ಶಿವಮೊಗ್ಗ: ಭದ್ರಾ ಬಲದಂಡೆ ನಾಲೆ ಸೀಳಿ ಕುಡಿಯುವ ನೀರು ಕೊಂಡೊಯ್ದಿರುವ ವಿಚಾರ ಮಲವಗೊಪ್ಪದ ಕಾಡಾ ಕಚೇರಿಯಲ್ಲಿ ನಡೆದ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಬಿಸಿ ಚರ್ಚೆಗೆ ಕಾರಣವಾಯಿತು.
ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಹರಿಹರ ಶಾಸಕ ಬಿ.ಪಿ.ಹರೀಶ್, ‘ಹರಿಹರ, ಹೊನ್ನಾಳಿ, ದಾವಣಗೆರೆ, ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕುಗಳ ಕೊನೆಯ ಭಾಗದ ಶೇ 35ರಷ್ಟು ಪ್ರದೇಶಕ್ಕೆ ಬಲದಂಡೆ ನಾಲೆಯ ನೀರು ಹರಿಯುತ್ತಿಲ್ಲ. ಕಾಡಾ ಪುಸ್ತಕದಲ್ಲಿ ಮಾತ್ರ ನೀರಿನ ಮಾಹಿತಿ ಇರುತ್ತದೆ. ಮೊದಲೇ ಬಲದಂಡೆ ನಾಲೆಯ ಕೊನೆಯ ಭಾಗದ ರೈತರು ನೀರು ಹರಿಯದೇ ಸಂಕಷ್ಟದಲ್ಲಿದ್ದಾರೆ. ಯೋಜನೆಯ ಜಾರಿ ವಿಚಾರದಲ್ಲಿ ಸ್ವತಃ ಆಡಳಿತ ಪಕ್ಷದ ಶಾಸಕರನ್ನೇ ಕತ್ತಲೆಯಲ್ಲಿ ಇಡಲಾಗಿದೆ. ಕಾಡಾ ಕೂಡ ಈ ಬಗ್ಗೆ ರೈತರಲ್ಲಿನ ಗೊಂದಲ ನಿವಾರಣೆಗೆ ಮುಂದಾಗಲಿಲ್ಲ. ಕಾಡಾ ನಮ್ಮ ಪರ ಹೋರಾಡಬೇಕಿತ್ತು. ರೈತರ ಪರ ಕಾಳಜಿ ತೋರಿಸಲಿಲ್ಲ. ಕೊನೆಯ ಭಾಗದವರು ಕಾಡಾ ಅಧ್ಯಕ್ಷರಾಗಿದ್ದರೆ ಈ ತೊಂದರೆ ಆಗುತ್ತಿರಲಿಲ್ಲ. ನಾಲೆ ಸೀಳಿರುವುದರಿಂದ ಈಗ ರೈತರು ಇನ್ನಷ್ಟು ಸಮಸ್ಯೆಗೆ ತುತ್ತಾಗಲಿದ್ದೇವೆ’ ಎಂದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ತರೀಕೆರೆ ಶಾಸಕ ಜಿ.ಎಚ್.ಶ್ರೀನಿವಾಸ್, ‘ನಮಗೆ ಕುಡಿಯಲು ನೀರು ಕೊಟ್ಟ ಕಾರಣಕ್ಕೆ ಕೊನೆಯ ಭಾಗದ ರೈತರಿಗೆ ಅನ್ಯಾಯವಾಗಿಲ್ಲ. ಬದಲಿಗೆ ದಾವಣಗೆರೆ ಜಿಲ್ಲೆಯಲ್ಲಿ ಶ್ರೀಮಂತರು ಕೆಲವರು ನೂರಾರು ಎಕರೆಯಲ್ಲಿ ತೋಟ ಮಾಡಿ ನಾಲೆಗೆ ಅಕ್ರಮವಾಗಿ ಪಂಪ್‌ಸೆಟ್ ಇಟ್ಟು ನೀರು ಕೊಂಡೊಯ್ಯುತ್ತಿದ್ದಾರೆ. ಮೊದಲು ಆ ಪಂಪ್‌ಸೆಟ್‌ಗಳನ್ನು ತೆಗೆಸಬೇಕು. ನಾಲೆಯ ಕೊನೆಯ ಭಾಗ ಸೇರಿದಂತೆ ಭದ್ರಾ ಬಲದಂಡೆ ನಾಲೆಯುದ್ದಕ್ಕೂ 25 ಕಡೆ ಕುಡಿಯುವ ನೀರಿನ ಯೋಜನೆಗಳಿಗೆ ನಾಲೆ ವಿಭಜಿಸಲಾಗಿದೆ. ಅದರಿಂದ ಆಗದ ತೊಂದರೆ ಈಗ ಹೇಗೆ ಆಗುತ್ತದೆ? ಜೊತೆಗೆ ಬಲದಂಡೆ ನಾಲೆಯ ಸೋರಿಕೆ ತಡೆದರೆ ಕೊನೆಯ ಭಾಗದವರಿಗೆ ನೀರು ಸಿಗುತ್ತದೆ. ನಮಗೆ 30 ಕ್ಯುಸೆಕ್ ಮಾತ್ರ ಅಲೊಕೇಶನ್ ಆಗಿದ್ದು, ಮುಂದಿನವರಿಗೆ ಒಂದು ನೂಲಿನಷ್ಟೂ ನೀರು ಕಡಿಮೆ ಆಗಲ್ಲ. ಸುಮ್ಮನೇ ಅಪಪ್ರಚಾರ ಸಲ್ಲದು’ ಎಂದರು.
