ADVERTISEMENT

‘ಜಾಗತಿಕ ಮಾನದಂಡಕ್ಕೆ ತಕ್ಕ ಪಠ್ಯಕ್ರಮ ಅಗತ್ಯ’

ಆದಿಚುಂಚನಗಿರಿ ತಾಂತ್ರಿಕ ವಿದ್ಯಾಲಯ; ಪದವಿ ಪ್ರದಾನ ಸಮಾರಂಭ

​ಪ್ರಜಾವಾಣಿ ವಾರ್ತೆ
Published 26 ಮೇ 2018, 10:08 IST
Last Updated 26 ಮೇ 2018, 10:08 IST

ಚಿಕ್ಕಮಗಳೂರು: ‘ಜಾಗತಿಕ ಮಾನ ದಂಡಗಳಿಗೆ ಅನುಗುಣವಾಗಿ ಪಠ್ಯ ಕ್ರಮ ರೂಪಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕಿದೆ. ಬದಲಾದ ಕಾಲಘಟಕ್ಕೆ ತಕ್ಕಂತೆ ಪಠ್ಯಕ್ರಮವನ್ನೂ ಮಾರ್ಪಾಡು ಮಾಡುವ ಅಗತ್ಯ ಇದೆ’ ಎಂದು ಆದಿ ಚುಂಚನಗಿರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್‌.ಚಂದ್ರಶೇಖರ ಶೆಟ್ಟಿ ಅಭಿಪ್ರಾಯಪಟ್ಟರು.

ನಗರದ ಆದಿಚುಂಚನಗಿರಿ ತಾಂತ್ರಿಕ ವಿದ್ಯಾಲಯದಲ್ಲಿ (ಎಐಟಿ) ಶುಕ್ರವಾರ ಏರ್ಪಡಿಸಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತ ನಾಡಿದರು. ‘ಶಿಕ್ಷಣ ಪದ್ಧತಿಯ ಕುರಿತು ಚರ್ಚೆ ಮಾಡಬೇ ಕಿದೆ. ಎಂಜಿನಿಯರಿಂಗ್‌ ಪದವೀಧರರು ಉದ್ಯೋಗ ಪಡೆ ಯಲು ಅನುಕೂಲವಾಗುವಂತೆ ಪಠ್ಯ ರಚಿಸಬೇಕು. ಕಲಿಕೆ ಮತ್ತು ಬೋಧನಾ ಗುಣಮಟ್ಟ ವೃದ್ಧಿಗೆ ಆದ್ಯತೆ ನೀಡಬೇಕಿದೆ’ ಎಂದು ಹೇಳಿದರು.

ದೇಶದಲ್ಲಿ ಸುಮಾರು 800ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು, 40 ಸಾವಿರಕ್ಕೂ ಅಧಿಕ ಉನ್ನತ ಶಿಕ್ಷಣ ಸಂಸ್ಥೆಗಳು ಇವೆ. 40 ಸಾವಿರ ಸಂಸ್ಥೆಗಳ ಪೈಕಿ 10,362 ಎಂಜಿನಿ ಯರಿಂಗ್‌ ವಿದ್ಯಾಲಯಗಳು ಇವೆ. ಎಂಜಿನಿಯರಿಂಗ್‌ನ ಕೆಲವಾರು ವಿಭಾಗಗಳಿಗೆ ವಿದ್ಯಾರ್ಥಿಗಳೇ ದಾಖ ಲಾಗುತ್ತಿಲ್ಲ. ಸೀಟುಗಳು ಖಾಲಿ ಉಳಿಯುತ್ತಿವೆ. ಎಂಜಿನಿಯರಿಂಗ್ ಬೇಡಿಕೆ ಕುಸಿಯಲು ಕಾರಣ ಏನು ಎಂಬುದರ ಅವಲೋಕನಕ್ಕೆ ಇದು ಸಕಾಲ. ಎಂಜಿನಿಯರಿಂಗ್‌ಗೆ ಕೋರ್ಸ್‌ ಸೇರಲು ವಿದ್ಯಾರ್ಥಿಗಳು ಯಾಕೆ ಮುಂದೆ ಬರುತ್ತಿಲ್ಲ ಎಂಬ ನಿಟ್ಟಿನಲ್ಲಿ ಶಿಕ್ಷಣ ತಜ್ಞರು, ನೀತಿ ನಿರೂಪಕರು ಗಂಭೀರ ಚಿಂತನೆ ನಡೆಸಬೇಕಿದೆ ಎಂದು ಹೇಳಿದರು.

