ADVERTISEMENT

ರೈತರಿಗೆ ರುಚಿ ಹತ್ತಿಸಿದ ಕಾಫಿ ಇಳುವರಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2011, 9:10 IST
Last Updated 4 ಫೆಬ್ರುವರಿ 2011, 9:10 IST

ಚಿಕ್ಕಮಗಳೂರು: ವಾರ್ಷಿಕ ಕಾಫಿ ಇಳುವರಿಯ ಬಗ್ಗೆ ಕಾಫಿ ಮಂಡಳಿ ಸಂಗ್ರಹಿಸುವ ಮುಂಗಾರು ನಂತರದ ಇಳುವರಿ ಅಂದಾಜು ಮಾಹಿತಿಯಂತೆ (ಪೋಸ್ಟ್ ಮಾನ್ಸೂನ್ ಎಸ್ಟಿಮೇಟ್) ಜಿಲ್ಲೆಯಲ್ಲಿ ಈ ಬಾರಿ ಒಟ್ಟು 73,485 ಮೆಟ್ರಿಕ್ ಟನ್ ಕಾಫಿ ಕೊಯ್ಲಾಗಲಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಕಾಫಿ ಮಂಡಳಿಯ ಮೂಲಗಳು, ಮುಂಗಾರು ನಂತರದ ಅಂದಾಜಿನ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 37,475 ಅರೇಬಿಕಾ ಮತ್ತು 36,010 ಟನ್ ರೊಬಸ್ಟಾ ಕಾಫಿ ಇಳುವರಿಯ ನಿರೀಕ್ಷೆ ಎಂದು ಹೇಳಿವೆ.

ಈ ಬಾರಿ ಮುಂಗಾರು ಮಳೆ ಡಿಸೆಂಬರ್‌ವರೆಗೆ ವಿಸ್ತರಿಸಿದ ಕಾರಣ ಕಾಫಿ ಇಳುವರಿ ಕುಂಠಿತಗೊಳ್ಳ ಬಹುದು ಎಂಬ ಬೆಳೆಗಾರರ ಅಂದಾಜನ್ನು ಕಾಫಿ ಮಂಡಳಿಯ ಅಂದಾಜು ಸಹ ಪುಷ್ಟೀಕರಿಸಿದೆ.ಕಾಫಿ ಹೂ ಅರಳಿದ ನಂತರ (ಪೋಸ್ಟ್ ಬ್ಲಾಸಮ್ ಎಸ್ಟಿಮೇಟ್) ಸಂಗ್ರಹಿಸುವ ಇಳುವರಿ ಅಂದಾಜು ಮಾಹಿತಿಯ ಪ್ರಕಾರ ಈ ಬಾರಿ 39,830 ಟನ್ ಅರೇಬಿಕಾ ಮತ್ತು 37,050 ಟನ್ ರೊಬಸ್ಟಾ ಸೇರಿ ಒಟ್ಟು 76,880 ಮೆಟ್ರಿಕ್ ಟನ್ ಕಾಫಿ ಇಳುವರಿ ಬರಬೇಕಿತ್ತು.

ಪೋಸ್ಟ್ ಬ್ಲಾಸಮ್ ಮತ್ತು ಪೋಸ್ಟ್ ಮಾನ್ಸೂನ್ ಅಂದಾಜಿನ ಅಂಕಿಅಂಶಗಳನ್ನು ವಿಶ್ಲೇಷಿ ಸಿದಾಗ 3,395 ಟನ್ ಇಳುವರಿ ಕುಂಠಿತವಾ ಗಿರುವುದು ಅರಿವಾಗುತ್ತದೆ.ಕಳೆದ ಬಾರಿ (2009-10) ಬೆಳೆ ವರ್ಷ ಮುಗಿದ ನಂತರ ಕಾಫಿ ಮಂಡಳಿ ಸಂಗ್ರಹಿಸಿದ್ದ ಇಳುವರಿ ಮಾಹಿತಿಯ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 36,460 ಟನ್ ಅರೆಬಿಕಾ, 33,335 ಟನ ರೊಬಸ್ಟಾ ಸೇರಿ ಒಟ್ಟು 69,795 ಟನ್ ಕಾಫಿ ಇಳುವರಿ ಸಿಕ್ಕಿತ್ತು.ಈ ಮಾಹಿತಿಯೊಂದಿಗೆ ಹೋಲಿಸಿದರೆ ಈ ಬಾರಿ ಒಟ್ಟು 3,690 ಟನ್ ಕಾಫಿ ಇಳುವರಿ ಹೆಚ್ಚಾಗುವ ನಿರೀಕ್ಷೆ ಇದೆ.

ಬಂಪರ್ ಬೆಲೆ: ವಿಶ್ವದ ಇತರ ಕಾಫಿ ಬೆಳೆಯುವ ರಾಷ್ಟ್ರಗಳಲ್ಲಿ ಹವಾಮಾನ ವೈಪರಿತ್ಯದಿಂದಾಗಿ ಬೆಳೆಹಾನಿ ಸಂಭವಿಸಿರುವುದಿಂದ ಈ ಬಾರಿ ಅರೇಬಿಕಾಗೆ ಅಪರೂಪದ ಬೆಲೆ ಬಂದಿದೆ. ಪ್ರಸ್ತುತ 50 ಕೆಜಿ ಕಾಫಿ ಚೀಲಕ್ಕೆ 9600ರಿಂದ 9800ರೂವರೆಗೂ ಸಿಗುತ್ತಿದೆ.

ಚಿಲ್ಲರೆ ಮಾರಾಟ ದರ ಹೆಚ್ಚಳ: ಚಿಲ್ಲರೆ ಮಾರುಕಟ್ಟೆಯಲ್ಲೂ ಪ್ರತಿ ಕೆಜಿ ಕಾಫಿಗೆ ಸುಮಾರು 50 ರೂಪಾಯಿಯಷ್ಟು ಕಾಫಿ ಬೆಲೆ ಏರಿದೆ. ಸಾಮಾನ್ಯರು ಬಳಸುವ ಮಧ್ಯಮ ಗುಣಮಟ್ಟದ ಕಾಫಿ ಪುಡಿ ಕೆಜಿಗೆ 160- 170ರೂ ಬೆಲೆಯಲ್ಲಿ ಮಾರಾಟವಾಗುತ್ತಿದೆ. ಉತ್ತಮ ಗುಣಮಟ್ಟದ ಕಾಫಿಪುಡಿ ಬೆಲೆ ಪ್ರತಿ ಕೆಜಿಗೆ 200- 250ಗೆ ಏರಿದೆ.
ಬೆಳೆ ಪ್ರದೇಶದ ಮಾಹಿತಿ: ಜಿಲ್ಲೆಯಲ್ಲಿ ಒಟ್ಟು 56,995 ಹೆಕ್ಟೇರ್ ಪ್ರದೇಶದಲ್ಲಿ ಅರೇಬಿಕಾ, 31,565 ಹೆಕ್ಟೇರ್ ಪ್ರದೇಶದಲ್ಲಿ ರೊಬಸ್ಟಾ ಕಾಫಿ ಬೆಳೆಯಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.