ಬಲದಂಡೆ ನಾಲೆಯಿಂದ ಕುಡಿಯುವ ನೀರು ಕೊಂಡೊಯ್ದಿರುವ ಸ್ಥಳಕ್ಕೆ ಜಲಸಂಪನ್ಮೂಲ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ ನೀಡಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ. ಆ ವಿಚಾರದ ಚರ್ಚೆ ಈಗ ಮುಂದುವರಿಸುವುದು ಬೇಡ ಎಂದು ಸಭೆ ತೀರ್ಮಾನಿಸಿತು.
ಇಂದಿನಿಂದ ನೀರು ಹರಿವು:
ಲಕ್ಕವಳ್ಳಿಯ ಭದ್ರಾ ಜಲಾಶಯದಿಂದ ಬಲದಂಡೆ ನಾಲೆಗೆ ಜುಲೈ 22ರ ಮಧ್ಯಾಹ್ನದಿಂದ ನೀರು ಹರಿಸಲು ಐಸಿಸಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಮಾಹಿತಿ ನೀಡಿದ ಐಸಿಸಿ ಅಧ್ಯಕ್ಷರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಬಲದಂಡೆ ವ್ಯಾಪ್ತಿಯ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಗೂ ವಿಜಯನಗರ ಜಿಲ್ಲೆಯ ಹರಪನಹಳ್ಳಿ ಭಾಗದ 1,05,570 ಹೆಕ್ಟೇರ್ ಜಮೀನಿಗೆ ಮುಂದಿನ 120 ದಿನಗಳ ಕಾಲ ನೀರು ಹರಿಸಲಾಗುವುದು ಎಂದರು.
186 ಅಡಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಭದ್ರಾ ಜಲಾಶಯದಲ್ಲಿ ಸದ್ಯ 179.8 ಅಡಿ ನೀರಿನ ಸಂಗ್ರಹ ಇದೆ ಎಂದು ಸಭೆಗೆ ಮಾಹಿತಿ ನೀಡಿದರು.
ಭದ್ರಾವತಿ ತಾಲ್ಲೂಕಿನ ಕಾಗೆಕೋಡಮಗ್ಗೆ ನೀರು ಬಳಕೆದಾರರ ಸಂಘಕ್ಕೆ ರಾಷ್ಟ್ರಮಟ್ಟದಲ್ಲಿ ದ್ವಿತೀಯ ಬಹುಮಾನ ಬಂದಿದ್ದು, ಸಂಘದ ಕಾರ್ಯದರ್ಶಿ ರವಿಕುಮಾರ್ ಅವರನ್ನು ಸಚಿವ ಮಧು ಬಂಗಾರಪ್ಪ ಗೌರವಿಸಿದರು.
ನಾನೂ ರೈತನ ಮಗ. ಜವಾಬ್ದಾರಿ ವಿಚಾರ ನನಗೆ ಹೇಳುವುದು ಬೇಡ. ಕೊನೆಯ ಭಾಗದವರು ಸೇರಿದಂತೆ ಅಚ್ಚುಕಟ್ಟು ಪ್ರದೇಶದ ಎಲ್ಲ ರೈತರ ಹಿತ ಕಾಯಲು ಬದ್ಧ. ಕುಡಿಯುವ ನೀರು ಕೃಷಿ ಎರಡೂ ಆದ್ಯತೆ ಸಂಗತಿ ಆಗಿದ್ದು ಎಲ್ಲವನ್ನೂ ಸೂಕ್ಷ್ಮವಾಗಿ ನಿಭಾಯಿಸುತ್ತಿದ್ದೇವೆಡಾ.ಕೆ.ಪಿ.ಅಂಶುಮಂತ್ ಭದ್ರಾ ಕಾಡಾ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.