ADVERTISEMENT

ಹೊರ ಜಿಲ್ಲೆಯಿಂದ ಮರಳಿದ ದಂಡು

ಕಾಫಿನಾಡಿಗೆ ಮೂರು ದಿನಗಳಲ್ಲಿ 822 ಮಂದಿ ವಾಪಸ್‌

ಬಿ.ಜೆ.ಧನ್ಯಪ್ರಸಾದ್
Published 5 ಮೇ 2020, 15:35 IST
Last Updated 5 ಮೇ 2020, 15:35 IST
ಚಿಕ್ಕಮಗಳೂರಿನ ತಪಾಸಣೆ ಕೇಂದ್ರದಲ್ಲಿ ಹೊರ ಜಿಲ್ಲೆಯಿಂದ ಬಂದವರನ್ನು ‘ಥರ್ಮಲ್ ಸ್ಕ್ರೀನಿಂಗ್‌’ ಮಾಡಲಾಯಿತು.
ಚಿಕ್ಕಮಗಳೂರಿನ ತಪಾಸಣೆ ಕೇಂದ್ರದಲ್ಲಿ ಹೊರ ಜಿಲ್ಲೆಯಿಂದ ಬಂದವರನ್ನು ‘ಥರ್ಮಲ್ ಸ್ಕ್ರೀನಿಂಗ್‌’ ಮಾಡಲಾಯಿತು.   

ಚಿಕ್ಕಮಗಳೂರು: ಕಾಫಿನಾಡು ಹಸಿರು ವಲಯದಲ್ಲಿದೆ. ಈಗ ಹೊರ ಜಿಲ್ಲೆಗಳಿಂದ (ಕೆಂಪು, ಕಿತ್ತಳೆ ವಲಯ) ಊರುಗಳಿಗೆ ದಂಡು ಮರಳುತ್ತಿರುವುದು ಜನರಲ್ಲಿ ಭೀತಿಗೆ ಎಡೆಮಾಡಿದೆ.

ಉದ್ಯೋಗ, ವ್ಯಾಪಾರ ಇತರ ಕಾರ್ಯ ನಿಮಿತ್ತ ಬೆಂಗಳೂರು, ಇತರೆಡೆಗಳಲ್ಲಿ ನೆಲೆಸಿದ್ದ ನೂರಾರು ಮಂದಿ ಊರುಗಳಿಗೆ ವಾಪಸಾಗಿದ್ದಾರೆ. ಕೊರೊನಾ ಸೋಂಕು ಇದ್ದವರು ‘ನುಸುಳಿ’ ಇಲ್ಲಿಯೂ ಅಂಟಿಸಿ ಬಿಟ್ಟಾರು ಎಂಬ ಆತಂಕ ಕಾಡುತ್ತಿದೆ.

ಹೊರ ಜಿಲ್ಲೆಗಳಿಂದ ಇದೇ 3ರಂದು ಎಂಟು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ 272 ಮಂದಿ, 4 ರಂದು 14 ಬಸ್‌ಗಳಲ್ಲಿ 352 ಹಾಗೂ 5ರಂದು ಏಳು ಬಸ್‌ಗಳಲ್ಲಿ 198 ಮಂದಿ ನಗರಕ್ಕೆ ಬಂದಿದ್ದಾರೆ. ತೇಗೂರಿನ ಮೊರಾರ್ಜಿ ವಸತಿ ಶಾಲೆಯಲ್ಲಿ ತೆರೆದಿರುವ ಕೇಂದ್ರದಲ್ಲಿ ಅವರ ಆರೋಗ್ಯ ತಪಾಸಣೆ ಮಾಡಲಾಗಿದೆ. ಹೆಸರು, ಫೋನ್‌ ಸಂಖ್ಯೆ, ಊರು, ಇತರ ಮಾಹಿತಿ ನೋಂದಾಯಿಸಿಕೊಳ್ಳಲಾಗಿದೆ.

