ADVERTISEMENT

ಜಾಗ ಮಂಜೂರಾತಿಗೆ ಜಿಲ್ಲಾಡಳಿತಕ್ಕೆ ಮೊರೆ

ಗೋಶಾಲೆ, ಜಿಲ್ಲಾ ಪ್ರಾಣಿ ದಯಾ ಸಂಘ ತೆರೆಯಲು ಪಶುಪಾಲನೆ ಇಲಾಖೆ ಸಜ್ಜು

ಬಿ.ಜೆ.ಧನ್ಯಪ್ರಸಾದ್
Published 20 ಮಾರ್ಚ್ 2021, 3:29 IST
Last Updated 20 ಮಾರ್ಚ್ 2021, 3:29 IST

ಚಿಕ್ಕಮಗಳೂರು: ಗೋಶಾಲೆ, ಜಿಲ್ಲಾ ಪ್ರಾಣಿ ದಯಾ ಸಂಘಕ್ಕೆ (ಎಸ್‌ಪಿಸಿಎ) ಜಾಗ ಮಂಜೂರಾತಿಗೆ ಪಶುಪಾಲನೆ ಇಲಾಖೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದು, ಜಾಗ ಒದಗಿಸುವ ನಿಟ್ಟಿನಲ್ಲಿ ಪ್ರಕ್ರಿಯೆ ಶುರುವಾಗಿದೆ.

ರಾಜ್ಯ ಸರ್ಕಾರವು ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣೆ ಕಾಯ್ದೆ –2020 ಅನುಷ್ಠಾನಗೊಳಿಸಿದೆ. ಪ್ರತಿ ಜಿಲ್ಲೆಗೊಂದು ಗೋಶಾಲೆ ತೆರೆಯುವುದಾಗಿ ಬಜೆಟ್‌ನಲ್ಲಿ ಘೋಷಿಸಿದೆ. ಗೋಶಾಲೆ ಸ್ಥಾಪನೆಗೆ ಪಶುಪಾಲನೆ ಇಲಾಖೆ ಮುಂದಾಗಿದೆ. ಗೋಶಾಲೆ, ಪ್ರಾಣಿ ದಯಾ ಸಂಘಕ್ಕೆ ಐದು ಎಕರೆ ಜಾಗ ಒದಗಿಸುವಂತೆ ಪ್ರಸ್ತಾವ ಸಲ್ಲಿಸಿದೆ.

ವಾರಸುದಾರರಿಲ್ಲದ ಮತ್ತು ಬಿಡಾಡಿ ರಾಸುಗಳ ಸಾಕಾಣಿಕೆ, ರೋಗಗ್ರಸ್ಥ ಪ್ರಾಣಿಗಳ ಆರೈಕೆ–ಆಶ್ರಯ, ಮೇವು ಬೆಳೆಯಲು ಮೊದಲಾದ ಚಟುವಟಿಕೆಗಳಿಗೆ ಅನುಕೂಲವಾಗುತ್ತದೆ. ಪ್ರಾಣಿ ದಯಾ ಸಂಘಕ್ಕೆ ಜಾಗ ಮಂಜೂರು ಮಾಡುವಂತೆ ಈ 2017ರಲ್ಲಿ ಮನವಿ ಸಲ್ಲಿಸಲಾಗಿತ್ತು. ಈವರೆಗೂ ಜಾಗ ನೀಡಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ADVERTISEMENT

ಜಿಲ್ಲೆಯ ವಿವಿಧೆಡೆ ಗಂಡು ಸಿಂಧಿ ಕರುಗಳನ್ನು ಬೀದಿ, ಅಡವಿ ಪಾಲು ಮಾಡಿರುವುದು ಕಂಡುಬಂದಿವೆ. ಕಡೂರು ಪಟ್ಟಣದಲ್ಲಿ ಈಚೆಗೆ ಯಾರೋ ಬಿಟ್ಟುಹೋಗಿದ್ದ 10 ಕರುಗಳನ್ನು ವರ್ತಕರೊಬ್ಬರು ಬಾಣಾವರದ ಗೋಶಾಲೆಗೆ ಒಯ್ದು ತಲುಪಿಸಿದ್ದಾರೆ. ವಿವಿಧೆಡೆ ಬೀದಿನಾಯಿಗಳ ಕಾಟವೂ ಇದೆ. ರಾಸುಗಳ ಸಂರಕ್ಷಣೆ, ನಾಯಿಗಳ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆಗಳಂಥ ಚಟುವಟಿಕೆಗಳ ಕೈಗೊಳ್ಳಲು ಗೋಶಾಲೆ, ಜಿಲ್ಲಾ ಪ್ರಾಣಿ ದಯಾ ಸಂಘ ತೆರೆಯಲು ಜಾಗ ಒದಗಿಸುವ ಜರೂರು ಇದೆ.

