ADVERTISEMENT

ಎಲ್ಲ ಇದ್ದು ಏನೂ ಇಲ್ಲದ ಸ್ಥಿತಿ!

ತರೀಕೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆ– ಸಿಬ್ಬಂದಿ ನೇಮಕಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 1 ಜೂನ್ 2018, 12:45 IST
Last Updated 1 ಜೂನ್ 2018, 12:45 IST
ತರೀಕೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿ ಬೇಕಾಬಿಟ್ಟಿ ನಿಂತಿರುವ ದ್ವಿಚಕ್ರ ವಾಹನಗಳು
ತರೀಕೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿ ಬೇಕಾಬಿಟ್ಟಿ ನಿಂತಿರುವ ದ್ವಿಚಕ್ರ ವಾಹನಗಳು   

ತರೀಕೆರೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಈ ಹಿಂದೆ ‘ಅವಾರ್ಡ್ ಆಫ್ ಎಕ್ಸಲೆನ್ಸಿ’ ಗೌರವ ಪಡೆದು ಹಲವು ಸೌಲಭ್ಯಗಳನ್ನು ಒದಗಿಸುವಲ್ಲಿ ಪ್ರಥಮ ಸ್ಥಾನದಲ್ಲಿದ್ದ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಇಂದು ಸೇವೆ ನೀಡುವಲ್ಲಿ ಕೊರತೆ ಎದುರಿಸುತ್ತಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.

ವಿಶಾಲವಾದ ಸ್ಥಳದಲ್ಲಿ ಹೊರ ನೋಟಕ್ಕೆ ಭವ್ಯ ಬಂಗಲೆಯಂತೆ ಕಂಗೊಳಿಸುವ 100 ಹಾಸಿಗೆಗಳುಳ್ಳ ಸುಸಜ್ಜಿತ ಆಸ್ಪತ್ರೆಯಲ್ಲಿ ಎಲ್ಲ ಸೌಲಭ್ಯಗಳಿದ್ದರೂ ಕೂಡ ಏನೂ ಇಲ್ಲದ ಅನುಭವವನ್ನು ರೋಗಿಗಳಿಗೆ ನೀಡುತ್ತಿದೆ. ಕಳೆದೆರಡು ವಾರಗಳಿಂದ ಬಿಟ್ಟು ಬಿಟ್ಟು ಮಳೆ ಬರುತ್ತಿರುವ ಕಾರಣ ತಾಲ್ಲೂಕಿನಲ್ಲಿ ವಾಂತಿ, ಭೇದಿ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿವೆ. ದಿನವೊಂದಕ್ಕೆ 600ಕ್ಕೂ ಹೆಚ್ಚು ಹೊರ ರೋಗಿಗಳು ತಪಾಸಣೆ ಹಾಗೂ ಚಿಕಿತ್ಸೆಗಾಗಿ ದಾಖಲಾಗುತ್ತಿದ್ದಾರೆ. ಆದರೆ, ಕೆಲವು ವೈದ್ಯರು ಗೈರು ಹಾಜರಾಗುತ್ತಿರುವ ಕಾರಣ ರೋಗಿಗಳು ಪರದಾಡುವಂತಾಗಿದೆ ಎಂದು ರೋಗಿಗಳು ದೂರಿದ್ದಾರೆ.

ಶಿವನಿ, ಅಜ್ಜಂಪುರ, ಲಕ್ಕವಳ್ಳಿ ಭಾಗಗಳಿಂದ ಮಕ್ಕಳನ್ನು ಕರೆ ತರುವ ಪೋಷಕರು ಹಾಗೂ ವೃದ್ಧ ರೋಗಿಗಳು ಆಸ್ಪತ್ರೆಯಲ್ಲಿ ಇರುವ ಬೆರಳೆಣಿಕೆಯಷ್ಟು ಮಂದಿ ವೈದ್ಯರನ್ನು ಸರತಿ ಸಾಲಿನಲ್ಲಿ ನಿಂತು ಗಂಟೆ ಗಟ್ಟಲೇ ಕಾದು ತೋರಿಸಿಕೊಂಡು ಹೋಗುವ ಸ್ಥಿತಿ ಇದೆ. ಈ ನಡುವೆ ವೈದ್ಯರೂ ಸರಿಯಾರ ಸಮಯಕ್ಕೆ ಆಸ್ಪತ್ರೆಗೆ ಬರುತ್ತಿಲ್ಲ ಎಂಬ ದೂರು ಇದೆ.

