
ಕಡೂರು: ‘ಭದ್ರಾ ಮೇಲ್ದಂಡೆ ಯೋಜನೆಯಡಿ ಕಾಮಗಾರಿ ಬಾಕಿಯಾಗಿರುವ ಪ್ರದೇಶಗಳ 221 ಎಕರೆ ಭೂ ಸ್ವಾಧೀನಕ್ಕೆ ಸಂಪುಟದ ಅನುಮೋದನೆ ದೊರೆತು ಪರಿಹಾರದ ಹಣವೂ ಬಿಡುಗಡೆಯಾಗಿ, ಫಲಾನುಭವಿಗಳಿಗೆ ಹಂಚಿಕೆ ಬಾಕಿ ಇದೆ’ ಎಂದು ಶಾಸಕ ಕೆ.ಎಸ್. ಆನಂದ್ ಸ್ಪಷ್ಟಪಡಿಸಿದರು.
ತಾಲ್ಲೂಕಿನ ಅಣ್ಣೀಗೆರೆಯಲ್ಲಿ (9ನೇ ಮೈಲಿಕಲ್ಲು) ಶಾಸಕರ ನಡೆ ಪಂಚಾಯಿತಿ ಕಡೆ ಪ್ರಯುಕ್ತ 13ನೇ ಜನಸಂಪರ್ಕ ಸಭೆಯಲ್ಲಿ ರೈತರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.
ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನವು ಹಿಂದುಳಿದಿರುವ ಭಾಗಗಳಾದ ವೈ.ಮಲ್ಲಾಪುರ, ಅಣ್ಣೀಗೆರೆ, ಯಳಗೊಂಡನಹಳ್ಳಿ ಮತ್ತು ಬೇಚಾರ್ ಗ್ರಾಮ ಕುರುಬರ ಹಳ್ಳಿ ವಲಯಗಳಲ್ಲಿ ಕೆಲಸ ಮುಂದುವರಿಕೆಗೆ ಚಾಲನೆ ಕೊಟ್ಟು, ರೈತರ ಹಿತಕ್ಕಾಗಿ ಕಾಮಗಾರಿಗೆ ವೇಗ ದೊರಕಿಸುವ ಉದ್ದೇಶದಿಂದ ತಾವು ಮಾಡಿದ ಕೋರಿಕೆಯನ್ನು ಮುಖ್ಯಮಂತ್ರಿ ಪರಿಗಣಿಸಿದ್ದಾರೆ. ಉಪ ಮುಖ್ಯಮಂತ್ರಿ ಸಹಕಾರದ ಮೇರೆಗೆ ರೈತರ ಭೂ ಸ್ವಾಧೀನಕ್ಕೆ ಸರ್ಕಾರ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಿ, ₹77ಕೋಟಿ ಹಣವನ್ನೂ ಬಿಡುಗಡೆ ಮಾಡಿದೆ. ಈ ವಿಷಯವಾಗಿ ಇನ್ನು ಒಂದೆರಡು ವಾರದಲ್ಲಿ ವಿಶ್ವೇಶ್ವರಯ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕರು, ಮೌಲ್ಯ ನಿರ್ಧರಣಾ ಸಮಿತಿ ಅಧ್ಯಕ್ಷರಾದ ಚಿಕ್ಕಮಗಳೂರು ಜಿಲ್ಲಾಧಿಕಾರಿ, ಎಂಜಿನಿಯರ್‌ಗಳು ಮತ್ತು ರೈತರ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು. ವಿಜೆಎನ್‌ಎಲ್ ಎಂಡಿಯವರ ಒಪ್ಪಿಗೆಯಂತೆ ಬಹುತೇಕ ಎಕರೆಗೆ ₹42 ಲಕ್ಷ ನಿರ್ಧಾರವಾಗಲಿದೆ. ರೈತರ ಜಮೀನು, ತೋಟಗಳಲ್ಲಿ ಇರಬಹುದಾದ ಮನೆ, ತೆಂಗು, ಅಡಿಕೆ, ಹುಣಿಸೆ ಮೊದಲಾದ ಮರಗಳು, ಮನೆ, ಕೊಳವೆಬಾವಿ ಮತ್ತಿತರ ಸ್ವತ್ತುಗಳಿಗೆ ಹೆಚ್ಚುವರಿ ಪರಿಹಾರವೂ ದೊರಕಲಿದೆ. ರೈತರ ಪರ ನಿಲ್ಲಲು ತಾವು ಬದ್ಧರಾಗಿರುವುದಾಗಿ ಅವರು ಭರವಸೆ ನೀಡಿದರು.
