
ಆಲ್ದೂರು: ಪಟ್ಟಣದಿಂದ 3 ಕಿ.ಮೀ ದೂರದಲ್ಲಿರುವ ಆಲ್ದೂರು ಪಂಚಾಯಿತಿ ವ್ಯಾಪ್ತಿಯ ಅಡ್ಡಮಕ್ಕಿ ಗ್ರಾಮದ ಜನ ಕುಡಿಯುವ ನೀರಿನ ಸಮಸ್ಯೆ ಅನುಭವಿಸುತ್ತಿದ್ದು, ಪರಿಹರಿಸುವಂತೆ ಒತ್ತಾಯಿಸಿದ್ದಾರೆ.
ಗ್ರಾಮದಲ್ಲಿ 60 ಕುಟುಂಬಗಳಿದ್ದು, ಸುಮಾರು 200ರಷ್ಟು ಜನಸಂಖ್ಯೆ ಇದೆ. 120ಕ್ಕೂ ಹೆಚ್ಚು ಮತದಾರರಿದ್ದಾರೆ. ಗ್ರಾಮಕ್ಕೆ ನೀರಿನ ಮೂಲವಾಗಿರುವ ಬಾವಿ ಪ್ರತಿ ಬಾರಿ ಮಳೆಯ ನೀರಿನಿಂದ ಕಲುಷಿತಗೊಂಡು ಕೆಸರು ಮಿಶ್ರಿತವಾಗಿ ಬರುತ್ತಿದ್ದು, ಬಾವಿಯ ಪಕ್ಕದಲ್ಲಿ ಹರಿಯುವ ಸಣ್ಣ ಹಳ್ಳದ ನೀರಿನ ಮಟ್ಟ ಹೆಚ್ಚಾದಂತೆ ಬಾವಿಯಲ್ಲಿರುವ ರಂದ್ರಗಳ ಮೂಲಕ ನುಗ್ಗಿ ಕಲುಷಿತವಾಗುತ್ತಿದೆ.
ಹಲವು ವರ್ಷಗಳಿಂದ ಇದೇ ನೀರನ್ನು ಕುಡಿಯುವ ದುಃಸ್ಥಿತಿ ನಮ್ಮದಾಗಿದೆ. ಪಂಚಾಯಿತಿಯವರಿಗೆ ಮನವಿ ನೀಡಿದಾಗ ತಾತ್ಕಾಲಿಕವಾಗಿ ಟ್ಯಾಂಕರ್‌ನಲ್ಲಿ ನೀರಿನ ವ್ಯವಸ್ಥೆ ಮಾಡಿದ್ದಾರೆ. ಇಷ್ಟೊಂದು ಜನ ಸಂಖ್ಯೆ ಇರುವ ಗ್ರಾಮಕ್ಕೆ ಎರಡು ಟ್ಯಾಂಕರ್ ನೀರು ಒದಗಿಸಿದರೆ ಸಾಕಾಗುತ್ತದೆಯೇ?. ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು’ ಎಂದು ಗ್ರಾಮದ ಮುಖಂಡ ಶ್ರೀಧರ್ ಬೇಸರ ವ್ಯಕ್ತಪಡಿಸಿದರು.
ಪಂಚಾಯಿತಿ ಮುಂಭಾದಲ್ಲಿದ್ದ ಶುದ್ಧ ಗಂಗಾ ಘಟಕದಿಂದ ₹2ಕ್ಕೆ 20 ಲೀಟರ್ ನೀರು ತುತ್ತಿದ್ದೆವು. ಈಗ ಆ ಘಟಕವೂ ಹಾಳಾಗಿದ್ದು, ಸಮಸ್ಯೆ ಹೆಚ್ಚಾಗಿದೆ ಎಂದು ಅವರು ತಿಳಿಸಿದರು.
