ADVERTISEMENT

ಮೂಡಿಗೆರೆ: 208ನೇ ಭೀಮಾ ಕೋರೆಗಾಂವ್ ವಿಜಯೋತ್ಸವ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 7:21 IST
Last Updated 26 ಜನವರಿ 2026, 7:21 IST
ಮೂಡಿಗೆರೆ ಪಟ್ಟಣದಲ್ಲಿ ಭೀಮಾ ಕೋರೆಗಾಂವ್ ಆಚರಣೆಯಲ್ಲಿ ಬಿಎಂಟಿಸಿ ಉಪಾಧ್ಯಕ್ಷ ನಿಕೇತ್ ರಾಜ್ ಮಾತನಾಡಿದರು
ಮೂಡಿಗೆರೆ ಪಟ್ಟಣದಲ್ಲಿ ಭೀಮಾ ಕೋರೆಗಾಂವ್ ಆಚರಣೆಯಲ್ಲಿ ಬಿಎಂಟಿಸಿ ಉಪಾಧ್ಯಕ್ಷ ನಿಕೇತ್ ರಾಜ್ ಮಾತನಾಡಿದರು   

ಮೂಡಿಗೆರೆ: ಸಮಾಜದಲ್ಲಿ ಸಾಮರಸ್ಯದಿಂದ ಬದುಕಬೇಕೆಂದರೆ ಪ್ರತಿಯೊಬ್ಬರೂ ಎಲ್ಲಾ ಜಾತಿ, ಧರ್ಮದ ಜನರನ್ನು ಗೌರವಿಸಬೇಕು. ಸ್ವಾಭಿಮಾನಕ್ಕೆ ಧಕ್ಕೆ, ಅಗೌರವ, ಅನ್ಯಾಯ ಎದುರಾದಾಗ ಅದನ್ನು ವಿರೋಧಿಸಬೇಕು ಎಂದು ಕರ್ನಾಟಕ ಸರ್ಕಾರದ ಬಿಎಂಟಿಸಿ ಉಪಾಧ್ಯಕ್ಷ ನಿಕೇತ್‌ರಾಜ್ ಮೌರ್ಯ ಹೇಳಿದರು.

ಭೀಮಾ ಕೋರೆಗಾಂವ್ ಆಚರಣೆ ಸಂಘದ ವತಿಯಿಂದ ಶುಕ್ರವಾರ ರಾತ್ರಿ ಪಟ್ಟಣದ ಅಡ್ಯಂತಾಯ ರಂಗ ಮಂದಿರದಲ್ಲಿ ಏರ್ಪಡಿಸಿದ್ದ 208ನೇ ಭೀಮಾ ಕೋರೆಗಾಂವ್ ವಿಜಯೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಈ ದೇಶದಲ್ಲಿ ಅವಿದ್ಯಾವಂತರು ಹಾಗೂ ಅಸಮಾನತೆಯಿಂದ ಕೂಡಿರಬೇಕೆಂಬ ವಿಕೃತ ಮನೋಭಾವ ಇರುವವರು ಮಾತ್ರ ಸಂವಿಧಾನ ಬದಲಾಯಿಸುತ್ತೇವೆಂದು ಹೇಳುತ್ತಿದ್ದಾರೆ. ಇಂತಹ ಮನಸ್ಥಿತಿಯಳ್ಳವರಿಂದ ಸಾಮರಸ್ಯ ಮೂಡಲು, ಸಮಾಜ ಬದಲಾಗಲು ಎಂದಿಗೂ ಸಾಧ್ಯವಿಲ್ಲ. ಬುದ್ಧ, ಬಸವಣ್ಣ, ಕನಕದಾಸ, ಬ್ರಹ್ಮಶ್ರೀ ನಾರಾಯಣ ಗುರು, ಕುವೆಂಪು ಇವರೆಲ್ಲರೂ ಅಸಮಾನತೆ, ಜಾತಿ ವ್ಯವಸ್ಥೆ ವಿರುದ್ಧ ಧ್ವನಿ ಎತ್ತಿದವರು. ಇಂತಹ ನೆಲದಲ್ಲಿ ಜಾತಿ, ಕೋಮುವಾದ ದೊಡ್ಡ ವಿಷವಾಗಿ ಬೆಳೆದು ನಿಂತಿದೆ. ಇದಕ್ಕೆ ಅಂತ್ಯ ಕಾಣಬೇಕೆಂದರೆ ಪ್ರತಿಯೊಬ್ಬರೂ ವಿದ್ಯಾವಂತರಾಗಬೇಕು’ ಎಂದು ಹೇಳಿದರು.

