ADVERTISEMENT

ತರೀಕೆರೆ | ಮದ್ಯಪಾನ ತ್ಯಜಿಸಿ ಸಮಾಜಕ್ಕೆ ಮಾದರಿಯಾಗಿ: ಬಸವ ಮರುಳಸಿದ್ದ ಸ್ವಾಮೀಜಿ

1991ನೇ ಮದ್ಯವರ್ಜನ ಶಿಬಿರದ ಸಮಾರೋಪ, ಗಾಂಧಿ ಸ್ಮೃತಿ ಸಮಾರಂಭ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 5:28 IST
Last Updated 18 ಅಕ್ಟೋಬರ್ 2025, 5:28 IST
ಕೊರಟಿಕೆರೆ ಗ್ರಾಮದ ಬೊಮ್ಮಲಿಂಗೇಶ್ವರ ಸಮುದಾಯ ಭವನದಲ್ಲಿ ನಡೆದ 1991ನೇ ಮದ್ಯವರ್ಜನ ಶಿಬಿರದ ಸಮಾರೋಪ ಮತ್ತು ಗಾಂಧಿ ಸ್ಮೃತಿ ಸಮಾರಂಭದಲ್ಲಿ ಚಿಕ್ಕಮಗಳೂರಿನ ಬಸವ ತತ್ವ ಪೀಠದ ಬಸವ ಮರುಳಸಿದ್ದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು
ಕೊರಟಿಕೆರೆ ಗ್ರಾಮದ ಬೊಮ್ಮಲಿಂಗೇಶ್ವರ ಸಮುದಾಯ ಭವನದಲ್ಲಿ ನಡೆದ 1991ನೇ ಮದ್ಯವರ್ಜನ ಶಿಬಿರದ ಸಮಾರೋಪ ಮತ್ತು ಗಾಂಧಿ ಸ್ಮೃತಿ ಸಮಾರಂಭದಲ್ಲಿ ಚಿಕ್ಕಮಗಳೂರಿನ ಬಸವ ತತ್ವ ಪೀಠದ ಬಸವ ಮರುಳಸಿದ್ದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು   

ತರೀಕೆರೆ: ‘ಎಲ್ಲಾ ಅಧರ್ಮಗಳ ಮೂಲ ದುಶ್ಚಟವಾಗಿದ್ದು, ಆ ದುಶ್ಚಟಗಳಿಗೆ ಕಿರೀಟ ಹೆಂಡ–ಸರಾಯಿ. ಮದ್ಯಪಾನವನ್ನು ಬಿಡಿಸುವುದಕ್ಕೆ ಧರ್ಮಾಧಿಕಾರಿಗಳು ಇಡೀ ನಾಡನ್ನೇ ಧರ್ಮಸ್ಥಳವನ್ನಾಗಿ ಮಾಡುವ ಉದ್ದೇಶದಿಂದ ಈ ಮದ್ಯವರ್ಜನ ಶಿಬಿರ ಆಯೋಜಿಸಲಾಗಿದೆ’ ಎಂದು ಚಿಕ್ಕಮಗಳೂರಿನ ಬಸವ ತತ್ವ ಪೀಠದ ಬಸವ ಮರುಳಸಿದ್ದ ಸ್ವಾಮೀಜಿ ಹೇಳಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, 1991ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ, ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಚಿಕ್ಕಮಗಳೂರು ಹಾಗೂ ಇತರ ಸಂಘ–ಸಂಸ್ಥೆಗಳ ಸಹಕಾರದೊಂದಿಗೆ ತಾಲ್ಲೂಕಿನ ಕುಡ್ಲೂರು ವಲಯದ ಕೊರಟಿಕೆರೆ ಗ್ರಾಮದ ಬೊಮ್ಮಲಿಂಗೇಶ್ವರ ಸಮುದಾಯ ಭವನದಲ್ಲಿ ನಡೆದ 1991ನೇ ಮದ್ಯವರ್ಜನ ಶಿಬಿರದ ಸಮಾರೋಪ ಮತ್ತು ಗಾಂಧಿ ಸ್ಮೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರ ಆಶಯದಂತೆ, ನಾಡಿನಲ್ಲಿನ ಅಧರ್ಮವನ್ನು ನಿರ್ಮೂಲ ಮಾಡುವ ಸಂಕಲ್ಪ ಎಲ್ಲರಲ್ಲಿಯೂ ಮೂಡಬೇಕು. ಶಿಬಿರದಲ್ಲಿ ಭಾಗವಹಿಸಿದ 53 ಮಂದಿ ಶಿಬಿರಾರ್ಥಿಗಳು ಮದ್ಯಪಾನ ತ್ಯಜಿಸಿ ಸಮಾಜಕ್ಕೆ ಮಾದರಿಯಾಗಬೇಕೆಂದು ಆಶಿಸಿದರು.