ADVERTISEMENT

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ), ಎಂಸಿಐ (ಭಾರತೀಯ ವೈದ್ಯಕೀಯ ಮಂಡಳಿ) ಮೊದಲಾದ ನಿಯಂತ್ರಣ ಸಂಸ್ಥೆಗಳು ಈ ನಿಟ್ಟಿನಲ್ಲಿ ಯೋಚಿಸಬೇಕು. ಹಳೆಯ ಪದ್ಧತಿಗಳಿಗೆ ತೆರೆ ಎಳೆದು, ಉನ್ನತ ಶಿಕ್ಷಣದಲ್ಲಿನ ಸಮಸ್ಯೆಗಳನ್ನು ಪರಿಹರಿಸಬೇಕು. ಎಂಜಿನಿಯರಿಂಗ್‌ ಕಾಲೇಜುಗಳು ಕೈಗಾರಿಕೆಗಳೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿರಬೇಕು. ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಇದು ಪೂರಕ. ಕೌಶಲ ಕಲಿಕೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ವಿದ್ಯಾಲಯಗಳಲ್ಲಿ ಬೋಧನೆ ಮತ್ತು ಕಲಿಕೆ ಗುಣಮಟ್ಟ ಸುಧಾರಣೆಗೆ ಆದ್ಯತೆ ನೀಡಬೇಕು. ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ, ಅವಿಷ್ಕಾರ, ಜ್ಞಾನ ಉತ್ಪಾದನೆಗೆ ಒತ್ತು ನೀಡಬೇಕು. ಹೊಸ ಆಲೋಚನೆ, ವಿಚಾರಗಳ ಕಡೆಗೆ ಗಮನ ಕೇಂದ್ರೀಕರಿಸಬೇಕು. ಶೈಕ್ಷಣಿಕ ಸುಧಾರಣೆಯಲ್ಲಿ ಬೋಧಕರ ಪಾತ್ರ ಪ್ರಮುಖವಾದುದು. ಅವರು ನಿರಂತರವಾಗಿ ಹೊಸ ವಿಷಯಗಳನ್ನು ಗ್ರಹಿಸುತ್ತಿರಬೇಕು. ನವೀನ ವಿಚಾ ರಗಳನ್ನು ತಿಳಿದುಕೊಳ್ಳಬೇಕು. ಸಂಶೋಧನೆ, ಸಂಶೋಧನೋತ್ತರ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು. ಕೌಶಲ ಕಲಿಕೆ ಆದ್ಯತೆ ನೀಡಲು ಗಮ ನಹರಿಸಬೇಕಾದ ಅಗತ್ಯ ಇದೆ. ಕಲಿಕೆಯ ಜೊತೆಗೆ ಸಹಬಾಳ್ವೆಯನ್ನು ರೂಢಿಸಿ ಕೊಳ್ಳುವುದು ಮುಖ್ಯ ಎಂದರು.

