ADVERTISEMENT

ಆಲ್ದೂರು ಪ್ರಾಥಮಿಕ ಆರೋಗ್ಯ ಕೇಂದ್ರ: ಸಿಬ್ಬಂದಿ ಕೊರತೆ, ಸಂಕಷ್ಟದಲ್ಲಿ ರೋಗಿಗಳು

ಜೋಸೆಫ್ ಎಂ.ಆಲ್ದೂರು
Published 12 ಏಪ್ರಿಲ್ 2025, 7:25 IST
Last Updated 12 ಏಪ್ರಿಲ್ 2025, 7:25 IST
ಆಲ್ದೂರು ಪ್ರಾಥಮಿಕ ಆರೋಗ್ಯ ಕೇಂದ್ರ
ಆಲ್ದೂರು ಪ್ರಾಥಮಿಕ ಆರೋಗ್ಯ ಕೇಂದ್ರ   

ಆಲ್ದೂರು: ಪಟ್ಟಣದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭವಾದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಲವು ಕೊರತೆಗಳು ಎದುರಾಗಿದ್ದು, ರೋಗಿಗಳಿಗೆ ಸೂಕ್ತ ಆರೋಗ್ಯ ಸೇವೆ ಸಿಗದಂತಾಗಿದೆ.

ಸುಮಾರು 80 ವರ್ಷಗಳ ಹಿಂದೆ ಆರಂಭವಾದ ಈ ಆರೋಗ್ಯ ಕೇಂದ್ರವು ಸಮುದಾಯ ಆರೋಗ್ಯ ಕೇಂದ್ರವಾಗಬೇಕು ಎಂಬುದು ಸ್ಥಳೀಯರ ಬೇಡಿಕೆಯಾಗಿತ್ತು. ಆದರೆ, ಈಗ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿದ್ದು, ರೋಗಿಗಳು ಚಿಕಿತ್ಸೆಗಾಗಿ ಸಂಕಷ್ಟ ಪಡುವಂತಾಗಿದೆ.

ಸುತ್ತಮುತ್ತಲಿನ ಆಣೂರು, ಮಾಚಗೊಂಡನಹಳ್ಳಿ, ಅರೇನೂರು, ಕಠಾರದಹಳ್ಳಿ, ಬನ್ನೂರಿನಲ್ಲಿ ಆರೋಗ್ಯ ಉಪ ಕೇಂದ್ರಗಳಿದ್ದರೂ ನಿರಂತರವಾಗಿ (24×7) ಕಾರ್ಯನಿರ್ವಹಿಸುವ ಏಕೈಕ ಪ್ರಾಥಮಿಕ ಆರೋಗ್ಯ ಕೇಂದ್ರ ಆಲ್ದೂರಿನದ್ದಾಗಿದೆ.

ADVERTISEMENT

ಒಟ್ಟು 24 ಹುದ್ದೆಗಳಿದ್ದು, 3 ಶುಶ್ರೂಷಕಿಯರು ಮಾತ್ರ ಖಾಯಂ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಪೈಕಿ ‌ಇಬ್ಬರು ರಜೆಯಲ್ಲಿದ್ದಾರೆ. ಒಬ್ಬರು ಖಾಯಂ ಆರೋಗ್ಯ ಅಧಿಕಾರಿ ಇದ್ದು, ಶೀಘ್ರದಲ್ಲೇ ಅವರೂ ನಿವೃತ್ತರಾಗಲಿದ್ದಾರೆ.

ಪ್ರಯೋಗಶಾಲಾ ತಂತ್ರಜ್ಞರ ಒಂದು ಹುದ್ದೆ ಖಾಲಿ ಇದ್ದು, ಪ್ರಸ್ತುತ ವಾರಕ್ಕೆ ಮೂರು ದಿನ ಸೇವೆ ನೀಡುತ್ತಿದ್ದಾರೆ. ಫಾರ್ಮಸಿಸ್ಟ್ 1 ಹುದ್ದೆ, ಖಾಲಿ ಇದ್ದು, ವೈದ್ಯಾಧಿಕಾರಿ ಸೇರಿ ಉಳಿದ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವವರೆಲ್ಲ ಗುತ್ತಿಗೆ ಆಧಾರದಲ್ಲಿ ಇದ್ದಾರೆ.

