
ಚಿಕ್ಕಮಗಳೂರು: ಮಲೆನಾಡು ಭಾಗದ ಅಡಿಕೆ ಬೆಳೆಗೆ ತಗುಲಿರುವ ಹಳದಿ ಎಲೆ ಮತ್ತು ಎಲೆಚುಕ್ಕಿ ರೋಗ ಆ ಭಾಗದ ರೈತರ ಬದುಕನ್ನೇ ಕಸಿದುಕೊಂಡಿದೆ. ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಈ ಬೆಳೆಗಾರರಿಗೆ ರಾಜ್ಯ ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಬೇಕು ಎಂಬ ಕೂಗು ಮಲೆನಾಡು ಭಾಗದಲ್ಲಿ ದೊಡ್ಡದಾಗಿದೆ.
ಕಳಸ, ಕೊಪ್ಪ, ಶೃಂಗೇರಿ, ಬಾಳೆಹೊನ್ನೂರು, ನರಸಿಂಹರಾಜಪುರ ಭಾಗದಲ್ಲಿ ಅಡಿಕೆಗೆ ಹಳದಿ ಎಲೆ ರೋಗ ಕಾಡುತ್ತಿದೆ. ಶೇ 5ರಷ್ಟು ಮಾತ್ರ ಇಳುವರಿ ಬಂದಿದ್ದು, ಶೇ 95ರಷ್ಟು ಬೆಳೆ ನಷ್ಟದಿಂದ ರೈತರು ಕಂಗೆಟ್ಟಿದ್ದಾರೆ.
2021ರಿಂದ ಎಲೆ ಚುಕ್ಕಿ ರೋಗ ಪ್ರಾರಂಭವಾಗಿದ್ದು, ಈ ರೋಗ ಬಂದು ಅಡಿಕೆ ತೋಟಗಳು ಸಂಪೂರ್ಣ ನಾಶವಾಗಿವೆ. ಹಳದಿ ರೋಗ ಇಲ್ಲದಿದ್ದ ತೋಟಗಳಲ್ಲಿ ಎಲೆ ಚುಕ್ಕಿ ರೋಗ ವಿಸ್ತರಿಸಿ, ಕೇವಲ ಎರಡು-ಮೂರು ವರ್ಷಗಳಲ್ಲಿ ಶೇ 80ರಿಂದ 90ರಷ್ಟು ಬೆಳೆ ನಾಶ ಆಗಿದೆ ಎಂದು ಬೆಳೆಗಾರರು ಹೇಳುತ್ತಾರೆ.
ಪ್ರಯೋಗಿಕವಾಗಿ ಯಾವ ಸಂಶೋಧನಾ ಕೇಂದ್ರಗಳು ಸಹ ಈವರೆಗೆ ಸಮರ್ಥ ಔಷಧಿ ಕಂಡು ಹಿಡಿದಿಲ್ಲ. ಸಂಶೋಧನಾ ಕೇಂದ್ರಗಳು ಸೂಚಿಸುವ ಗೊಬ್ಬರ,ಔಷಧಗಳನ್ನು ಖರೀದಿಸಲು ಸಾಧ್ಯವಾಗದಷ್ಟು ಬೆಳೆಗಾರರು ಕಷ್ಟಕ್ಕೆ ಸಿಲುಕಿದ್ದಾರೆ. ಸೂಚಿಸುವ ಔಷಧ ಮತ್ತು ಗೊಬ್ಬರಗಳನ್ನು ರೋಗಪೀಡಿತ ತೋಟಗಳಿಗೆ ಪೂರೈಕೆ ಮಾಡಬೇಕಾದರೆ ಆ ರೈತನಿಗೆ ಆಗುವ ಖರ್ಚಿನ ಕನಿಷ್ಠ ಶೇ 75ರಷ್ಟನ್ನು ಸರ್ಕಾರ ಧನಸಹಾಯವಾಗಿ ನೀಡಬೇಕು ಎಂಬುದು ಅವರು ಮನವಿ.
