ADVERTISEMENT

ಎಲ್ಲರನ್ನು ಒಗ್ಗೂಡಿಸುವ ಶಕ್ತಿ ಸಾಹಿತ್ಯಕ್ಕಿದೆ

ಅಜ್ಜಂಪುರದಲ್ಲಿ ಮನೆಯಂಗಳದಲ್ಲಿ ರಾಜ್ಯೋತ್ಸವ, ಪುಸ್ತಕ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2022, 6:36 IST
Last Updated 2 ಡಿಸೆಂಬರ್ 2022, 6:36 IST
ಅಜ್ಜಂಪುರ ತಾಲ್ಲೂಕಿನ ತ್ಯಾಗದಕಟ್ಟೆಯಲ್ಲಿ ನಡೆದ ಮನೆಯಂಗಳದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಶಿವಾನಂದಸ್ವಾಮಿ, ಚಂದ್ರಪ್ರಕಾಶ್ ಅವರ ‘ಅವನ ಸುತ್ತ’ ಕಥಾ ಸಂಕಲನ ಬಿಡುಗಡೆಗೊಳಿಸಿದರು.
ಅಜ್ಜಂಪುರ ತಾಲ್ಲೂಕಿನ ತ್ಯಾಗದಕಟ್ಟೆಯಲ್ಲಿ ನಡೆದ ಮನೆಯಂಗಳದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಶಿವಾನಂದಸ್ವಾಮಿ, ಚಂದ್ರಪ್ರಕಾಶ್ ಅವರ ‘ಅವನ ಸುತ್ತ’ ಕಥಾ ಸಂಕಲನ ಬಿಡುಗಡೆಗೊಳಿಸಿದರು.   

ಅಜ್ಜಂಪುರ: ‘ ಕನ್ನಡ ಸಾಹಿತ್ಯಕ್ಕೆ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿಯಿದೆ. ಸಾಹಿತ್ಯ-ಸಂಸ್ಕೃತಿ ಮೂಲಕ ಸರ್ವರೂ ಒಟ್ಟಾಗಿ ನಾಡು ಕಟ್ಟಬೇಕು, ಭಾಷೆ ಬೆಳೆಸಬೇಕು’ ಎಂದು ಪ್ರಾಚಾರ್ಯ ನಾಗರಾಜ್ ರಾವ್ ಕಲ್ಕಟ್ಟೆ ಮನವಿ ಮಾಡಿದರು.

ತಾಲ್ಲೂಕಿನ ತ್ಯಾಗದಕಟ್ಟೆ ಗ್ರಾಮದಲ್ಲಿ ನಡೆದ ‘ಮನೆಯಂಗಳದಲ್ಲಿ ಕನ್ನಡ ರಾಜ್ಯೋತ್ಸವ, ಪುಸ್ತಕ ಬಿಡುಗಡೆ, ಸಾಧಕರಿಗೆ ಸನ್ಮಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಮುಖಂಡ ಶಿವಾನಂದ ಸ್ವಾಮಿ, ಕನ್ನಡ ನೆಲದ ಸಂಸ್ಕೃತಿ-ಸಂಸ್ಕಾರದ ಅರಿವು ಹೊಂದಿದವರು ಮಾತ್ರ ಕನ್ನಡ ನೆಲ, ಜಲ, ಭಾಷೆ ಉಳಿಸಬಲ್ಲರು. ಕನ್ನಡಿಗರಾದ ನಾವು, ದೈನಂದಿನ ವ್ಯವಹಾರದಲ್ಲಿ ಕನ್ನಡವನ್ನೇ ಬಳಸಬೇಕು ಎಂದು ಮನವಿ ಮಾಡಿದರು.

ADVERTISEMENT

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ತೇಗೂರು ಜಗದೀಶ್ ಅರಸ್, ಕೇಂದ್ರ ಸರ್ಕಾರ ಬಲವಂತವಾಗಿ ಹಿಂದಿಯನ್ನು ರಾಷ್ಟ್ರೀಯ ಭಾಷೆಯಾಗಿ ಹೇರುತ್ತಿರುವುದು ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ, ಕನ್ನಡವನ್ನು ಕಡೆಗಣಿಸಿರುವುದನ್ನು ವೇದಿಕೆ ಖಂಡಿಸುತ್ತದೆ ಎಂದರು.

ನಟ ಡಿಂಗ್ರಿ ನಾಗರಾಜ್, ಹಳ್ಳಿಗಳು ಭಾಷೆಯ ತವರೂರಾಗಿವೆ. ಮನೆ-ಮನಗಳಲ್ಲಿ ಕನ್ನಡ ಭಾಷೆಯ ಬಳಕೆಯಿದೆ. ಗ್ರಾಮೀಣ ಪ್ರದೇಶಗಳಲ್ಲಿ ರಾಜ್ಯೋತ್ಸವ ಆಚರಣೆ ಆಗುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಬಂಡ್ರೆ ಕಲ್ಲೇಶ್, ಎಸ್.ಎಂ ಕಲ್ಲಪ್ಪ, ನಟ ಎ.ಬಿ. ಬಸವರಾಜು, ಸಾಹಿತಿ ಎಂ.ಎಸ್. ಕೃಷ್ಣ, ಸಾಹಿತ್ಯ ಚಿಂತಕ ಕೆ.ತಿಪ್ಪೇಶಪ್ಪ, ಮಕ್ಕಳ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಮಲ್ಲಿಗೆ ಸುಧೀರ್ ಮಾತನಾಡಿದರು.

ಸಾಹಿತಿ ಚಿನ್ನೇನಹಳ್ಳಿ ಸ್ವಾಮಿ, ಮಾಜಿ ಶಾಸಕ ಟಿ.ಎಚ್.ಶಿವಶಂಕರಪ್ಪ, ಕರ್ನಾಟಕ ವೈಜ್ಞಾನಿಕ ಸಂಶೋಧನ ಪರಿಷತ್ತು ಅಧ್ಯಕ್ಷ ಟಿ.ಸಿ. ಚಂದ್ರಪ್ರಕಾಶ್ ಮತ್ತಿತರರಿದ್ದರು. ಕಾಂಗ್ರೆಸ್ ಮುಖಂಡ ಶಿವಾನಂದಸ್ವಾಮಿ, ಚಂದ್ರಪ್ರಕಾಶ್ ಅವರ ‘ಅವನ ಸುತ್ತ’ ಕಥಾ ಸಂಕಲನ ಬಿಡುಗಡೆಗೊಳಿಸಿದರು.

ಮಕ್ಕಳ ಸಾಹಿತ್ಯ ಪರಿಷತ್ತು, ಕರ್ನಾಟಕ ರಕ್ಷಣಾ ವೇದಿಕೆ, ಜಾನಪದ ಸಾಹಿತ್ಯ ಪರಿಷತ್ತು, ಕರ್ನಾಟಕ ವೈಜ್ಞಾನಿಕ ಸಂಶೋಧನಾ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು ಸೇರಿ ಕಾರ್ಯಕ್ರಮ ಆಯೋಜಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.