ಅಣ್ಣೀಗೆರೆ ವ್ಯಾಪ್ತಿಯಲ್ಲಿ ರಾಗಿ ಬೆಳೆ ಮಳೆ ಕೊರತೆಯಿಂದ ನಷ್ಟವಾಗಿದೆ. ಜಾನುವಾರುಗಳಿಗೆ ಮೇವೂ ಇಲ್ಲ, ರೈತರಿಗೆ ಆಹಾರಧಾನ್ಯವೂ ಇಲ್ಲ. ಗಾಯದ ಮೇಲೆ ಬರೆ ಎಳೆದಂತೆ ಫಸಲ್ ಬಿಮಾ ಕಂತು ಪಾವತಿಸಿದರೂ ಪರಿಹಾರ ದೊರೆತಿಲ್ಲ. ಬೆಳೆ ಸಮೀಕ್ಷೆ ಸರಿಯಾಗಿ ಆಗಿಲ್ಲ ಎಂದು ರೈತ ಮಹಿಳೆಯರು ದೂರಿದರು.
ಸಭೆಯಲ್ಲಿ ಹಾಜರಿದ್ದ ಯಗಟಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಜಯಶ್ರೀ ಉತ್ತರಿಸಿ, ಬೆಳೆ ಕಟಾವು ಪ್ರಯೋಗದ ಅನ್ವಯ ಇಳುವರಿ ಕಡಿಮೆ ಇದ್ದರೆ ಮಾತ್ರ ಪರಿಹಾರ ದೊರೆಯುತ್ತದೆ. 2024-25ರ ಸಾಲಿನಲ್ಲಿ ಅಣ್ಣೀಗೆರೆ ವ್ಯಾಪ್ತಿಯಲ್ಲಿ ರೈತರಿಗೆ ಬೆಳೆ ನಷ್ಟ ಪರಿಹಾರವಾಗಿ ₹5.12 ಲಕ್ಷ ಹಣ ಪಾವತಿಸಿದೆ. ಈ ಬಾರಿ ಈಗಾಗಲೇ ಬೆಳೆ ಕಟಾವು ಪ್ರಯೋಗದ ವರದಿ ಸಲ್ಲಿಸಿದ್ದು, ಅದರ ಆಧಾರದಲ್ಲಿ ಮಾತ್ರ ಪರಿಹಾರ ದೊರೆಯಬಹುದು. ಅದರ ವರದಿ ಬರಲು ಇನ್ನೂ ಸಮಯ ಬೇಕು ಎಂದು ತಿಳಿಸಿದರು.
9ನೇ ಮೈಲಿಕಲ್ಲಿನಲ್ಲಿ ಇರುವ ಖಾಸಗಿ ಆಯುರ್ವೇದ ಕ್ಲಿನಿಕ್‌ನ ವೈದ್ಯರು ಆಲೋಪತಿ (ಇಂಗ್ಲಿಷ್ ಮೆಡಿಸಿನ್) ಔಷಧಿ ಅದರಲ್ಲಿಯೂ ಹೆಚ್ಚಿನ ಡೋಸೇಜ್ ಬರೆದು ಜನರ ಜೀವದ ಜತೆ ಚೆಲ್ಲಾಟವಾಡುತ್ತಿದ್ದಾರೆ. ಈ ಕ್ಲಿನಿಕ್‌ನ್ನು ಮುಚ್ಚಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿ, ಅರ್ಜಿ ಸಲ್ಲಿಸಿದ್ದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ ದತ್ತಾತ್ರಿ, ಈಗಾಗಲೇ 2 ಬಾರಿ ತಪಾಸಣೆ ನಡೆಸಲಾಗಿದ್ದು ಎಚ್ಚರಿಕೆ ನೀಡಿದೆ. ಅವರ ಪರವಾನಗಿ ನವೀಕರಣ ಮಾಡುವುದಿಲ್ಲ ಎಂದು ತಿಳಿಸಿದರು.
