ADVERTISEMENT

‘ತಾಪಮಾನ ವೈಪರಿತ್ಯದಿಂದ ಸವಾಲಾದ ಕೃಷಿ’

ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 6:44 IST
Last Updated 24 ಡಿಸೆಂಬರ್ 2025, 6:44 IST
ಶೃಂಗೇರಿಯ ಆನೆಗುಂದ ಅಡಿಕೆ ಸಂಶೋಧನಾ ಕೇಂದ್ರದಲ್ಲಿ ನಡೆದ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕರಾದ ಪ್ರೇಮ್ ಕುಮಾರ್, ಅನುಪ್ ಶೆಟ್ಟಿಹಳ್ಳಿ ಅವರನ್ನು ಸನ್ಮಾನಿಸಲಾಯಿತು
ಶೃಂಗೇರಿಯ ಆನೆಗುಂದ ಅಡಿಕೆ ಸಂಶೋಧನಾ ಕೇಂದ್ರದಲ್ಲಿ ನಡೆದ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕರಾದ ಪ್ರೇಮ್ ಕುಮಾರ್, ಅನುಪ್ ಶೆಟ್ಟಿಹಳ್ಳಿ ಅವರನ್ನು ಸನ್ಮಾನಿಸಲಾಯಿತು   

ಶೃಂಗೇರಿ: `ಜಾಗತಿಕ ತಾಪಮಾನದ ವೈಪರಿತ್ಯದಿಂದ ರೈತರು ಬೆಳೆ ಬೆಳೆಯಲು ಸವಾಲು ಉಂಟಾಗಿದೆ. ಇದರಿಂದ ಬೆಳೆಗಳಿಗೆ ವಿವಿಧ ರೋಗಗಳು ಆವರಿಸಿ ಬೆಳೆ ನಾಶವಾಗುತ್ತಿದ್ದು, ಮಲೆನಾಡಿನ ರೈತರು ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ’ ಎಂದು ಶಿವಮೊಗ್ಗದ ನವಿಲೆ ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಗಂಗಾಧರ ನಾಯ್ಕ್ ಹೇಳಿದರು.

ಶೃಂಗೇರಿ ತಾಲ್ಲೂಕು ಕೃಷಿಕ ಸಮಾಜ ಹಾಗೂ ರೈತ ಸಂಘ, ಕೃಷಿ ಮತ್ತು ತೋಟಗಾರಿಕಾ ಇಲಾಖೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಂಗಳವಾರ ಆನೆಗುಂದ ಅಡಿಕೆ ಸಂಶೋಧನಾ ಕೇಂದ್ರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘2025ರಲ್ಲಿ ರಾಜ್ಯದ 7.70 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆದ ಅಡಿಕೆಗೆ ಎಲೆ ಚುಕ್ಕಿ ರೋಗ ತಗುಲಿದೆ. ಶೇ 62ರಷ್ಟು ಅಡಿಕೆ ಉತ್ಪಾದನೆ ಕರ್ನಾಟಕದಲ್ಲಿ ಆಗುತ್ತಿದೆ. ಬಯಲು ಸೀಮೆ ಪ್ರದೇಶಗಳಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, ಪ್ರಸ್ತುತ 2 ಲಕ್ಷ ಹೆಕ್ಟೇರ್ ಬೆಳೆ ಜಾಸ್ತಿಯಾಗಿದೆ. ತೆಲಂಗಾಣದಲ್ಲಿ ಅಡಿಕೆಯನ್ನು ಅತಿ ಹೆಚ್ಚು ಬೆಳೆಸುತ್ತಿದ್ದಾರೆ. ಅಡಿಕೆ ಬೆಳೆಯಲು ರೈತರು ಹೆಚ್ಚು ಆಸಕ್ತಿ ವಹಿಸಲು ಪ್ರಮುಖ ಕಾರಣ ಅಡಿಕೆಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ದರ ಇದೆ’ ಎಂದರು.