ADVERTISEMENT

ಇಲ್ಲದ ಸೌಲಭ್ಯಗಳು: ನಿತ್ಯ 100ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಆದರೆ, ಎನ್.ಸಿ.ಪಿ. ಕಾರ್ಯಕ್ರಮದಡಿ ಸಿಗಬೇಕಾದ ತಪಾಸಣೆಗಳನ್ನು ನಡೆಸಲಾಗುತ್ತಿಲ್ಲ. ಕೊಲೆಸ್ಟ್ರಾಲ್, ಥೈರಾಯಿಡ್ ಹಾಗೂ ಇನ್ನಿತರೆ ತಪಾಸಣೆಗೆ ಯಂತ್ರೋಪಕರಣಗಳು ಇದ್ದರೂ ಪರೀಕ್ಷೆ ನಡೆಸುತ್ತಿಲ್ಲ. ಮಧುಮೇಹ ಪರೀಕ್ಷೆಗೆ ರೋಗಿಗಳು ಖಾಲಿ ಹೊಟ್ಟೆಯಲ್ಲಿ ಬೆಳಿಗ್ಗೆ 7 ಗಂಟೆಗೆ ಬಂದರೆ ಪರೀಕ್ಷಕರು ಬರುವುದು 10 ಗಂಟೆಯ ನಂತರ ಎಂದು ರೋಗಿಗಳು ನೊಂದು ನುಡಿಯುತ್ತಾರೆ.

ಬಿಪಿಎಲ್ ಚೀಟಿ ಹೊಂದಿದ ರೋಗಿಗಳಿಗೆ ಸರ್ಕಾರದ ಆದೇಶದ ಹೊರತಾಗಿ ಎಕ್ಸ್‌ರೇ ತೆಗೆಯಲು ದರ ನಿಗದಿಪಡಿಸಿರುವುದು. ಆಗಾಗ ವಿದ್ಯುತ್ ಸಮಸ್ಯೆ ಎದುರಾಗುತ್ತಿದ್ದು, ಬೇರೆ ಹೋಬಳಿಗಳಿಂದ ಬಂದ ರೋಗಿಗಳು ಎಕ್ಸ್‌ರೇ ತೆಗೆಸಲು ದಿನಗಟ್ಟಲೇ ಕಾಯುವ ದೃಶ್ಯ ಸಾಮಾನ್ಯವಾಗಿದೆ. ಆಸ್ಪತ್ರೆಯಲ್ಲಿ ರಕ್ತ ಶೇಖರಣಾ ಘಟಕವಿದ್ದು, ಅಗತ್ಯವಿರುವಷ್ಟು ರಕ್ತ ಶೇಖರಣೆ ಮಾಡಿಕೊಳ್ಳದ ಕಾರಣ ತುರ್ತು ಸಂದರ್ಭಗಳಲ್ಲಿ ರೋಗಿಗಳಿಂದ ರಕ್ತ ತರಿಸುವಂತಹ ಕ್ರಮವನ್ನು ತಡೆಯಬೇಕು ಎಂದು ರೋಗಿಗಳ ಬಂಧುಗಳು ಒತ್ತಾಯಿಸಿದ್ದಾರೆ.