ADVERTISEMENT

‘ಜಿಲ್ಲೆಯಲ್ಲಿ ಈವರೆಗೆ ಕೋವಿಡ್‌–19 ಪತ್ತೆಯಾಗಿಲ್ಲ. ಹಸಿರು ವಲಯದಲ್ಲೇ ಜಿಲ್ಲೆಯನ್ನು ಕಾಪಾಡಿಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ. ಈಗ ಲಾಕ್‌ಡೌನ್‌ ಸಡಿಲಗೊಳಿಸಿದ್ದಾರೆ. ಹೊರ ಜಿಲ್ಲೆಗಳಿಂದ ತವರು ಜಿಲ್ಲೆಗೆ ಜನ ಬಂದಿದ್ದಾರೆ. ಹಾಗೆ ಬಂದವರಲ್ಲಿ ಸೋಂಕು ಇದ್ದರೆ ಇಲ್ಲಿ ಹರಡುತ್ತದೆ ಎಂಬ ಭಯ ಆವರಿಸಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಆದ್ಯ ಗಮನ ಹರಿಸಬೇಕು’ ಎಂದು ಶಿಕ್ಷಕಿ ಸರಳಾ ಎಂಬವರು ಆತಂಕ ವ್ಯಕ್ತಪಡಿಸಿದರು.

ಜಿಲ್ಲೆಗೆ ಈವರೆಗೆ ವಾಪಸಾಗಿರುವವರ ಪೈಕಿ ಬೆಂಗಳೂರಿನಿಂದ ಬಂದವರ ಸಂಖ್ಯೆ ಜಾಸ್ತಿ ಇದೆ. ವಾಪಸಾಗಿರುವವರ ಆರೋಗ್ಯದ ಮೇಲೆ ಜನರ ‘ದೃಷ್ಟಿ’ ನೆಟ್ಟಿದೆ.

‘ಹೊರಟ ಸ್ಥಳದಿಂದ ತಪಾಸಣೆ (ಥರ್ಮಲ್‌ ಸ್ಕ್ರೀನಿಂಗ್‌…) ಮಾಡಿಸಿ ಕಳಿಸುತ್ತಾರೆ. ಬಂದವರನ್ನು ಇಲ್ಲಿಯೂ ತಪಾಸಣೆ ಮಾಡಿ ಕೈಗೆ ಮೊಹರು (ಸೀಲ್‌) ಹಾಕುತ್ತೇವೆ. 28 ದಿನ ಹೋಂ ಕ್ವಾರಂಟೈನ್‌ನಲ್ಲಿ ಇರಬೇಕು ಎಂದು ಸೂಚನೆ ನೀಡಿದ್ದೇವೆ. ಆರೋಗ್ಯದಲ್ಲಿ ವ್ಯತ್ಯಯ ಕಂಡುಬಂದರೆ ತಕ್ಷಣವೇ ಸ್ಥಳೀಯ ಆಸ್ಪತ್ರೆ ಅಥವಾ ಜಿಲ್ಲಾಸ್ಪತ್ರೆಗೆ ಬರುವಂತೆ ಸೂಚನೆ ನೀಡಿದ್ದೇವೆ’ ಎಂದು ಉಪವಿಭಾಗಾಧಿಕಾರಿ ಡಾ.ಎಚ್‌.ಎಲ್‌.ನಾಗರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈವರೆಗೆ ಬಂದಿರುವ ಯಾರಲ್ಲೂ ಸೋಂಕಿನ ಲಕ್ಷಣ ಕಂಡುಬಂದಿಲ್ಲ. ನಿಗಾ ವಹಿಸಲಾಗಿದೆ. ಹೊರ ರಾಜ್ಯಗಳಲ್ಲಿ ಸಿಲುಕಿಕೊಂಡವರು ಜಿಲ್ಲೆಗೆ ಬರುವ ಪ್ರಕ್ರಿಯೆ ಒಂದೆರಡು ದಿನಗಳಲ್ಲಿ ಶುರುವಾಗಲಿದೆ. ತಪಾಸಣೆ, ನಿಗಾ ಮತ್ತಷ್ಟು ಬಿಗಿಗೊಳಿಸಬೇಕಾಗಿದೆ’ ಎಂದು ವೈದ್ಯಾಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.