ADVERTISEMENT

ಬಕ್ರೀದ್ ಪ್ರಯುಕ್ತ ಪ್ರಾಣಿ ವಧೆ ನಿಷೇಧ: ದಸಂಸ ಖಂಡನೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2025, 15:29 IST
Last Updated 4 ಜೂನ್ 2025, 15:29 IST
ದಂಟರಮಕ್ಕಿ ಶ್ರೀನಿವಾಸ್
ದಂಟರಮಕ್ಕಿ ಶ್ರೀನಿವಾಸ್   

ಚಿಕ್ಕಮಗಳೂರು: ಬಕ್ರೀದ್ ಹಬ್ಬದಲ್ಲಿ ದನ, ಎಮ್ಮೆ ಮತ್ತು ಒಂಟೆ ಸೇರಿ ಪ್ರಾಣಿ ವಧೆ ಮಾಡದಂತೆ ತಡೆಯಲು ಜಿಲ್ಲಾಧಿಕಾರಿ ತಂಡಗಳನ್ನು ರಚನೆ ಮಾಡಿರುವುದು ಅವೈಜ್ಞಾನಿಕ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ದಂಟರಮಕ್ಕಿ ಶ್ರೀನಿವಾಸ್ ತಿಳಿಸಿದರು.

ಪ್ರಾಣಿ ವಧೆ ತಡೆಯಲು 10 ತಂಡಗಳನ್ನು ಜಿಲ್ಲಾಧಿಕಾರಿ ರಚನೆ ಮಾಡಿರುವುದು ಖಂಡನೀಯ. ಈ ರೀತಿಯ ಅವೈಜ್ಞಾನಿಕ ನಿಯಮ ಜಾರಿ ಮಾಡುವುದು ಒಂದು ಸಮುದಾಯದ ಸಾಂಪ್ರದಾಯಿಕ ಆಚರಣೆಗೆ ಧಕ್ಕೆ ತಂದಂತೆ ಆಗಲಿದೆ. ಹೊಸ ನಿಯಮ ಜಾರಿ ಮಾಡಿದರೆ ಕೋಮು ಗಲಭೆಗೆ ಕಾರಣವಾಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ಹೇಳಿದರು.

ಹಲವು ವರ್ಷಗಳಿಂದ ಭಾರತದಲ್ಲಿ ಸಂವಿಧಾನಾತ್ಮಕವಾದ ಆಹಾರ ಪದ್ಧತಿಯನ್ನು ಯಾರು ಕೂಡ ಯಾವುದೇ ಸಮುದಾಯಕ್ಕೆ ಪ್ರಶ್ನೆ ಮಾಡಿಲ್ಲ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ವಿನಾಕಾರಣ ಅಲ್ಪಸಂಖ್ಯಾತ ಸಮುದಾಯಗಳಿಗೆ ಮತ್ತು ಬಡವರಿಗೆ ಸಂವಿಧಾನ ವಿರೋಧಿ ನಿಯಮಗಳನ್ನು ಜಾರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ADVERTISEMENT

‘ದನದ ಮಾಂಸ ರಫ್ತುನಲ್ಲಿ ನಮ್ಮ ದೇಶ ಮೊದಲ ಸ್ಥಾನದಲ್ಲಿದೆ. ರಾಜ್ಯದ ದೊಡ್ಡ ನಗರಗಳಲ್ಲಿ ಮಾಂಸ ಮಾರಾಟ ಪ್ರತಿನಿತ್ಯ ಕಾನೂನು ಬದ್ಧವಾಗಿಯೇ ನಡೆಯುತ್ತಿದೆ. ಗೋವಾ, ತಮಿಳುನಾಡು, ಕೇರಳ ಮತ್ತು ಉತ್ತರ ಪ್ರದೇಶಗಳಲ್ಲಿ ಸ್ವತಂತ್ರವಾಗಿ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಆದರೆ, ಜಿಲ್ಲೆಯಲ್ಲಿ ಮಾತ್ರ ಜಿಲ್ಲಾಧಿಕಾರಿ ಮತ್ತು ಸರ್ಕಾರ ಕಾನೂನಿಗೆ ವಿರುದ್ಧವಾದ ನಡೆ ಅನುಸರಿಸುತ್ತಿದೆ. ಸರ್ಕಾರ ಮತ್ತು ಜಿಲ್ಲೆಯ ಶಾಸಕರು ಈ ಸಂಬಂಧ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು’ ಎಂದು ಒತ್ತಾಯಿಸಿದರು.

ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಏನೂ ತಿಳಿಯದ ರೀತಿ ವರ್ತಿಸುತ್ತಿರುವುದು ಖಂಡನೀಯ. ಈ ಜನವಿರೋಧಿ ನೀತಿಯನ್ನು ಖಂಡಿಸಿ ನ್ಯಾಯಕ್ಕಾಗಿ ಹೋರಾಟ ನಡೆಸಲು ಎಲ್ಲರೂ ಮುಂದಾಗಬೇಕು ಎಂದರು.

ದಸಂಸ ರಾಜ್ಯ ಸಮಿತಿ ಸದಸ್ಯ ಮರ್ಲೆ ಅಣ್ಣಯ್ಯ, ಛಲವಾದಿ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ರಘು, ಮುನೀರ್, ಭೀಮಯ್ಯ, ಸಂತೋಷ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.