
ಚಿಕ್ಕಮಗಳೂರು: ಮುರಿದು ಬೀಳುತ್ತಿರುವ ಆಟಿಕೆ ಉಪಕರಣಗಳು, ನಡಿಗೆ ಪಥದಲ್ಲಿ ಬೆಳೆದು ನಿಂತ ಗಿಡ, ಕುರ್ಚಿಗಳನ್ನು ಸುತ್ತುವರಿದ ಪೊದೆಗಳು, ಎಲ್ಲೆಂದರಲ್ಲಿ ಬಿದ್ದಿರುವ ಕಸ ಹಾಗೂ ಕಸದ ಬುಟ್ಟಿ... ಇದು ನಗರದ ಕಲ್ಯಾಣನಗರದ ಬಸವೇಶ್ವರ ಪಾರ್ಕ್ ಸ್ಥಿತಿ.
ಹೆಚ್ಚು ಜನವಸತಿ ಇರುವ, ಅದರಲ್ಲೂ ಸುಶಿಕ್ಷಿತರೇ ಹೆಚ್ಚಿರುವ ಬಡಾವಣೆ. ಕಲ್ಯಾಣ ನಗರದ 4ನೇ ಅಡ್ಡರಸ್ತೆಯಲ್ಲಿರುವ ಈ ಉದ್ಯಾನಕ್ಕೆ ನಿತ್ಯ ಮುಂಜಾನೆ ಹಾಗೂ ಸಂಜೆ ಮಕ್ಕಳು ಮತ್ತು ಪೋಷಕರು ಭೇಟಿ ನೀಡುತ್ತಾರೆ. ಮಕ್ಕಳನ್ನು ಪೋಷಕರು ಕರೆತಂದು ಆಟವಾಡಿಸಿ ಕಾಲ ಕಳೆಯುತ್ತಾರೆ. ಆದರೆ, ನಿರ್ವಹಣೆ ಇಲ್ಲದಿರುವುದು ಉದ್ಯಾನವನ್ನು ಈ ಸ್ಥಿತಿಗೆ ಬಂದಿದೆ.
ಮಕ್ಕಳ ಆಟಿಕೆ ಸಲಕರಣೆಗಳು ಹಳೆಯದಾಗಿದ್ದು, ಅದರಲ್ಲೇ ನಿತ್ಯ ಮಕ್ಕಳು ಆಟವಾಡುತ್ತಿದ್ದಾರೆ. ವಾಯು ವಿಹಾರಿಗಳಿಗೆ ನಡಿಗೆಗಾಗಿ ಪಥ ನಿರ್ಮಾಣ ಮಾಡಲಾಗಿದೆ. ಇದು ಕೂಡ ಸಂಪೂರ್ಣ ಗಿಡಗಳ ನಡುವೆ ಮುಚ್ಚಿ ಹೋಗಿದ್ದು, ನಡೆದಾಡಲು ದಾರಿಯೇ ಕಾಣದಾಗಿದೆ. ಉದ್ಯಾನದ ಬದಲಿಗೆ ಜನ ರಸ್ತೆಯಲ್ಲೇ ನಡಿಯಬೇಕಾದ ಅನಿವಾರ್ಯತೆ ಇದೆ.
ಉದ್ಯಾನದಲ್ಲಿ ಮುಳ್ಳು ಗಿಡಗಳು ಮಕ್ಕಳು ಆಟವಾಡಲು ಸಾಧ್ಯವಾಗದಷ್ಟು ಬೆಳೆದು ನಿಂತಿವೆ. ಗಿಡಗಳು ಹೆಚ್ಚಾಗಿ ಬೆಳೆದು ನಿಂತಿರುವುದರಿಂದ ಹಾವು, ಚೇಳುಗಳ ಆವಾಸ ಸ್ಥಾನವಾಗಿದೆ. ಮಕ್ಕಳು ಆಡವಾಡುವ ವೇಳೆಯೇ ಅನೇಕ ಬಾರಿ ಹಾವುಗಳು ಕಾಣಿಸಿರುವ ಉದಾಹರಣಗಳಿವೆ ಎಂದು ಇಲ್ಲಿನ ನಿವಾಸಿಗಳು ಹೇಳುತ್ತಾರೆ.
ಭಾನುವಾರ ಹಾಗೂ ಶಾಲಾ ರಜಾ ದಿನಗಳಲ್ಲಿ ಇಲ್ಲಿಗೆ ಮಕ್ಕಳು ಹೆಚ್ಚಾಗಿ ಭೇಟಿ ನೀಡುತ್ತಾರೆ. ಆಟಿಕೆಗಳಿಲ್ಲ, ಕುಳಿತುಕೊಳ್ಳಲು ಆಸನಗಳೂ ಇಲ್ಲದೆ ಮಕ್ಕಳು ಹಾಗೂ ಅವರ ಪೋಷಕರು ತೊಂದರೆ ಅನುಭವಿಸುತ್ತಿದ್ದಾರೆ.
ನಗರಸಭೆ ಅಧಿಕಾರಿಗಳು ಉದ್ಯಾನ ಅಭಿವೃದ್ಧಿಪಡಿಸಿ ಜನರ ಉಪಯೋಗಕ್ಕೆ ಬರುವಂತೆ ಮಾಡಬೇಕು ಎಂಬುದು ನಿವಾಸಿಗಳ ಒತ್ತಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.