ರಕ್ತ ಪರೀಕ್ಷಾ ಕೇಂದ್ರದಲ್ಲಿ ಹಿರಿಯ ಪರೀಕ್ಷಕ ಹುದ್ದೆ ಖಾಲಿ ಇದೆ. ಸ್ಕ್ಯಾನಿಂಗ್ ಯಂತ್ರೋಪಕರಣಗಳಿದ್ದರೂ ಸಹ ರೇಡಿಯಾಲಜಿಸ್ಟ್ ನೇಮಕವಾಗಿಲ್ಲ. ರೋಗಿಗಳು ಮಾತ್ರ ಸ್ಕ್ಯಾನಿಂಗ್ ಅನ್ನು ಹೊರಗಿನಿಂದ ಮಾಡಿಸಿ ವರದಿ ತರುತ್ತಾರೆ. ಆಪ್ತ ಸಮಾಲೋಚಕರ ವಿಭಾಗಕ್ಕೆ ಒಬ್ಬರು ನರ್ಸ್ ಹುದ್ದೆ ಖಾಲಿ ಇದೆ. ವೈಧ್ಯರು ಸಾಕಷ್ಟು ಸಂಖ್ಯೆಯಲ್ಲಿದ್ದು ಚರ್ಮ ರೋಗ ತಜ್ಞರ ಹುದ್ದೆ ಖಾಲಿ ಇದೆ. ತಿಂಗಳಿಗೆ ನೂರು ಗರ್ಭಿಣಿಯರ ಹೆರಿಗೆ ನಡೆಸುವ ಆಸ್ಪತ್ರೆಯಾಗಿರುವುದರಿಂದ ಮತ್ತೊಬ್ಬರು ತಜ್ಞ ವೈದ್ಯರ ನೇಮಕ ಆಗಬೇಕಿದೆ. ಆಸ್ಪತ್ರೆಯ ಪರಿಸರ ಮಾತ್ರ ಸುಂದರವಾಗಿದ್ದು, ರೋಗಿಗಳ ಕಡೆಯವರು ದ್ವಿಚಕ್ರವಾಹನಗಳನ್ನು ಬಾಗಿಲು ಮುಂದೆಯೇ ನಿಲ್ಲಿಸುತ್ತಿದ್ದು, ಆಸ್ಪತ್ರೆಯವರು ಹಾಕಿರುವ ಫಲಕಕ್ಕೆ ಕಿಂಚಿತ್ತು ಗೌರವವಿಲ್ಲದ ನಡೆದುಕೊಳ್ಳುತ್ತಿರುವ ಕಾರಣ ರೋಗಿಗಳು, ಆಂಬುಲೆನ್ಸ್ ಗಳು ತುರ್ತು ಸಮಯದಲ್ಲಿ ಓಡಾಡುವುದಕ್ಕೆ ಸಮಸ್ಯೆಯಾಗುತ್ತಿದೆ ಎಂದು ಜನರು ದೂರಿದ್ದಾರೆ.

ಗ್ರಾಮೀಣ ಬಡ ಜನರೇ ಹೆಚ್ಚಾಗಿ ಬರುವ ಆಸ್ಪತ್ರೆಯನ್ನು ಮಲ್ಟಿ ಸ್ಪೇಷಲ್ ಆಸ್ಪತ್ರೆಯ ಸವಲತ್ತುಗಳ ಕೊಡಲು ಬೇಕಾದ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಶಾಸಕ ಡಿ.ಎಸ್.ಸುರೇಶ್ ಪತ್ರಿಕೆಗೆ ಭರವಸೆ ನೀಡಿದ್ದಾರೆ.
**
ಸರ್ಕಾರ ಮತ್ತು ಕ್ಷೇತ್ರದ ಶಾಸರು ಹೆಚ್ಚಿನ ಮುತುವರ್ಜಿ ವಹಿಸಿ, ಸಾರ್ವಜನಿಕ ಆಸ್ಪತ್ರೆಗೆ ಕಾಯಕಲ್ಪ ನೀಡಿ ಬಡ ರೋಗಿಗಳಿಗೆ ನೆರವಾಗಲಿ
ಮೋಹನ್ ಕುಮಾರ್, ಸಾಮಾಜಿಕ ಕಾರ್ಯಕರ್ತ

 **
ಆಸ್ಪತ್ರೆ ಸಿಬ್ಬಂದಿಯ ತುರ್ತು ಸಭೆ ನಡೆಸಿ ಕುಂದು ಕೊರತೆಗಳ ಪರಿಶೀಲಿಸಲಾಗುವುದು. ಜನರಿಗೆ ಉತ್ತಮ ಸೇವೆ ಒದಗಿಸಲು ಸೂಚಿಸಲಾಗುವುದು – ಡಿ.ಎಸ್.ಸುರೇಶ್‌,  ಶಾಸಕ

ದಾದಾಪೀರ್‌, ತರೀಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.