
ಕಳಸ: ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಗೆ ಶಾಸಕಿ ನಯನಾ ಮೋಟಮ್ಮ ಸೋಮವಾರ ಸಂಜೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
200 ಮಕ್ಕಳು ಇರುವ ವಸತಿ ಶಾಲೆಯ ಶೌಚಾಲಯ, ಅಡುಗೆ ಕೋಣೆ, ತರಗತಿಗಳು ಮತ್ತು ಊಟದ ವ್ಯವಸ್ಥೆಯನ್ನು ಶಾಸಕಿ ಗಮನಿಸಿದರು. ಆನಂತರ ಶಾಲೆಯ ಶಿಕ್ಷಕರ ಜೊತೆ ಸಮಾಲೋಚನೆ ನಡೆಸಿದ ನಯನಾ ಮೋಟಮ್ಮ ಶಾಲೆಯ ಎಲ್ಲ ವ್ಯವಸ್ಥೆಗಳು ಅಚ್ಚುಕಟ್ಟಾಗಿ ಇರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲಾ ಮಕ್ಕಳ ಜೊತೆ ಸಂವಾದ ನಡೆಸಿದ ಶಾಸಕಿ, ಶಾಲೆಯಲ್ಲಿ ಏನಾದರೂ ಕೊರತೆ ಇದೆಯೇ, ಊಟದ ಗುಣಮಟ್ಟ ಚೆನ್ನಾಗಿದೆಯೇ ಎಂದು ಪ್ರಶ್ನಿಸಿದರು. ಮಕ್ಕಳು ಶಾಲೆಯಲ್ಲಿನ ಎಲ್ಲ ಸೌಲಭ್ಯದ ಬಗ್ಗೆ ಶಾಸಕಿ ಬಳಿ ತೃಪ್ತಿ ಹೊರಹಾಕಿದರು.
ಆನಂತರ ಮಾತನಾಡಿದ ಶಾಸಕಿ, ಮಕ್ಕಳು ಸರ್ಕಾರದ ಎಲ್ಲ ಸವಲತ್ತು ಬಳಸಿಕೊಂಡು ಉತ್ತಮ ವಿದ್ಯಾಭ್ಯಾಸ ಮಾಡಿ ಉನ್ನತ ಹುದ್ದೆಗಳನ್ನು ಪಡೆಯಬೇಕು ಎಂದು ಕಿವಿಮಾತು ಹೇಳಿದರು.
ಶಾಲಾ ಮಕ್ಕಳು ಆನಂತರ ಶಾಸಕಿಯ ಮುಂದೆ ಹಾಡು, ನೃತ್ಯ ಪ್ರದರ್ಶನ ನೀಡಿ ತಮ್ಮ ಕೌಶಲ ತೋರಿದರು. ಶಾಲೆಯ ಪ್ರಾಂಶುಪಾಲರು, ಶಿಕ್ಷಕರು ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.