ADVERTISEMENT

ಭದ್ರಾ ಮೇಲ್ದಂಡೆ ಯೋಜನೆ ತ್ವರಿತ ಜಾರಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2011, 9:55 IST
Last Updated 22 ಜನವರಿ 2011, 9:55 IST

ಬೆಟ್ಟತಾವರೆಕೆರೆ (ತರೀಕೆರೆ): ಬಚಾವತ್ ಆಯೋಗದ ತೀರ್ಪಿನಂತೆ ರಾಜ್ಯ ಸರ್ಕಾರ ತನ್ನ ಪಾಲಿನ ನೀರನ್ನು ಬಳಸಿಕೊಳ್ಳಲು ಭದ್ರಾ ಮೇಲ್ದಂಡೆ ಯೋಜನೆಯನ್ನು ತ್ವರಿತವಾಗಿ ಜಾರಿಗೆ ತರುತ್ತಿದೆ ಎಂದು ಶಾಸಕ ಡಿ.ಎಸ್.ಸುರೇಶ್ ಹೇಳಿದರು.ತಾಲ್ಲೂಕಿನ ಬೆಟ್ಟತಾವರೆಕೆರೆ ಗ್ರಾಮದಲ್ಲಿ ಗುರುವಾರ ಏರ್ಪಡಿಸಿದ್ದ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ನೂತನ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಯೋಜನೆಯಿಂದ ಜಮೀನು ಕಳೆದುಕೊಳ್ಳುತ್ತಿರುವ ರೈತರ ಬಗ್ಗೆ ಅನುಕಂಪವಿದೆ. ಆಳಕಾಲುವೆ ಮತ್ತು ಸುರಂಗ ಮಾರ್ಗ ತಪ್ಪಿಸಲು ಸರ್ಕಾರದ ಜತೆ ಚರ್ಚಿಸಿ ಬದಲಾವಣೆಗೆ ಸಸತವಾಗಿ ಪ್ರಯತ್ನಿಸಲಾಗುತ್ತಿದೆ.ರೈತರಿಗೆ ತೊಂದರೆಯಾಗದಂತೆ ಯೋಜನೆ ಜಾರಿಗೊಳಿಸಲು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.ಗ್ರಾಮದ ಜನತೆಗೆ ಅವಶ್ಯವಿರುವ ನಿವೇಶನವನ್ನು ನೀಡಲು ಕ್ರಮ ಕೈಗೊಳ್ಳಲಾಗಿದ್ದು, ಬೆಟ್ಟತಾವರೆಕೆರೆ ಗ್ರಾಮವನ್ನು ಸುವರ್ಣಗ್ರಾಮ ಯೋಜನೆಯ ವ್ಯಾಪ್ತಿಗೆ ಸೇರಿಸಲಾಗಿದೆ. ಗ್ರಾಮದ ಕೆರೆಗೆ ಸೋಪಾನಕಟ್ಟೆ ನಿರ್ಮಿಸಲು ಆದೇಶಿಸಿದ್ದು, ಸಮುದಾಯ ಭವನ ನಿರ್ಮಾಣಕ್ಕೆ ರೂ 2ಲಕ್ಷ ನೀಡಲಾಗಿದೆ ಎಂದರು.

ನೂತನ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಆರ್.ಆನಂದಪ್ಪ ಮಾತನಾಡಿ,ಸರ್ಕಾರದ ಯೋಜನೆಯನ್ನು ತಾಲ್ಲೂಕಿನಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಿದ್ದರಿಂದ ಕ್ಷೇತ್ರದ ಜನತೆ ಬಿಜೆಪಿಯನ್ನು ಬೆಂಬಲಿಸಿದ್ದಾರೆ ಎಂದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ವಿಶಾಲ ತಿಪ್ಪೇಶಪ್ಪ, ಕೆ.ಆರ್.ಆನಂದಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ರಾಜಕುಮಾರ್ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು.

ಜಿಲ್ಲಾ ಕೇಂದ್ರ ಬ್ಯಾಂಕಿನ ನಿರ್ದೇಶಕ ಎ.ಆರ್.ರಾಜಶೇಖರ್, ಹುಣಸಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ತಿಪ್ಪೇಶಪ್ಪ, ಕೋರನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪ ಶೇಖರಪ್ಪ, ಸದಸ್ಯರಾದ ಯೋಗೀಶ್, ಗ್ರಾಮಸ್ಥರಾದ ಪುರದಪ್ಪ, ಶಿವಕುಮಾರ್, ಹಾಲೇಶಪ್ಪ, ನಂಜುಂಡಪ್ಪ, ಚಿದಾನಂದ  ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.