ADVERTISEMENT

ಡಿ.ಜೆ ಹಾಕಿ ಕುಣಿಯುವುದು ಹಾಗೂ ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಿಸುವುದರಿಂದ ಈ ಸಮಾಜ ಹಾಗೂ ದೇಶ ಬದಲಾವಣೆಯಾಗುವುದಿಲ್ಲ. ಡಾ. ಬಿ.ಆರ್. ಅಂಬೇಡ್ಕರ್ ಅವರು ಪ್ರತಿಮೆಯಲ್ಲಿಲ್ಲ, ಬದಲಾಗಿ ಪುಸ್ತಕದಲ್ಲಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಈಗಿನ ಯುವ ಪೀಳಿಗೆಗೆ ಬೇಡದ ವಿಚಾರವನ್ನು ತಲೆಗೆ ತುಂಬಲಾಗುತ್ತಿದೆ. ಎಲ್ಲರಿಗೂ ಸಮಾನ ಗೌರವ, ಹಕ್ಕು, ಅವಕಾಶಗಳು ದೊರಕಬೇಕು. ಜಾತಿ, ಧರ್ಮ, ಲಿಂಗ, ಭಾಷೆ, ವರ್ಗ, ಬೇಧ, ಭಾವ ಬಿಟ್ಟು ಸಮಾನತೆಯಿಂದ ಬದುಕಲು ಅವಕಾಶ ಮಾಡಿಕೊಟ್ಟ ಸಂವಿಧಾನವನ್ನು ಮಕ್ಕಳ ತಲೆಗೆ ತುಂಬಬೇಕು. ಆಗ ಮಾತ್ರ ದೇಶದಲ್ಲಿ ವಿಶ್ವಮಾನತೆ ಪರಿಕಲ್ಪನೆ ಮೂಡಲು ಸಾಧ್ಯ ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಮುಖಂಡರಾದ ಮೋಟಮ್ಮ, ಬಿ.ಬಿ. ನಿಂಗಯ್ಯ, ಎಂ.ಪಿ. ಕುಮಾರಸ್ವಾಮಿ ಮಾತನಾಡಿದರು. ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಡಿ.ಜೆ ಹಾಗೂ ವಿವಿಧ ಕಲಾ ತಂಡಗಳೊಂದಿಗೆ ಬೃಹತ್ ಮೆರವಣಿಗೆ ನಡೆಯಿತು. ಭೀಮಾ ಕೋರೆಗಾಂವ್ ಆಚರಣೆ ಸಂಘದ ಅಧ್ಯಕ್ಷ ಸುಂದ್ರೇಶ್ ಕನ್ನಾಪುರ ಅಧ್ಯಕ್ಷತೆ ವಹಿಸಿದ್ದರು.

ಡಿಎಸ್‌ಎಸ್ ಅಂಬೇಡ್ಕರ್ ಧ್ವನಿ ರಾಜ್ಯಾಧ್ಯಕ್ಷೆ ವಸಂತಕುಮಾರಿ, ಸಂಘದ ಗೌರವಾಧ್ಯಕ್ಷೆ ಸಾವಿತ್ರಿ, ಕಾರ್ಯದರ್ಶಿ ಸುಂದ್ರೇಶ್ ಹೊಯ್ಸಳಲು, ಪ.ಪಂ. ಮಾಜಿ ಸದಸ್ಯ ಹಂಝಾ, ಮುಖಂಡರಾದ ಶಿವ ಪ್ರಸಾದ್, ಅಂಗಡಿ ಚಂದ್ರು, ಮದ್ವರಾಜ್‌ಗೌಡ, ಪ್ರಸನ್ನ ಮರಗುಂದ, ಎಲ್.ಬಿ. ರಮೇಶ್, ಜಗದೀಶ್ ಕೆಳಗೂರು, ದೇವರಾಜ್, ಎಚ್. ಚಂದ್ರೇಶ್ ಇದ್ದರು.

ಮೂಡಿಗೆರೆ ಪಟ್ಟಣದಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವದಲ್ಲಿ ಭಾಗವಹಿಸಿದ್ದ ಜನತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.