ADVERTISEMENT

ಆಲ್ದೂರು: ವನ್ಯಜೀವಿಗಳ ನಿರಂತರ ಹಾವಳಿಗೆ ಬೇಸತ್ತ ಜನ

ಕಾಫಿ ಕೊಯ್ಲಿ ಕೆಲಸಕ್ಕೆ ಬರಲು ಕಾರ್ಮಿಕರ ಹಿಂದೇಟು

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 2:54 IST
Last Updated 21 ಜನವರಿ 2026, 2:54 IST
ಬೆಟ್ಟದಮಳಲಿ ಗ್ರಾಮದ ರಾಜೇಶ್ವರಿ ಅವರ ತೋಟದಲ್ಲಿ ಕಾಣಿಸಿಕೊಂಡ ಕಾಡುಕೋಣಗಳ ಹಿಂಡು
ಬೆಟ್ಟದಮಳಲಿ ಗ್ರಾಮದ ರಾಜೇಶ್ವರಿ ಅವರ ತೋಟದಲ್ಲಿ ಕಾಣಿಸಿಕೊಂಡ ಕಾಡುಕೋಣಗಳ ಹಿಂಡು   

ಆಲ್ದೂರು: ಕಾಫಿ ನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ಕೆಲ ದಿನಗಳಿಂದ ಕಾಡಾನೆಗಳು, ಕಾಡುಕೋಣಗಳ ಹಾವಳಿ ನಿರಂತರವಾಗಿದ್ದು, ಇದರಿಂದ ಕಾಫಿ ಬೆಳೆಗಾರರು, ರೈತರು ಬೆಳೆ ಹಾನಿಯೊಂದಿಗೆ ಆತಂಕದಲ್ಲೇ ಕಾಲ ಕಳೆಯುವಂತಾಗಿದೆ. ಇತ್ತೀಚೆಗೆ ಹೆಚ್ಚಿರುವ ಕಾಡು ಹಂದಿಗಳ ಕಾಟ ರೈತರಿಗೆ ಇನ್ನಷ್ಟು ತಲೆ ನೋವಾಗಿದೆ.

‘ವನ್ಯಜೀವಿಗಳ ಉಪಟಳ ಹೆಚ್ಚಾದಾಗ ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ ನಡೆಸಿ ಅವುಗಳನ್ನು ಕಾಡಿಗೆ ಅಟ್ಟಲಾಗುತ್ತದೆ. ಆದರೂ ಅವು ಮತ್ತೆ ಜನವಸತಿ ಪ್ರದೇಶದತ್ತ ಬರುವುದು ಮುಂದುವರಿದಿದೆ. ಕಣತಿ ಅರೇನೂರು ಭಾಗಗಳಲ್ಲಿ ಆನೆಗಳ ಕಾಟ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ಆದರೆ ಕಾಡು ಹಂದಿಗಳು ತೋಟಗಳಿಗೆ ನುಗ್ಗಿ ಅಡಿಕೆ ಗಿಡಗಳನ್ನು ನಾಶಪಡಿಸುತ್ತಿವೆ’ ಎಂದು ಕಾಫಿ ಬೆಳೆಗಾರರಾದ ಬಸರವಳ್ಳಿ ರವಿ ಬಿ.ಎಂ, ಕೆರೆಮಕ್ಕಿ ಮಹೇಶ್ ಹೇಳಿದರು.

‘ಕಾಡಾನೆ ಹಿಂಡು ತಿಂಗಳಾನುಗಟ್ಟಲೆ ಕದಲದೇ ಕಾಫಿ, ಅಡಿಕೆ, ಭತ್ತ ಮುಂತಾದ ಬೆಳೆಗಳನ್ನು ಹಾಳು ಮಾಡುತ್ತಿದ್ದವು. ಈಗ ತೋಟಗಳಿಗೆ ಕಾಡುಕೋಣಗಳು ಗುಂಪು ಗುಂಪಾಗಿ ನುಗ್ಗುತ್ತಿವೆ. ಕಾಫಿ ಕೊಯ್ಲಿನ ಸಮಯ ಆಗಿರುವುದರಿಂದ ಕಾಡುಕೋಣಗಳನ್ನು ನೋಡಿ ಭೀತಿಯಿಂದ ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ. ಅತ್ತ ಸಕಾಲಕ್ಕೆ ಕೊಯ್ಲು ಮುಗಿಸದಿದ್ದರೆ, ಕಾಫಿ ಬೆಳೆ ನೆಲಕಚ್ಚಿ ನಷ್ಟ ಸಂಭವಿಸುತ್ತದೆ. ಧೈರ್ಯ ಮಾಡಿ ಕೆಲಸ ಮಾಡಿಸಲು ಮುಂದಾದರೆ ಏನಾದರೂ ಜೀವ ಹಾನಿಯಾದರೆ ಯಾರು ಹೊಣೆ ಎಂಬ ಪ್ರಶ್ನೆ ಕಾಡುತ್ತಿದೆ’ ಎಂದು ಬೆಟ್ಟದ ಮಳಲಿ ಗ್ರಾಮಸ್ಥ ದೇವರಾಜ್ ಅಸಹಾಯಕತೆ ವ್ಯಕ್ತಪಡಿಸಿದರು.

ADVERTISEMENT

‘ವನ್ಯಜೀವಿಗಳು ಹೆಚ್ಚಾಗಿ ತಿರುಗುವ ಭಾಗಗಳಲ್ಲಿ ಮಾಹಿತಿ ನೀಡಲು ವಾಟ್ಸ್‌ ಆ್ಯಪ್ ಗ್ರೂಪ್‌, ಸ್ಥಳೀಯ ಅಧಿಕಾರಿಗಳ ದೂರವಾಣಿ ಸಂಖ್ಯೆಗಳನ್ನು ಒದಗಿಸಲಾಗಿದೆ. ಕಾಡು ಪ್ರಾಣಿಗಳಿಂದ ಬೆಳೆ ನಾಶವಾಗಿ ನಷ್ಟವಾದರೆ ಇಲಾಖೆ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳುತ್ತದೆ’ ಎಂದು ವಲಯ ಅರಣ್ಯಾಧಿಕಾರಿ ಹರೀಶ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.