ಸಾಧನೆ ಮೆರೆದ ಎಂ.ಸಚಿನ್‌ ಕಾರ್ತಿಕ್‌, ಸಿ.ಆರ್‌. ಮೇಘಾ, ಕೆ.ಪಿ.ದಿವ್ಯಾಪ್ರಭಾ, ಸಿ.ಎ.ಅಮೃತಾ, ಪಿ.ಎಸ್‌.ಸೌಮ್ಯಾ, ಸಿ.ಟಿ.ಚಂದ್ರಕಲಾ, ಎಸ್‌.ಬಿ.ಸಚಿನ್‌, ಸಿ.ಎಂ.ಶ್ರದ್ಧಾ, ಕೆ.ಸಿ.ಲೋಕೇಶಪ್ಪ ಅವರಿಗೆ ಪುರಸ್ಕಾರ ನೀಡಲಾಯಿತು.

ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಗುಣನಾಥ ಸ್ವಾಮೀಜಿ, ಹಾಸನ ಶಾಖಾಮಠದ ಶಂಭುನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಸಿ.ಕೆ.ಸುಬ್ಬರಾಯ, ಎಐಟಿ ಪ್ರಾಂಶುಪಾಲ ಪ್ರೊ.ಸಿ.ಟಿ.ಜಯದೇವ, ಕೆ.ಮೋಹನ್‌ ಇದ್ದರು.

‘ಓದು ಮುಗಿದ ನಂತರ ನಿಜ ಅಧ್ಯಾಯ ಆರಂಭ’

ಪದವಿ ಮುಗಿಸಿದ ನಂತರ ಬದುಕಿನ ನಿಜ ಅಧ್ಯಾಯ ಆರಂಭವಾಗುತ್ತದೆ. ಶೈಕ್ಷಣಿಕ ಅವಧಿಯಲ್ಲಿ ಕಲಿತ ವಿಚಾರಗಳನ್ನು ಅನ್ವಯಿಸಿ ಜೀವನದಲ್ಲಿ ಯಶಸ್ಸು ಸಾಧಿಸಬೇಕು. ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಭಾವನೆಗಳ ಮೇಲೆ ನಿಯಂತ್ರಣವಿರಲಿ

ನಾವೆಲ್ಲರೂ ಸಮಾಜಜೀವಿಗಳು. ನಾವು ಎಷ್ಟು ಬುದ್ಧಿವಂತರು ಎಂಬುದಕ್ಕಿಂತ ಕುಟುಂಬ, ಸಮಾಜಕ್ಕೆ ನಮ್ಮ ಕೊಡುಗೆ ಏನು ಎಂಬುದು ಮುಖ್ಯ. ಜೀವನದಲ್ಲಿ ಯಶಸ್ಸು ಸಾಧಿಸಲು ಭಾವನಾತ್ಮಕ ಅಂಶಗಳ ಮೇಲೆ ನಿಯಂತ್ರಣ ಇರಬೇಕು. ಇತರರ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು. ದೈನಂದಿನ ಮತ್ತು ವೃತ್ತಿ ಬದುಕಿನ ನೈತಿಕ ಮೌಲ್ಯಗಳು ನಮ್ಮನ್ನು ಉನ್ನತ ಮಟ್ಟಕ್ಕೆ ಒಯ್ಯುತ್ತವೆ. ಜೀವನದಲ್ಲಿ ಆಧ್ಯಾತ್ಮಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಪ್ರೊ.ಎಸ್‌.ಚಂದ್ರಶೇಖರ ಶೆಟ್ಟಿ ಸಲಹೆ ನೀಡಿದರು.

**
ಉನ್ನತ ಶಿಕ್ಷಣವು ಸಾಮಾಜಿಕ–ಆರ್ಥಿಕ ಬದಲಾವಣೆಯ ಸಾಧನ. ಈಗಿನ ಶಿಕ್ಷಣ ಪದ್ಧತಿಯು ಜ್ಞಾನಾರ್ಜನೆ ಪ್ರಧಾನವಾಗಿದೆ
ಪ್ರೊ.ಎಸ್‌.ಚಂದ್ರಶೇಖರ ಶೆಟ್ಟಿ, ಆದಿಚುಂಚನಗಿರಿ ವಿವಿ ಕುಲಪತಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.