ADVERTISEMENT

ನೀರು ಪೂರೈಕೆಗೆ ಅಡ್ಡಿ: ಶಾಲೆಯ ಬಿಸಿಯೂಟ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2018, 7:27 IST
Last Updated 31 ಮಾರ್ಚ್ 2018, 7:27 IST

ಬಾಳೆಹೊನ್ನೂರು: ಚಿಕ್ಕಮಗಳೂರು ತಾಲ್ಲೂಕಿನ ಜಾಗರ ಹೋಬಳಿಯ ಸಿದ್ದಾಪುರ ಸುಗುಡವಾನಿಯಲ್ಲಿ ಶಾಲೆಗೆ ಸಂಪರ್ಕ ಕಲ್ಪಿಸಿರುವ ನೈಸರ್ಗಿಕ ನೀರು ಪೂರೈಕೆಗೆ ಖಾಸಗಿ ವ್ಯಕ್ತಿಯೊಬ್ಬರು ತಡೆಯೊಡ್ಡಿದ ಕಾರಣ ಗಂಗೆಗಿರಿಯಲ್ಲಿನ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ತಿಂಗಳಿನಿಂದ ಬಿಸಿಯೂಟ ಸ್ಥಗಿತಗೊಂಡಿದೆ ಎಂದು ಸ್ಥಳೀಯರು ದೂರಿದ್ದಾರೆ.

ಶಾಲೆಯಲ್ಲಿ ಸುಮಾರು 30ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ನಡೆಸುತ್ತಿದ್ದು, ನಿತ್ಯ ಶಾಲೆಯ ಪಕ್ಕದಲ್ಲಿ ಹರಿಯುತ್ತಿದ್ದ ನೈಸರ್ಗಿಕ ನೀರನ್ನೇ ಅಡುಗೆಗೆ ಬಳಸಲಾಗುತ್ತಿತ್ತು. ಆದರೆ, ಇತ್ತೀಚೆಗೆ ಖಾಸಗಿ ವ್ಯಕ್ತಿಯೊಬ್ಬರು ಶಾಲೆಗೆ ಹಾಗೂ ಅಂಗನವಾಡಿಗೆ ಸಂಪರ್ಕ ಕಲ್ಪಿಸಿದ್ದ ನೀರಿನ ಕಾಲುವೆಯನ್ನು ಅಡ್ಡಗಟ್ಟಿ, ತಮ್ಮ ತೋಟಕ್ಕೆ ಹಾಗೂ ಖಾಸಗಿ ವಿದ್ಯುತ್ ಉತ್ಪಾದನೆಗೆ ಬಳಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಹಿರಿಯ ಅಧಿಕಾರಿಗಳನ್ನು ಆಗ್ರಹಿಸಿ ಮನವಿ ಸಲ್ಲಿಸಿದ್ದಾರೆ. ಆದರೆ, ಯಾವುದೇ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಗ್ರಾಮಸ್ಥರಿಗೂ ಅಡ್ಡಿ: ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಗ್ರಾಮಸ್ಥರು, ಸುಗುಡವಾನಿ ಗ್ರಾಮದ ಗಂಗೇಗಿರಿಯಲ್ಲಿನ ಖಾಸಗಿ ವ್ಯಕ್ತಿಯೊಬ್ಬರು ಸಾರ್ವಜನಿಕರಿಗೆ ಬರುವ ನೈಸರ್ಗಿಕ ನೀಡಿಗೆ ತಡೆಯೊಡ್ಡಿ ಕಾಫಿ ತೋಟಕ್ಕೆ ಬಳಸುತ್ತಿದ್ದಾರೆ. ಇದರಿಂದ ಗ್ರಾಮದಲ್ಲಿನ 40 ಕುಟುಂಬಗಳ 200ಕ್ಕೂ ಅಧಿಕ ಜನರಿಗೆ ಮತ್ತು ಗ್ರಾಮದಲ್ಲಿನ ಜಾನುವಾರುಗಳಿಗೆ ದಿನನಿತ್ಯ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಗ್ರಾಮದಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಮಕ್ಕಳಿಗೂ ಸಹ ಇದೇ ನೀರು ಪೂರೈಕೆಯಾಗುತ್ತಿದ್ದು, ಅಲ್ಲಿಗೂ ನೀರಿನ ಸಂಪರ್ಕವಿಲ್ಲದೇ ತೊಂದರೆಯಾಗಿದೆ ಎಂದು ಹೇಳಿದ್ದಾರೆ.

ADVERTISEMENT

ಈ ಕುರಿತು ಸ್ಥಳೀಯ ಶಿರವಾಸೆ ಗ್ರಾಮ ಪಂಚಾಯಿತಿಗೆ ದೂರು ನೀಡಿದ ಕಾರಣ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳ ಪರಿಶೀಲನೆಗೆ ತೆರಳಿದಾಗ, ನೀರನ್ನು ಸಾರ್ವಜನಿಕರಿಗೆ ಬಿಡುವುದಿಲ್ಲ ಎಂದು ಹೇಳಿ, ಜನಪ್ರತಿನಿಧಿಗಳನ್ನು ಹಾಗೂ ಅಧಿಕಾರಿಗಳನ್ನು ಅವಾಚ್ಯವಾಗಿ ನಿಂದಿಸಿ ಕಳುಹಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಗ್ರಾಮಸ್ಥರಾದ ಪ್ರೇಮ್‌ಕುಮಾರ್, ರಮೇಶ್, ರಾಜೇಂದ್ರ, ವೆಂಕಟೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪಾ, ಉಪಾಧ್ಯಕ್ಷೆ ಹೂವಮ್ಮ ಸೇರಿದಂತೆ ಇಪ್ಪತ್ತಕ್ಕೂ ಅಧಿಕ ಜನ ಸಹಿ ಮಾಡಿ ಜಿಲ್ಲಾಧಿಕಾರಿಗೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.