ಪ್ರಸ್ತುತ ವೈದ್ಯಾಧಿಕಾರಿ ನಾಗಚೈತನ್ಯ ಮತ್ತು ಆಯುಷ್ ವೈದ್ಯಾಧಿಕಾರಿ ಪ್ರಗತಿ ಅವರು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಕಾರ್ಯನಿರ್ವಹಿಸುತ್ತಿದ್ದಾರೆ.
ಇತ್ತ ಶುಶ್ರೂಷಕಿಯರು, ವೈದ್ಯಾಧಿಕಾರಿಗಳು ಇಲ್ಲದೆ ಆಸ್ಪತ್ರೆಗೆ ರಾತ್ರಿ ವೇಳೆ ತುರ್ತು ಚಿಕಿತ್ಸೆಗೆ ಬರುವವರು ತೊಂದರೆ ಅನುಭವಿಸುತ್ತಿದ್ದಾರೆ.
ಹಲವು ಸಮಸ್ಯೆಗಳನ್ನು ಪರೀಕ್ಷೆ ಮಾಡಿಸಲು 17 ಕಿ.ಮೀ ದೂರದ ಮೂಡಿಗೆರೆ ಸರ್ಕಾರಿ ಆಸ್ಪತ್ರೆ ಅಥವಾ 18 ಕಿ.ಮೀ ದೂರದ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ಪ್ರಯಾಣಿಸಬೇಕಿದೆ. ಇತ್ತೀಚೆಗೆ ನಡೆದ ಅವಘಡಗಳ ಸಂದರ್ಭ ಪ್ರಥಮ ಚಿಕಿತ್ಸೆ ಸಿಗದೆ ತೊಂದರೆ ಆಗಿತ್ತು. ಈ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರಾದ ಎ.ಯು.ಇಬ್ರಾಹಿಂ, ಸಂತೆ ಮೈದಾನ ಮಟನ್ ಮಾರ್ಕೆಟ್ ಕಿರಣ್, ಕೃಪಾಕ್ಷ ಕೋಟ್ಯಾನ್, ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಮದನ್ ಆಗ್ರಹಿಸಿದ್ದಾರೆ.

ಆಸ್ಪತ್ರೆಯಲ್ಲಿ ಸಿಬ್ಬಂದಿ ಇಲ್ಲದೆ ಸುಮಾರು ಒಂದು ತಿಂಗಳು ಕಳೆದಿದೆ. 24 ಗಂಟೆಯೂ ಕಾರ್ಯನಿರ್ವಹಿಸಬೇಕಾಗಿರುವ ಆರೋಗ್ಯ ಕೇಂದ್ರಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ನೇಮಿಸಬೇಕು. ಇಲ್ಲದೆ ಇದ್ದರೆ ಕರವೇ ಹೋಬಳಿ ಘಟಕ ಮತ್ತು ತಾಲ್ಲೂಕು ಜಿಲ್ಲಾ ಘಟಕದ ವತಿಯಿಂದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಕರವೇ ಹೋಬಳಿ ಘಟಕದ ಅಧ್ಯಕ್ಷ ಮಹಮ್ಮದ್ ಅಲಿ ಎಚ್ಚರಿಸಿದರು.

‘ಸಮಸ್ಯೆ ಈಗಾಗಲೇ ಗಮನಕ್ಕೆ ಬಂದಿದ್ದು, ಇಲಾಖೆಯ ಆಡಳಿತ ಅಧಿಕಾರಿ ಬಳಿ ಮಾಹಿತಿ ತರಿಸಿಕೊಂಡು ಮುಂದಿನ ಮಂಗಳವಾರದಿಂದ ಒಬ್ಬರು ಶುಶ್ರೂಷಕಿ, ಸಿಬ್ಬಂದಿಯನ್ನು ಆ ನೇಮಿಸಲಾಗುವುದು’ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಅಶ್ವತ್ ಬಾಬು ತಿಳಿಸಿದರು.

ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಇಲ್ಲದೆ ಪರದಾಟ ಖಾಲಿ ಹುದ್ದೆ ಭರ್ತಿ ಮಾಡಲು ಆಗ್ರಹ ಸಮಸ್ಯೆ ಶೀಘ್ರ ಬಗೆಹರಿಸದಿದ್ದರೆ ಹೋರಾಟದ ಎಚ್ಚರಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.