9ನೇ ಮೈಲಿಕಲ್ಲು ಜಂಕ್ಷನ್ ಸ್ಥಳವಾಗಿದ್ದು, ಬಹಳಷ್ಟು ಕಡೆಗಳಿಂದ ಜನರು ಬರುತ್ತಾರೆ. ಇಲ್ಲಿ ಒಂದು ಸಮುದಾಯ ಶೌಚಾಲಯ ನಿರ್ಮಿಸಿ ಎಂದು ಗ್ರಾಮಸ್ಥರು ಮನವಿ ಮಾಡಿದರೆ, ಸಂಜೀವಿನಿ ಒಕ್ಕೂಟದಲ್ಲಿ ಹತ್ತಾರು ಹಳ್ಳಿಗಳವರು ಸದಸ್ಯರಿದ್ದು ಸಭೆ ನಡೆಸಲು ಕಟ್ಟಡ ಗುರುತಿಸಿಕೊಡುವಂತೆ ಕೋರಲಾಗಿತ್ತು.
ತಹಶೀಲ್ದಾರ್ ಸಿ.ಎಸ್. ಪೂರ್ಣಿಮಾ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಿ.ಆರ್. ಪ್ರವೀಣ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ್, ಸದಸ್ಯರಾದ ಎ.ಎಂ. ತಮ್ಮಯ್ಯ, ಶಂಕರಪ್ಪ, ಪ್ರೇಮಾ, ಚಂದ್ರಪ್ಪ, ಲಕ್ಷ್ಮೀದೇವಿ, ಪರ್ವೀನ್, ಭಾಗ್ಯ, ಗೀತಮ್ಮ, ಪಿಡಿಒ ನವೀನ್, ಕಾರ್ಯದರ್ಶಿ ಪರಮೇಶ್, ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾ ಸದಸ್ಯ ತಿಪ್ಪೇಶ್ ಜಿ.ಎಂ., ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ವಿರೂಪಾಕ್ಷಪ್ಪ ಇದ್ದರು.
ಅಡುಗೆ ಅನಿಲ ಸಿಲಿಂಡರ್‌ಗಳ ಗೋದಾಮು ಸ್ಥಳಾಂತರಿಸಿ
ಅಣ್ಣೀಗೆರೆ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳು ಹಳೆಯದಾಗಿದ್ದು ಶಿಥಿಲಗೊಂಡಿವೆ. ಎಲೆಕ್ಟ್ರಿಕ್ ಲೈನ್ ಜೋತು ಬಿದ್ದು ಜನರ ಜೀವಕ್ಕೆ ಅಪಾಯವಾಗುವ ಸನ್ನಿವೇಶವಿದೆ ಟಿ.ಸಿ ಕೂಡ ಸ್ಥಳಾಂತರವಾಗಬೇಕು. ಈ ಭಾಗದಲ್ಲಿ ಜಾನುವಾರುಗಳ ಔಷಧೋಪಚಾರಕ್ಕಾಗಿ ಪಶು ಆಸ್ಪತ್ರೆ ಸ್ಥಾಪಿಸಬೇಕು. ಗ್ರಾಮದ ಒಳಭಾಗದಲ್ಲಿಯೇ ಅಡುಗೆ ಅನಿಲ ಸಿಲಿಂಡರ್‌ಗಳ ಗೋದಾಮು ಇದ್ದು ಏನಾದರೂ ಅನಾಹುತ ಸಂಭವಿಸುವ ಮೊದಲು ಇದನ್ನು ಸ್ಥಳಾಂತರಿಸಿ ಎಂದು ಅಣ್ಣೀಗೆರೆ ಗ್ರಾಮಸ್ಥರು ಕೋರಿದರು. ಪಾತೇನಹಳ್ಳಿ-ಗುಜ್ಜೇನಹಳ್ಳಿಗಳು ಕಂದಾಯ ಗ್ರಾಮವಾಗದೆ ಮೂಲ ಸೌಕರ್ಯಗಳ ಕೊರತೆ ಕಾಡುತ್ತಿದೆ. ಇದನ್ನು ಬಗೆಹರಿಸಿ ಎಂದು ಜನರು ಮನವಿ ಮಾಡಿದ್ದರು. ಪಾತೇನಹಳ್ಳಿ ಮತ್ತು ಗುಜ್ಜೇನಹಳ್ಳಿಗಳನ್ನು ಕಂದಾಯ ಗ್ರಾಮಗಳಾಗಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ್ದು ಇ-ಸ್ವತ್ತು ವಿತರಣೆಗೆ ಕ್ರಮ ಮತ್ತು ಸಮಸ್ಯೆ ಬಗೆಹರಿಸುವುದಾಗಿ ಶಾಸಕ ಆನಂದ್ ಆಶ್ವಾಸನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.