ADVERTISEMENT

ಮಲೆನಾಡಿನಲ್ಲಿ ಈ ಬಾರಿ ಅತಿವೃಷ್ಟಿಯಿಂದ ವಾತಾವರಣದಲ್ಲಿ ತೇವಾಂಶ ಜಾಸ್ತಿ ಉಂಟಾಗಿದೆ. ಬೆಳೆ ಕುಂಠಿತಕ್ಕೆ 1 ರಿಂದ 34 ಡಿಗ್ರಿ ಉಷ್ಠಾಂಶದ ಅವಶ್ಯಕತೆ ಇದೆ. ಆದರೆ ಪ್ರಸ್ತುತ 14 ರಿಂದ 36 ಡಿಗ್ರಿ ಉಷ್ಠಾಂಶ ಹೆಚ್ಚಿದ್ದು ರೋಗ ಉಲ್ಬಣವಾಗಲು ಪ್ರಮುಖ ಕಾರಣವಾಗಿದೆ. ಇಲಾಖೆ ಶಿಫಾರಸು ಮಾಡಿದ ಶೀಲೀಂಧ್ರ ನಾಶಕವನ್ನು ಗಿಡಗಳ ಮೇಲೆ ಸಿಂಪಡಿಸಬೇಕು. ಈ ಬಾರಿ ಕಳಸ, ಶೃಂಗೇರಿ, ಕೊಪ್ಪ, ತೀರ್ಥಹಳ್ಳಿ, ಶಿರಸಿ, ಸಿದ್ದಾಪುರ, ಹೊಸನಗರ, ಸಾಗರ ಭಾಗಗಳಲ್ಲಿ ಎಲೆಚುಕ್ಕಿ ರೋಗ ಕಾಣಿಸಿಕೊಂಡಿದೆ’ ಎಂದರು.

ಕೃಷಿಕ ಸಮಾಜ ಅಧ್ಯಕ್ಷ ಕಲ್ಕಟ್ಟೆ ಗೋಪಾಲ್ ಹೆಗ್ಡೆ ಮಾತನಾಡಿ, ‘ಎಲ್ಲಾ ಮಲೆನಾಡಿನ ರೈತರ ಗಮನಕ್ಕೆ ತಂದು ವಿಮಾ ಯೋಜನೆಯ ಟರ್ಮ್‍ಶೀಟ್‍ನ್ನು ಇಲಾಖೆ ಅಧಿಕಾರಿಗಳು ತಯಾರಿಸಬೇಕು. ತಾಲ್ಲೂಕಿನಲ್ಲಿ ಅತಿಹೆಚ್ಚು ಮಳೆ ಬಿದ್ದರೂ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ನಡುವೆ ಸಮನ್ವಯ ಕೊರತೆಯಿಂದ ಅತಿವೃಷ್ಟಿ ಎಂದು ಪೋಷಣೆಯಾಗಿಲ್ಲ. ಇದರಿಂದ ರೈತರಿಗೆ ದೊಡ್ಡ ಅನ್ಯಾಯವಾಗಿದೆ' ಎಂದರು.

ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕರಾದ ಪ್ರೇಮ್ ಕುಮಾರ್, ಅನುಪ್ ಶೆಟ್ಟಿಹಳ್ಳಿ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮವನ್ನು ಹಿರಿಯ ಕೃಷಿಕ ಐಯ್ಯಣ್ಣ ಗೌಡ ಉದ್ಘಾಟಿಸಿದರು. ರೈತ ಸಂಘ ಅಧ್ಯಕ್ಷ ಚಂದ್ರಶೇಖರ್ ಕಾನೋಳ್ಳಿ, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಶ್ರೀಕೃಷ್ಣ, ಅಡಿಕೆ ಸಂಶೋಧನಾ ಕೇಂದ್ರ ಮುಖ್ಯಸ್ಥ ಸಂಜೀವ ಜಕಾತೀಮಠ, ಕೃಷಿಕ ಸಮಾಜದ ಉಪಾಧ್ಯಕ್ಷ ಶ್ರೀಧರ್.ಜಿ.ಎಂ, ಸಂದೇಶ್ ಹೆಗ್ಡೆ, ಪುಟ್ಟಪ್ಪ ಹೆಗ್ಡೆ, ಶೈಲಾವತಿ, ಕೆಲವಳ್ಳಿ ಗುಂಡಪ್ಪ, ಕೃಷ್ಣಮೂರ್ತಿ, ಆಶೋಕ್, ಮಿಗಿನಕಲ್ಲು ವೆಂಕಟೇಶ್ ಭಟ್, ಪದಾಧಿಕಾರಿಗಳು ಹಾಜರಿದ್ದರು.

‘ಕೃಷಿ ಎಂದಿಗೂ ನಾಶವಾಗುವುದಿಲ್ಲ’

ಮನುಷ್ಯನ ಅಸ್ತಿತ್ವ ಇರುವ ತನಕ ಕೃಷಿ ಇರುತ್ತದೆ. ಮಹಾಭಾರತ ಕಾಲದಿಂದಲೂ ಇದ್ದ ಕೃಷಿಯ ಏಳು-ಬೀಳುಗಳನ್ನು ಪ್ರಸ್ತುತ ಸನ್ನಿವೇಶದಲ್ಲೂ ನಾವು ಎದುರಿಸುತ್ತಿದ್ದು ರೈತರು ಧೃತಿಗೆಡಬಾರದು. ಕೃಷಿಯಲ್ಲಿ ಇತ್ತೀಚಿಗಿನ ದಶಕಗಳಲ್ಲಿ ನಿರಾಶಾದಾಯಕ ಪ್ರತಿಕ್ರಿಯೆಗಳನ್ನು ಎದುರಿಸುತ್ತಿದ್ದೇವೆ. ಇದರ ಪರಿಣಾಮ ನಗರದತ್ತ ವಲಸೆ ಹೋಗುವರ ಸಂಖ್ಯೆ ಹೆಚ್ಚುತ್ತಿದೆ ಎಂದು ರೈತ ಸಂಘದ ಅಧ್ಯಕ್ಷ ಕಾನೋಳ್ಳಿ ಚಂದ್ರಶೇಖರ್ ಹೇಳಿದರು. ನಗರಕ್ಕೆ ಹೋಗುವ ಮುನ್ನ ಕೃಷಿ ಭೂಮಿಯನ್ನು ಮಾರಾಟ ಮಾಡುವುದು ಸಮಂಜಸವಲ್ಲ. ದೇಶದಲ್ಲಿ ಆಹಾರ ಸಮಸ್ಯೆ ಎದುರಾದಾಗ ಹಸಿರು ಕ್ರಾಂತಿಯ ಅನಿವಾರ್ಯತೆ ಎದುರಾಗಿತ್ತು. ಆದರೆ ಅದು ಈಗ ಕೆಂಪುಕ್ರಾಂತಿ ಆಗಿದ್ದು ಕೃಷಿಯಲ್ಲಿ ಹೆಚ್ಚು ರಾಸಾಯನಿಕ ವಸ್ತುಗಳನ್ನು ಬಳಸಿಕೊಳ್ಳುವ ಮನೋಭಾವ ಹೆಚ್ಚಿದೆ. ಜೀವನ ಚಕ್ರವು ಹಣದ ವ್ಯಾಮೋಹಕ್ಕೆ ಬಲಿಯಾಗಿದೆ. ನಗರ ವಾಸಿಗಳು ಆರೋಗ್ಯಕ್ಕಾಗಿ ದಿನನಿತ್ಯ ₹600 ವ್ಯಯಿಸುವ ಸ್ಥಿತಿ ನಿರ್ಮಾಣಗೊಂಡಿದೆ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.