ADVERTISEMENT

ಚಿಕ್ಕಮಗಳೂರು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಎ.ಸಿ. ಚಂದ್ರಪ್ಪ ಮಾತನಾಡಿ, ‘ಶಿಬಿರಾಧಿಕಾರಿಗಳ ಶ್ರಮವು ನಿಮ್ಮ ಮುಖದಲ್ಲಾದ ಬದಲಾವಣೆಯಲ್ಲೇ ತಿಳಿಯುತ್ತಿದೆ. ಮುಂದಿನ ದಿನಗಳಲ್ಲಿ ಹೊಸ ಜೀವನವನ್ನು ಕಟ್ಟಿಕೊಳ್ಳುವಂತೆ’ ಶುಭ ಹಾರೈಸಿದರು.

ಯೋಜನೆಯ ಚಿತ್ರದುರ್ಗ ಪ್ರಾದೇಶಿಕ ನಿರ್ದೇಶಕಿ ಗೀತಾ ಮಾತನಾಡಿ, ‘ಕುಡುಕ ಕೆಟ್ಟವನಲ್ಲ, ಕುಡಿತವೇ ಕೆಟ್ಟದ್ದು. ನಾವು ನಮ್ಮ ಬದುಕಿನ ದಾರಿ ಯಾವುದೆಂದು ಆಯ್ಕೆ ಮಾಡಿಕೊಳ್ಳುವುದರಲ್ಲಿ ಸೋತು ಹೋಗಿದ್ದೇವೆ. ಇದರ ಫಲವಾಗಿ ಇಂದು ಕೊರಟಿಕೆರೆಯ ಬೊಮ್ಮಲಿಂಗೇಶ್ವರ ದೇವಸ್ಥಾನದ ಸನ್ನಿಧಾನಕ್ಕೆ ನೀವು ಬಂದಿದ್ದೀರಿ. ಯಾವುದೇ ಕೀಳರಿಮೆ ಬೇಕಾಗಿಲ್ಲ. ಈ ಶಿಬಿರದ ಮೂಲಕ ನೀವು ದಾರಿದ್ರದಿಂದ ಬಂಗಾರದ ಬದುಕಿನತ್ತ ಹೆಜ್ಜೆ ಹಾಕಿದ್ದೀರಿ. ಒಳ್ಳೆಯ ಜೀವನ ಕಟ್ಟಿಕೊಳ್ಳಿ’ ಎಂದು ಶುಭ ಹಾರೈಸಿದರು.

ಚಿಕ್ಕಮಗಳೂರು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸ್ಥಾಪಕ ಅಧ್ಯಕ್ಷ ಪ್ರಶಾಂತ್ ಚಿಪ್ರಗುತ್ತಿ, ಪ್ರಾದೇಶಿಕ ಚಿತ್ರದುರ್ಗ ಯೋಜನಾಧಿಕಾರಿ ನಾಗರಾಜ ಕುಲಾಲ್ ಮಾತನಾಡಿದರು.

ಶಿಬಿರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ.ಎಸ್. ಶೇಖರಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಜನಜಾಗೃತಿ ಸದಸ್ಯರಾದ ಮಲ್ಲಪ್ಪ ಕೆ.ಬಿ., ಅಸ್ಲಾಂ ಖಾನ್, ಕನ್ನಡ ಜಾನಪದ ಪರಿಷತ್‌ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎಂ.ಎಸ್. ವಿಶಾಲಾಕ್ಷಮ್ಮ, ಕೊರಟಿಕೆರೆ ಗ್ರಾ.ಪಂ. ಮಾಜಿ ಅಧ್ಯಕ್ಷರಾದ ತನುಜಾ, ಶಂಕ್ರಮ್ಮ, ಕುಡ್ಲೂರು ಗ್ರಾ.ಪಂ. ಉಪಾಧ್ಯಕ್ಷೆ ಮಹೇಶ್ವರಮ್ಮ, ತಿಮ್ಮಯ್ಯ ಮೇಸ್ಟ್ರು ಇದ್ದರು.

ಶಿಬಿರಾಧಿಕಾರಿ ನಂದಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲ್ಲೂಕಿನ ಯೋಜನಾಧಿಕಾರಿ ಕುಸುಮಾಧರ್ ಕೆ. ಸ್ವಾಗತಿಸಿದರು. ವಲಯದ ಮೇಲ್ವಿಚಾರಕ ಮಂಜುನಾಥ ನಿರೂಪಿಸಿದರು. ಕೆ.ಎಂ. ಚಂದ್ರಶೇಖರ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.