ADVERTISEMENT

ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾ; ಉರುಸ್‌ ಮೆರವಣಿಗೆ: ಭಕ್ತರ ಕಲರವ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2021, 3:41 IST
Last Updated 30 ಮಾರ್ಚ್ 2021, 3:41 IST
ಚಿಕ್ಕಮಗಳೂರು ತಾಲ್ಲೂಕಿನ ಬಾಬಾಬುಡನ್‌ಗಿರಿಯಲ್ಲಿ ಸೋಮವಾರ ನಡೆದ ಉರುಸ್‌ ಮೆರವಣಿಗೆಯಲ್ಲಿ ಭಕ್ತರ ಕಲರವ. ಪ್ರಜಾವಾಣಿ ಚಿತ್ರ/ ಎ.ಎನ್‌.ಮೂರ್ತಿ
ಚಿಕ್ಕಮಗಳೂರು ತಾಲ್ಲೂಕಿನ ಬಾಬಾಬುಡನ್‌ಗಿರಿಯಲ್ಲಿ ಸೋಮವಾರ ನಡೆದ ಉರುಸ್‌ ಮೆರವಣಿಗೆಯಲ್ಲಿ ಭಕ್ತರ ಕಲರವ. ಪ್ರಜಾವಾಣಿ ಚಿತ್ರ/ ಎ.ಎನ್‌.ಮೂರ್ತಿ   

ಚಿಕ್ಕಮಗಳೂರು: ತಾಲ್ಲೂಕಿನ ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾದಲ್ಲಿ ಸಂದಲ್‌ ಉರುಸ್‌ ಸೋಮವಾರ ಶುರುವಾಯಿತು.

ಉರುಸ್‌ ಆಚರಣೆಗೆ ನಾಡಿನ ವಿವಿಧೆಡೆಗಳಿಂದ ಮುಸ್ಲಿಂ ಭಕ್ತರು ಗಿರಿ ಬಂದಿದ್ದಾರೆ. ಗಿರಿಯಲ್ಲಿ ಕಲರವ ಮೇಳೈಸಿತ್ತು. ದರ್ಗಾದ ಮುಂಭಾಗದ ರಸ್ತೆಯಲ್ಲಿ ಸೋಮವಾರ ಸಂಜೆ ಮೆರವಣಿಗೆ ನಡೆಯಿತು.

ಪವಿತ್ರ ಗಂಧವನ್ನು ಮೆರವಣಿಗೆಯಲ್ಲಿ ಗಿರಿಗೆ ತರಲಾಯಿತು. ಭಕ್ತರು ಗೀತೆಗಳನ್ನು ಹಾಡಿದರು. ಭಕ್ತರು ನಾಣ್ಯಗಳನ್ನು, ಹೂವುಗಳನ್ನು ಚಿಮ್ಮಿ ಹರಕೆ ಸಲ್ಲಿಸಿದರು. ಮೆರವಣಿಗೆ ಸೊಬಗನ್ನು ಭಕ್ತರು ಮೊಬೈಲ್‌ ಫೋನ್‌ ಕ್ಯಾಮೆರಾಗಳಲ್ಲಿ ಸೆರೆಹಿಡಿದುಕೊಂಡರು.

ADVERTISEMENT

ಗುಹೆಯ ಒಳಗಡೆಗೆ ಹೋಗಿ ಸಾಂಪ್ರದಾಯಿಕ ವಿಧಿಗಳನ್ನು ನಡೆಸಲು ಜಿಲ್ಲಾಡಳಿತ ಅನುಮತಿ ನೀಡಬೇಕು ಎಂದು ಶಾಖಾದ್ರಿ ಸಯ್ಯದ್‌ ಗೌಸ್‌ ಮೊಯುದ್ದಿನ್‌ ಮತ್ತು ಅವರ ಬೆಂಬಲಿಗರು ಪಟ್ಟುಹಿಡಿದರು. ಕೆಲ ಹೊತ್ತು ಪ್ರವೇಶ ದ್ವಾರದ ಬಳಿಯೇ ನಿಂತರು.

ಪ್ರವೇಶ ದ್ವಾರದ ಬಳಿ ಬ್ಯಾರಿಕೇಡ್‌ಗಳನ್ನು ಹಾಕಿ, ಪೊಲೀಸ್‌ ಬಿಗಿ ಭದ್ರತೆ ನಿಯೋಜಿಸಲಾಗಿತ್ತು. ಜಿಲ್ಲಾಡಳಿತ ಅನುಮತಿ ನೀಡದಿದ್ದರಿಂದ ಪ್ರವೇಶ ದ್ವಾರದಲ್ಲೇ ಪ್ರಾರ್ಥನೆ ಸಲ್ಲಿಸಿ, ವಾಪಸ್‌ ಹೋದರು.ನಗರ, ಗಿರಿಶ್ರೇಣಿ ಮಾರ್ಗ,

‘ಕುಟುಂಬಸಮೇತ ಶ್ರದ್ಧಾಭಕ್ತಿಯಿಂದ ಉರುಸ್‌ನಲ್ಲಿ ಪಾಲ್ಗೊಳ್ಳುತ್ತೇವೆ. ಎಲ್ಲರಿಗೂ ಒಳಿತಾಗಲಿ ಎಂದು ಪ್ರಾರ್ಥನೆ ಸಲ್ಲಿಸುತ್ತೇವೆ. ಹರಕೆ ತೀರಿಸುತ್ತೇವೆ. ಈ ಮೆರವಣಿಗೆಯಲ್ಲಿ ಸಾಗಿ ಖುಷಿ ಪಡುತ್ತೇವೆ’ ಎಂದು ನಗರದ ಉಪ್ಪಳ್ಳಿ ರಿಯಾಜ್‌ ಹೇಳಿದರು.

ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾ ಸಹಿತ ವಿವಿಧೆಡೆ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಸಿ.ಸಿ.ಟಿವಿ ಕ್ಯಾಮೆರಾ ಕಣ್ಗಾವಲು ಇದೆ. ಪ್ರಸಾದ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.

ಅಂತರ ಪಾಲನೆಗೆ ತೀಲಾಂಜಲಿ: ಕೋವಿಡ್‌ ಮಾರ್ಗಸೂಚಿಯ ಅಂತರ ಪಾಲನೆಯನ್ನು ಗಾಳಿಗೆ ತೂರಲಾಗಿತ್ತು.

ಜಿಲ್ಲಾಧಿಕಾರಿ ಕೆ.ಎನ್‌.ರಮೇಶ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಕ್ಷಯ್‌ ಎಂ.ಹಾಕೆ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್‌.ರೂಪಾ, ಉಪವಿಭಾಗಾಧಿಕಾರಿ ಡಾ.ಎಚ್‌.ಎಲ್‌.ನಾಗರಾಜ್‌ ಅವರು ಸ್ಥಳದಲ್ಲಿದ್ದು ನಿಗಾ ವಹಿಸಿದ್ದರು.

ಮುಖಂಡರಾದ ಸಿರಾಜ್‌ ಹುಸೇನ್‌, ಯೂಸುಫ್‌ ಹಾಜಿ, ಶಾಹಿದ್‌, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.