೊಡೆ
ದಿದೆ. 10 ಪರ್ಸೆಂಟ್ ಸರ್ಕಾರವಾಗಿ ಕಾರ್ಯ ನಿರ್ವಹಿಸುತ್ತಿದೆ. ಸರ್ಕಾರದ ‘ಭಾಗ್ಯ’ ಯೋಜನೆಗಳು ಟಿ.ವಿ., ಪತ್ರಿಕೆಗಳಲ್ಲಿ ಬಿಟ್ಟಿ ಪ್ರಚಾರಕ್ಕೆ ಸೀಮಿತವಾಗಿವೆ ಹೊರತು ಜನತೆಗೆ ತಲುಪಿಲ್ಲ’ ಎಂದರು.

ಸಭೆಯಲ್ಲಿ ಜಾನಪದ ಕಲಾವಿದರಾದ ಕಿಬ್ಳಿ ರಂಗಪ್ಪಗೌಡ, ಸುಬ್ಬಯ್ಯ ಅವರನ್ನು ಸನ್ಮಾನಿಸಲಾಯಿತು.

ಗ್ರಾಮ ಪಂಚಾಯಿತಿ ಸದಸ್ಯೆ ರೇಖಾ ಪಟೇಲ್ ಸ್ವಾಗತಿಸಿದರು. ಜಿಲ್ಲಾ ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ಮಣಿಕಂಠನ್ ಕಂದಸ್ವಾಮಿ ನಿರೂಪಿಸಿದರು.

ಬಿ.ಆರ್ ನಾರಾಯಣ್, ಕಲ್ಮಕ್ಕಿ ಉಮೇಶ್, ಅದ್ದಡ ಸತೀಶ್, ಪುಣ್ಯಪಾಲ್, ಎನ್.ಕೆ ಉದಯ್, ಸುಜಾತ ಕೃಷ್ಣಪ್ಪ, ಪದ್ಮನಾಭ, ಕಿರಣ್, ಮಹಾಬಲರಾವ್, ಲಲಿತ ಇದ್ದರು,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.