ಈ ಹಿಂದೆ ಕೆಸರು ಮಿಶ್ರಿತ ನೀರು ಬರದಂತೆ ಬಾವಿಯ ಬಳಿ ಪಂಚಾಯಿತಿ ಸದಸ್ಯರಾದ ಪಡ್ಡು ಪ್ರದೀಪ್ ತಡೆಗೋಡೆ ನಿರ್ಮಿಸಿದ್ದರು. ಆದರೂ ಮಳೆಯ ನೀರಿನ ವೇಗ ಮತ್ತು ಮೇಲಿನಿಂದ ಇಳಿಜಾರಿಗೆ ನೀರು ಹರಿಯುವುದರಿಂದ ತಡೆಗೋಡೆ ಪಕ್ಕದಲ್ಲಿ ತೋಟದ ಮಣ್ಣು ಸವೆತ ಉಂಟಾಗಿ ಅದರ ಮೂಲಕ ಅಶುದ್ಧ ನೀರು ಮಿಶ್ರಣವಾಗುತ್ತಿದೆ. ಪಂಚಾಯಿತಿ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆಯ ತೀವ್ರತೆಯನ್ನು ನೋಡಿ ಹೋಗಿದ್ದಾರೆ. ಈ ಬಗ್ಗೆ ಶೀಘ್ರವಾಗಿ ಕ್ರಮ ಕೈಗೊಂಡು ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಗ್ರಾಮದ ಪ್ರಸಾದ್, ಕಾರ್ತಿಕ್, ವೀರೇಶ್, ಸುಧೀರ್, ಸಂತೋಷ್, ಸುಪ್ರೀತ್, ಶೇಖರ್, ಅಚ್ಚು ಒತ್ತಾಯಿಸಿದ್ದಾರೆ.
ಮೂಲಸೌಕರ್ಯ ಒದಗಿಸುವುದು ಪಂಚಾಯಿತಿಯ ಕರ್ತವ್ಯವಾಗಿದ್ದು ಸಮಸ್ಯೆಯನ್ನು ಬಗೆಹರಿಸದಿದ್ದರೆ ಪಂಚಾಯಿತಿಗೆ ಮುತ್ತಿಗೆ ಹಾಕಿ ಗ್ರಾಮಸ್ಥರೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಹೋಬಳಿ ಘಟಕದ ಅಧ್ಯಕ್ಷ ಮಹಮ್ಮದ್ ಅಲಿ ತಿಳಿಸಿದರು.
ಅಡ್ಡಮಕ್ಕಿ ಗ್ರಾಮದಲ್ಲಿ ಎರಡು ಬಾವಿಗಳಿದ್ದು, ಇನ್ನೊಂದು ಬಾವಿಯ ನೀರನ್ನು ಪಕ್ಕದ ಹೊಸಳ್ಳಿ ಗ್ರಾಮಕ್ಕೆ ಪೂರೈಸಲಾಗುತ್ತಿದೆ. ತಾತ್ಕಾಲಿಕವಾಗಿ ಈ ಬಾವಿಯಿಂದ ಮಳೆಗಾಲದಲ್ಲಿ ಮಾತ್ರ ಅಡ್ಡಮಕ್ಕಿ ಗ್ರಾಮಕ್ಕೆ ಪೈಪ್‌ಲೈನ್ ಮೂಲಕ ನೀರಿನ ವ್ಯವಸ್ಥೆ ಮಾಡಲಾಗುವುದು. ಕೆಲವೇ ತಿಂಗಳಲ್ಲಿ ಜಲಜೀವನ್ ಮಿಷನ್ ನೀರಿನ ಟ್ಯಾಂಕ್ ನಿರ್ಮಾಣವಾಗಲಿದ್ದು, ಆಗ ಶಾಶ್ವತ ಪರಿಹಾರ ಸಿಗಲಿದೆ ಎಂದು ಪಂಚಾಯತಿ ಸದಸ್ಯ ಪಡ್ಡು ಪ್ರದೀಪ್ ತಿಳಿಸಿದರು.
ಅಡ್ಡಮಕ್ಕಿ ಗ್ರಾಮಕ್ಕೆ ಪಂಚಾಯಿತಿ ಅಧ್ಯಕ್ಷೆ ಜುಬೇದ ಹಸೈನರ್, ನಾವು, ಸಿಬ್ಬಂದಿಯ ಭೇಟಿ ನೀಡಿದ್ದು, ತಾತ್ಕಾಲಿಕ ಬಳಕೆಗೆ ಎರಡು ಟ್ಯಾಂಕರ್ ನೀರನ್ನು ಒದಗಿಸಲಾಗಿದೆ. ಇನ್ನೊಂದು ಬಾವಿಯಿಂದ ಅಡ್ಡಮಕ್ಕಿ ಗ್ರಾಮಕ್ಕೆ ಪೈಪ್‌ಲೈನ್ ಮಾಡುವ ಯೋಜನೆ ರೂಪಿಸಲಾಗಿದ್ದು, ಮಳೆ ನಿಂತ ಕೂಡಲೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಂಶುನ್ ನಹರ್ ತಿಳಿಸಿದರು.