ಆಲ್ದೂರು: ‘ಆಧುನಿಕ ಭಾರತದ ಮಹಿಳಾ ಚಿಂತಕರಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರು ಪುರುಷರಿಗೆ ಸಮಾನವಾಗಿ ಮಹಿಳೆಯರೂ ಸಬಲರಾಗಬೇಕು ಎಂದು ಶ್ರಮಿಸಿದ್ದಾರೆ. 2 ಸಾವಿರ ವರ್ಷಗಳಿಂದ ಬದಲಿಸಲಾಗದ ಜಾಢ್ಯಗಳನ್ನು ಸಂವಿಧಾನದ ಮೂಲಕ 40 ವರ್ಷಗಳಲ್ಲಿ ಬದಲಿಸಿ ಕ್ರಾಂತಿ ಮೂಡಿಸಿದ್ದಾರೆ’ ಎಂದು ಬಿಎಸ್‌ಪಿ ರಾಜ್ಯ ಸಂಯೋಜಕ ಡಾ.ಹಾ.ರಾ.ಮಹೇಶ್ ಹೇಳಿದರು.
ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಬಹು ಜನರ ಇತಿಹಾಸ ಅಧ್ಯಯನ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ನಾನು, ನನ್ನದು ಎಂಬ ಸ್ವಾರ್ಥ ಬಾಬಾ ಸಾಹೇಬ್ ಅಂಬೇಡ್ಕರ್ ಅವರಲ್ಲಿ ಇದ್ದಿದ್ದರೆ ಅವರು ಕುಟುಂಬಕ್ಕೆ ಸೀಮಿತವಾಗಿರುತ್ತಿದ್ದರು. ಮೇಲ್ವರ್ಗಕ್ಕೆ ಸೀಮಿತವಾಗಿದ್ದ ಶಿಕ್ಷಣವೆಂಬ ಜ್ಞಾನ ದೀವಿಗೆಯನ್ನು ಸರ್ವರಿಗೂ ಹಂಚುತ್ತ ಪಸರಿಸಿದ ಅವರು ಮಹಾನ್ ಚೇತನ. ಅವರು ಜಾತಿವಾದಿಯಲ್ಲ’ ಎಂದರು.
ಬಹುಜನರ ರಾಜಕೀಯ ಅಧಿಕಾರ ಜಾರಿಯಾಗಲು ಒಗ್ಗಟ್ಟಾಗಿ ಹೋರಾಡಬೇಕು ಎಂದು ಅವರು ಸಲಹೆ ನೀಡಿದರು.
ಬಿಎಸ್‌ಪಿ ರಾಜ್ಯ ಘಟಕದ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಮಾತನಾಡಿ, ನಮ್ಮವರ ನಿಜವಾದ ಚರಿತ್ರೆಯನ್ನು ಅರಿಯಬೇಕಾದ ಅನಿವಾರ್ಯತೆ ಎದುರಾಗಿದೆ. ರಾಜಕೀಯ ಅಸ್ಮಿತೆ ಕಂಡುಕೊಳ್ಳಲು ಪ್ರಸ್ತುತ ದಿನಗಳಲ್ಲಿರುವ ಸವಾಲುಗಳ ವಿರುದ್ಧ ವೈಜ್ಞಾನಿಕ ಚಿಂತನೆ ನಡೆಸಿದಾಗ ಮಾತ್ರ ರಾಜಕೀಯ ಅಧಿಕಾರ ಪಡೆಯಲು ಸಾಧ್ಯ ಎಂದರು.
ಬಹುಜನ ಸಮಾಜ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಪರಮೇಶ್ವರ್, ವರ್ಗ ಮತ್ತು ಜಾತಿ ವ್ಯವಸ್ಥೆಯಿಂದ ವಿಘಟಿತರಾಗಿರುವ ಬಹುಜನರೆಲ್ಲರೂ ಸಂಘಟಿತರಾದರೆ, ಪಕ್ಷದ ಮೂಲಭೂತ ಧ್ಯೇಯಗಳನ್ನು ಒಪ್ಪಿಕೊಂಡು ಚುನಾವಣೆ ಎದುರಿಸಿದರೆ ಗೆಲುವು ಪಡೆಯಬಹುದು. ಆಮಿಷಗಳನ್ನು ಬದಿಗಿಟ್ಟು ಚುನಾವಣೆಯಲ್ಲಿ ಮತದಾನ ಮಾಡಿದಾಗ ಮಾತ್ರ ಅಭಿವೃದ್ಧಿ, ಸೌಲಭ್ಯಗಳನ್ನು ಒದಗಿಸುವಂತೆ ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಹಕ್ಕು ಮತದಾರ ಪಡೆಯುತ್ತಾನೆ ಎಂದರು.
ಮೂಡಿಗೆರೆ ಕ್ಷೇತ್ರ ಸಮಿತಿ ಸಂಯೋಜಕ ಎಂ.ಡಿ.ಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ರಾಜ್ಯ ಘಟಕದ ಕಾರ್ಯದರ್ಶಿ ಕೆ.ಬಿ.ಸುಧಾ, ಜಿಲ್ಲಾ ಘಟಕದ ಉಪಾಧ್ಯಕ್ಷ ಎಂ.ಬಾಬಣ್ಣ, ಬಿಎಸ್‌ಪಿ ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಸ್ತುವಾರಿ ಬಿ.ಎಂ.ಶಂಕರ್, ಜಿಲ್ಲಾ ಘಟಕದ ಸಂಯೋಜಕ ಯು.ಬಿ.ಮಂಜಯ್ಯ, ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಸಿ.ಪಿ.ವಸಂತ್ ಕುಮಾರ್, ಆಲ್ದೂರು ಬ್ಲಾಕ್ ಸಮಿತಿ ಅಧ್ಯಕ್ಷ ಎಂ.ಬಿ.ಧರ್ಮೇಶ್, ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಎಲ್.ಬಿ.ರಮೇಶ್, ಪ್ರಧಾನ ಕಾರ್ಯದರ್ಶಿ ಮಹೇಶ್ ಉದುಸೆ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪಿ.ಕೆ.ಮಂಜುನಾಥ್, ಹೋಬಳಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಎಚ್.ಪಿ., ರಾಜು, ಕ್ಷೇತ್ರ ಸಮಿತಿ ಮುಖಂಡ ಬಿ.ಡಿ.ಪುಟ್ಟಸ್ವಾಮಿ, ಬ್ಲಾಕ್ ಖಜಾಂಚಿ ಸಂಜೀವ್ ಹಾಂದಿ, ಬ್ಲಾಕ್ ಸಮಿತಿ ಉಪಾಧ್ಯಕ್ಷ ಗಿರೀಶ್ ಹವ್ವಳ್ಳಿ, ಎಂ.ಕೆ.ಮಂಜುನಾಥ, ಬ್ಲಾಕ್ ಸಮಿತಿ ಸಂಯೋಜಕರಾದ ಪರಮೇಶ್, ಯಲಗುಡಿಗೆ ಸುಂದರ್ ಗಾಳಿ ಗಂಡಿ, ಬ್ಲಾಕ್ ಉಸ್ತುವಾರಿ ಎಂ.ಡಿ.ನಾರಾಯಣ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.