ಅಡಿಕೆ ಬೆಳೆ ನಾಶವಾದ ಬಳಿಕ ಬೇರೆ ಯಾವ ಬೆಳೆಯನ್ನೂ ಬೆಳೆಯಲಾಗದ ಸ್ಥಿತಿಗೆ ರೈತರು ತಲುಪಿದ್ದಾರೆ. ವರ್ಷಕ್ಕೆ 150 ಇಂಚಿನ ತನಕ ಬಿಡುವಿಲ್ಲದೆ ಮಳೆಯಾಗುತ್ತಿದೆ. ಇದರ ನಡುವೆ ಅಡಿಕೆಗೆ ಬದಲಾಗಿ ಪರ್ಯಾಯ ಬೆಳೆ ಬೆಳೆಯುವ ಸ್ಥಿತಿಯೂ ಇಲ್ಲವಾಗಿದೆ. ರೈತರು ಬರಿಗೈ ಆಗಿದ್ದಾರೆ. ಇಲ್ಲಿಯ ಭೌಗೋಳಿಕ ವಾತಾವರಣ ಹಾಗೂ ಹವಾಮಾನಕ್ಕೆ ಸರಿಹೊಂದುವ ಕಾಫಿ ಮತ್ತು ಕಾಳುಮೆಣಸು ಬೆಳೆಯಲು ಕನಿಷ್ಠ 6 ವರ್ಷ ಬೇಕು. ಈ ಮಧ್ಯಂತರ ಅವಧಿಯಲ್ಲಿ ಸಂತ್ರಸ್ತರ ಜೀವನ ಹೇಗೆ ಎಂಬ ಚಿಂತೆ ರೈತರನ್ನು ಕಾಡುತ್ತಿದೆ. ಆದ್ದರಿಂದ ತುರ್ತು ಹಣಕಾಸಿನ ಅಗತ್ಯ ಇದೆ. ಆದ್ದರಿಂದ ರಾಜ್ಯ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂಬುದು ಅವರ ಆಗ್ರಹ.
ರೋಗ ನಿಯಂತ್ರಣಕ್ಕೆ ಸೂಚಿಸಿರುವ ಔಷಧ ಮತ್ತು ಗೊಬ್ಬರ ತರಲು ರೈತನಲ್ಲಿ ಶಕ್ತಿ ಇಲ್ಲ. ಸರ್ಕಾರವೇ ಶೇ 75ರಷ್ಟು ಸಹಾಯಧನ ನೀಡಬೇಕು. ಅಡಿಕೆ ಬೆಳೆಗೆ ರಾಜ್ಯ ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್ ಪ್ರಕಟಿಸಬೇಕು.ತಲವಾನೆ ಪ್ರಕಾಶ್ ಮಲೆನಾಡು ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ
ಅಡಿಕೆ ತೋಟಗಳು ವಿನಾಶದ ಅಂಚಿಗೆ ತಲುಪುತ್ತಿವೆ. ಈ ವರ್ಷದ ಅಡಿಕೆ ಫಸಲು ಸರ್ವಕಾಲಿಕ ಕನಿಷ್ಠ ಆಗಿದೆ. ಸರ್ಕಾರ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಕೊಡಬೇಕು. ಅಡಿಕೆ ತೋಟದಲ್ಲಿ ಪರ್ಯಾಯ ಬೆಳೆ ಬೆಳೆಯಲು ಉತ್ತೇಜನ ನೀಡಬೇಕು.ರಾಘವೇಂದ್ರ ಕುಂಬಳಡಿಕೆ ಅಡಿಕೆ ಬೆಳೆಗಾರರು ಕಳಸ
‘ಹಣ ಮೀಸಲಿಡದ ರಾಜ್ಯ’ ಹಳದಿ ಎಲೆ ರೋಗ ಮತ್ತು ಎಲೆ ಚುಕ್ಕಿ ರೋಗದ ನಿರ್ವಹಣೆಗೆ ತನ್ನ ಪಾಲಿನ ಹಣ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಸಿದ್ಧವಿದ್ದರೂ ರಾಜ್ಯ ಸರ್ಕಾರವು ತನ್ನ ಪಾಲಿನ ಹಣ ಮೀಸಲಿಟ್ಟಿಲ್ಲ. ಆದ್ದರಿಂದ ರೈತರಿಗೆ ಪರಿಹಾರ ತಲುಪಿಲ್ಲ. ಎಲೆ ಚುಕ್ಕಿ ರೋಗದಿಂದ ಈಗಾಗಲೇ 12 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಲೆನಾಡು ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘ ತಿಳಿಸಿದೆ. ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ಸಂಸದರು ಕೇಳಿದ ಪ್ರಶ್ನೆಗೆ ಉತ್ತರ ನೀಡಿರುವ ಸರ್ಕಾರ ‘ಎಲೆಚುಕ್ಕಿರೋಗ ಇರುವುದಿಲ್ಲ’ ಹೇಳಿದೆ. ಇದು ಸತ್ಯಕ್ಕೆ ದೂರವಾದ ವಿಷಯ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಶೇ 70ರಷ್ಟು ಅಡಿಕೆ ಬೆಳೆ ಎಲೆಚುಕ್ಕಿ ರೋಗಕ್ಕೆ ಬಲಿಯಾಗಿದೆ. ಇದನ್ನು ಸರಿಪಡಿಸಿ ಸೂಕ್ತ ಪರಿಹಾರಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.