ADVERTISEMENT

ಸಂಭ್ರಮದ ವೀರಭದ್ರಸ್ವಾಮಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2021, 4:16 IST
Last Updated 28 ಮಾರ್ಚ್ 2021, 4:16 IST
ಬೀರೂರು ವೀರಭದ್ರಸ್ವಾಮಿ ರಥೋತ್ಸವವು ಶನಿವಾರ ಸಂಭ್ರಮದಿಂದ ನೆರವೇರಿತು.
ಬೀರೂರು ವೀರಭದ್ರಸ್ವಾಮಿ ರಥೋತ್ಸವವು ಶನಿವಾರ ಸಂಭ್ರಮದಿಂದ ನೆರವೇರಿತು.   

ಬೀರೂರು: ಪಟ್ಟಣದ ಆರಾಧ್ಯದೈವ ಭದ್ರಕಾಳಿ ಸಹಿತ ವೀರಭದ್ರಸ್ವಾಮಿ ರಥೋತ್ಸವವು ಶನಿವಾರ ಸಾಯಂಕಾಲ ಸಡಗರದಿಂದ ನೆರವೇರಿತು.

ಹಳೇಪೇಟೆಯ ದೇವಾಲಯದಲ್ಲಿ ಶುಕ್ರವಾರ ಕಲ್ಯಾಣೋತ್ಸವ, ಬ್ರಹ್ಮರಥ ಮತ್ತು ದುಗ್ಗಳ ಸೇವೆ ನಡೆಸಲಾಗಿತ್ತು. ಶನಿವಾರ ಬಿಸಿಲಿನ ಝಳ ಕಡಿಮೆ ಆಗುವ ಸಮಯಕ್ಕೆ ದೇವಾಲಯದ ಮುಂಭಾಗದಲ್ಲಿ ಜಮಾವಣೆಗೊಂಡ ಭಕ್ತರು, ಉತ್ಸವ ಮೂರ್ತಿಗೆ ಮಂಗಳಾರತಿ ಸಮರ್ಪಿಸಿದರು. ಬಳಿಕ ರಥದ ಚಕ್ರಗಳಿಗೆ ತೆಂಗಿನಕಾಯಿ ಅರ್ಪಿಸಿ ರಥ ಎಳೆಯಲು ಚಾಲನೆ ನೀಡಿದರು.

ಕರಗಲ್ ಬೀದಿ, ಹಳೇಪೇಟೆ ಮುಖ್ಯರಸ್ತೆ, ಸಂಪಿಗೆ ಸಿದ್ದೇಶ್ವರ ದೇವಾಲಯದ ಓಣಿ, ಶಿವಾಜಿನಗರ ತಿರುವು ಮೊದಲಾದ ಕಡೆ ಭಕ್ತರು ನಿಂತು, ದೈವಕ್ಕೆ ಹಣ್ಣು, ಕಾಯಿ, ಕರ್ಪೂರ ಸಮರ್ಪಿಸಿ ಮಂಗಳಾರತಿ ಮಾಡಿಸಿದರು. ಹಲವರು ರಥದ ಕಳಸಕ್ಕೆ ಬಾಳೆಹಣ್ಣು, ಕಿತ್ತಲೆ, ಹೂವುಗಳನ್ನು ಎಸೆದು ಕೃತಾರ್ಥರಾದರು.

ADVERTISEMENT

ವೀರಗಾಸೆ, ಜನಪದ ವಾದ್ಯ, ಮಂಗಳವಾದ್ಯ ಮತ್ತು ನಾಸಿಕ್ ಬ್ಯಾಂಡ್ ಮೇಳಕ್ಕೆ ಯುವಕರು ಹುರುಪಿನಿಂದ ನರ್ತಿಸುತ್ತಿದ್ದರು. ಸಂಪಿಗೆ ಸಿದ್ದೇಶ್ವರ ದೇವಾಲಯದ ಬಳಿ ಭಕ್ತರಿಗೆ ಮಜ್ಜಿಗೆ, ಪಾನಕ ವಿತರಿಸಲಾಯಿತು. ಮಹಾನವಮಿ ಬಯಲಿನವರೆಗೆ ತೆರಳಿದ ರಥವು ಅಲ್ಲಿ ಭಕ್ತರ ಸೇವೆ ಪಡೆದು ತಿರುಗಿ ದೇವಾಲಯದ ಮುಂಭಾಗಕ್ಕೆ ತಲುಪಿದ ಬಳಿಕ ರಥಾವರೋಹಣ ನಡೆಯಿತು. ಆಲಯದ ಅಧಿದೈವಗಳಿಗೆ ಮತ್ತು ಗುರು ಗದ್ದುಗೆಗೆ ಮಂಗಳಾರತಿ ಸಲ್ಲಿಸಿ ಉತ್ಸವ ಮೂರ್ತಿಗಳ ಗುಡಿ ತುಂಬಿಸುವ ಕಾರ್ಯಕ್ರಮ ನಡೆಯಿತು. ಭಾನುವಾರ ಮುಖಾರ್ಚನೆ, ಓಕಳಿ, ಪಲ್ಲಕ್ಕಿ ಉತ್ಸವ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.