‘ ಪ್ರಾಣಿ ದಯಾ ಸಂಘಕ್ಕೆ ಜಾಗ ಒದಗಿಸುವಂತೆ ಹಲವು ಬಾರಿ ಮನವಿ ಮಾಡಿದ್ದೇವೆ. ಸಂಘ ಆರಂಭಿಸಿದರೆ ಬೀದಿ ನಾಯಿಗಳಿಗೆ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ನಡೆಸಲು ಅನುಕೂಲವಾಗುತ್ತದೆ. ಇದರಿಂದ ಜನನ ಪ್ರಮಾಣ ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತದೆ. ನಿರಂತವಾಗಿ ಈ ಪ್ರಕ್ರಿಯೆ ನಡೆಸಬೇಕು. ಅಪಘಾತವಾಗಿ ಗಾಯಗೊಂಡ ಬೆಕ್ಕು ಮೊದಲಾದವಕ್ಕೂ ಆಶ್ರಯ ನೀಡಬಹುದು. ಸಂಘಕ್ಕೆ ಜಾಗ ನೀಡಲು ಜಿಲ್ಲಾಡಳಿತ ಮುಂದಾಗಬೇಕು’ ಎಂದು ಜಿಲ್ಲಾ ಪ್ರಾಣಿ ದಯಾ ಸಂಘದ ಸದಸ್ಯ ರೂಬೆನ್‌ ಮೊಸೆಸ್‌ ಒತ್ತಾಯಿಸುತ್ತಾರೆ.

‘ಜಾಗ ಗುರುತಿಸುವ ನಿಟ್ಟಿನಲ್ಲಿ ಪ್ರಕ್ರಿಯೆ ಶುರುವಾಗಿದೆ. ಬೀಕನಹಳ್ಳಿಯ ಸರ್ವೆ ನಂಬರ್ 7 ರ ಜಾಗ ಪರಿಶೀಲಿಸಿದ್ದೇವೆ.ಸ್ಕೆಚ್‌ ಮಾಡಿ ಅಖೈರುಗೊಳಿಸಲು ಉದ್ದೇಶಿಸಲಾಗಿದೆ ’ ಎಂದು ತಹಶೀಲ್ದಾರ್‌ ಡಾ.ಕೆ.ಜೆ.ಕಾಂತರಾಜ್‌ ತಿಳಿಸಿದರು.

‘ಮುಂದಿನ ತಿಂಗಳು ಸಭೆ’

ಗೋಶಾಲೆ, ಪ್ರಾಣಿ ದಯಾ ಸಂಘದ ಜಾಗದ ಪ್ರಸ್ತಾವಕ್ಕೆ ಸಂಬಂಧಿಸಿದಂತೆ ಏಪ್ರಿಲ್‌ನಲ್ಲಿ ಸಭೆ ನಡೆಸಿ ಅಖೈರುಗೊಳಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಇಲಾಖೆ ಮಾರ್ಗಸೂಚಿ, ರೂಪುರೇಷೆ ಬಂದ ತಕ್ಷಣ ಗೋಶಾಲೆ ಆರಂಭಿಸುತ್ತೇವೆ’ ಎಂದು ಪಶು ಪಾಲನೆ ಇಲಾಖೆ ಉಪನಿರ್ದೇಶಕ ಡಾ.ಪ್ರಕಾಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲೆಯಲ್ಲಿ ಹಾಲಿ 5ಖಾಸಗಿ ಗೋಶಾಲೆಗಳು ಇವೆ. ಖಾಸಗಿಯವರು ಗೋಶಾಲೆ ನಡೆಸಲು ಮುಂದಾದರೆ ಇಲಾಖೆಯಿಂದ ಒಂದು ಜಾನುವಾರು ನಿರ್ವಹಣೆಗೆ ದಿನಕ್ಕೆ ₹ 17 ನೆರವು ನೀಡುತ್ತೇವೆ. ಆಸಕ್ತರು ಆರಂಭಿಸಬಹುದು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.